More

    ಆರ್ಥಿಕ ನಷ್ಟ ಪರಿಹಾರ ಅವೈಜ್ಞಾನಿಕ

    ಕೋಲಾರ: ಕರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ತೋಟಗಾರಿಕೆ ಬೆಳೆಗಳಿಗೆ ಹೆಕ್ಟೇರ್‌ಗೆ 10,000 ರೂ. ಆರ್ಥಿಕ ನಷ್ಟ ಪರಿಹಾರ ಘೋಷಿಸಿರುವುದು ಅವೈಜ್ಞಾನಿಕ ಎಂದು ಶಾಸಕ ಕೆ.ಶ್ರೀನಿವಾಸಗೌಡ ಆರೋಪಿಸಿದರು. ತೋಟಗಾರಿಕೆ ಬೆಳೆ ಬೆಳೆಯಲು ಎಷ್ಟು ಖರ್ಚಾಗುತ್ತದೆ ಎಂಬುದರ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಟೊಮ್ಯಾಟೊ ಬೆಳೆಯಲು ಒಂದು ಎಕರೆಗೆ 1.50 ಲಕ್ಷ ರೂ, ಮಾವು ಬೆಳೆ ನಿರ್ವಹಣೆಗೆ 35,000 ರೂ.ವೆಚ್ಚ ತಗುಲುತ್ತದೆ. ಸಮಿತಿ ವರದಿಯನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದ ಸರ್ಕಾರ ಆತುರದಿಂದ ಹೆಕ್ಟೇರ್‌ಗೆ 10,000 ರೂ. ಘೋಷಿಸಿರುವುದು ನಾನೂ ಒಬ್ಬ ರೈತನಾಗಿ ನೊಂದುಕೊಳ್ಳಬೇಕಾಯಿತು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕರೊನಾ ಮೊದಲ ಅಲೆ ಹೊಡೆತದ ಸಂಕಷ್ಟದಿಂದ ರೈತರು ಸುಧಾರಣೆಯಾಗುವ ಮುನ್ನವೇ ಎರಡನೇ ಅಲೆ ಆರಂಭವಾಗಿ ಇಡೀ ಜನ ಸಮೂಹವೇ ತತ್ತರಿಸಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವೂ ರೈತರ ನೆರವಿಗೆ ಧಾವಿಸಿದೆ ಎಂದು ತೋರಿಸಿಕೊಳ್ಳಲು ಅವೈಜ್ಞಾನಿಕವಾಗಿ ಪರಿಹಾರ ಘೋಷಿಸಿದೆ, ರೈತರಿಗೆ ಲಾಭ ಬಿಟ್ಟು ಕನಿಷ್ಠ ಪಕ್ಷ ಹಾಕಿದ ಬಂಡವಾಳ ಕೈಗೆ ಸಿಗುವಷ್ಟಾದರೂ ಪರಿಹಾರ ನೀಡಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

    ಕರೊನಾ ಮೊದಲ ಅಲೆ ನಿಯಂತ್ರಣಕ್ಕೆ ಬರುವ ಸಂದರ್ಭದಲ್ಲಿ ಸರ್ಕಾರ, ಜನ ನಿರ್ಲಕ್ಷ್ಯವಹಿಸಿದ ಕಾರಣ ಈಗ ತೊಂದರೆ ಅನುಭವಿಸಬೇಕಾಗಿದೆ. ಕಳೆದ ವರ್ಷವೂ ಟೊಮ್ಯಾಟೊ, ಕೋಸು ಸೇರಿ ಇತರ ಬೆಳೆಗಳಿಗೆ ಬೆಲೆಯಿಲ್ಲದೆ ನಷ್ಟ ಅನುಭವಿಸುವಂತಾಯಿತು. ರೈತರ ಸಮಸ್ಯೆ ಏನು ಎಂಬುದು ಸರ್ಕಾರಕ್ಕೆ ಅರಿವಿಲ್ಲವೇ? ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುವ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೂ ಚರ್ಚಿಸಲಾಗುವುದು ಎಂದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಮುಖಂಡ ಬೆಳಮಾರನಹಳ್ಳಿ ಆನಂದ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts