More

    ಆರೋಗ್ಯ ಸೇವೆಗಾಗಿ ಅಲೆದಾಟ

    ಕಾರವಾರ: ವಿವಿಧ ತಾಂತ್ರಿಕ ಗೊಂದಲಗಳಿಂದಾಗಿ ಆಯುಷ್ಮಾನ್ ಭಾರತ ಹಾಗೂ ಆರೋಗ್ಯ ಕರ್ನಾಟಕ ಸೇವೆ ಪಡೆಯಲು ಬಡ ಕುಟುಂಬಗಳು ಪರದಾಡುವಂತಹ ಸ್ಥಿತಿ ಜಿಲ್ಲೆಯಲ್ಲಿದೆ.
    ಜಿಲ್ಲೆಯಲ್ಲಿ ಲಭ್ಯವಿಲ್ಲದ ಕೆಲ ಸೂಪರ್ ಸ್ಪೆಷಾಲಿಟಿ ಚಿಕಿತ್ಸಾ ಸೌಲಭ್ಯಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಲು ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸು ಪತ್ರ ಪಡೆದುಕೊಂಡು ಹೋಗಬೇಕಿದೆ. ಆದರೆ, ಆ ರೆಫರಲ್ ಲೆಟರ್ ನೀಡಲು ಕಾರವಾರ ಕ್ರಿಮ್ಸ್​ನ ವೈದ್ಯರು ಹಾಗೂ ಸಿಬ್ಬಂದಿ ಹಲವು ತಾಂತ್ರಿಕ ಸಮಸ್ಯೆಗಳು, ಸಬೂಬುಗಳನ್ನು ಹೇಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪತ್ರ ಪಡೆಯಲು ರೋಗಿಗಳ ಕುಟುಂಬದವರು ಉನ್ನತ ಅಧಿಕಾರಿಗಳ, ರಾಜಕಾರಣಿಗಳ ವಶೀಲಿ ಹಚ್ಚುವ ಸಂದರ್ಭ ಬಂದಿದೆ.
    ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಗಳು, ತಜ್ಞ ವೈದ್ಯರ ಕೊರತೆ ಇದೆ. ಪ್ರಮುಖವಾಗಿ ಹೃದ್ರೋಗ, ಕ್ಯಾನ್ಸರ್​ನಂಥ ರೋಗಗಳಿಗೆ ಚಿಕಿತ್ಸೆ ನೀಡಬಹುದಾದ ಯಂತ್ರೋಪಕರಣಗಳಿಲ್ಲ. ತಜ್ಞ ವೈದ್ಯರಿಲ್ಲ. ನರ ರೋಗ ತಜ್ಞರಿಲ್ಲ. ಇದರಿಂದ ಇಂಥ ಕೆಲವು ಆರೋಗ್ಯ ಸಮಸ್ಯೆಗಳಿಗೆ ಜಿಲ್ಲೆಯ ಜನ ಮಂಗಳೂರು, ಉಡುಪಿ, ಬೆಳಗಾವಿ, ಧಾರವಾಡ, ಶಿವಮೊಗ್ಗ ಜಿಲ್ಲೆಗಳಿಗೆ ತೆರಳುವುದು ಅನಿವಾರ್ಯವಾಗಿದೆ.
    ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಕುಟುಂಬಗಳಿಗೆ 5 ಲಕ್ಷ ರೂ.ವರೆಗೆ ಸಂಪೂರ್ಣ ಉಚಿತ ಮತ್ತು ಎಪಿಎಲ್ ಕುಟುಂಬಗಳಿಗೆ ಶೇ. 30 ರಷ್ಟು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು ಖರ್ಚು ಮಾಡಿದ ವೆಚ್ಚವನ್ನು ಸರ್ಕಾರ ಭರಿಸಿಕೊಡಲಿದೆ. ಆದರೆ, ಈ ಪ್ರಯೋಜನ ಪಡೆಯಲು ಬೇಕಾದ ದಾಖಲೆಗಳನ್ನು ಒದಗಿಸಲು ರೋಗಿಗಳು ಹಾಗೂ ಅವರ ಕುಟುಂಬದವರು ಸಾಕಷ್ಟು ಪರದಾಡಬೇಕಿದೆ.
    ಆಯುಷ್ಮಾನ್ ಯೋಜನೆಯಡಿ ಸಿಗುವ ಚಿಕಿತ್ಸೆಗಳ ಪಟ್ಟಿಯನ್ನು ಸರ್ಕಾರ ಮಾಡಿದೆ. ಅದಕ್ಕಾಗಿ ಕೆಲವು ಕೋಡ್ ಸಂಖ್ಯೆಯನ್ನೂ ನೀಡಿದೆ. ಜಿಲ್ಲಾ ಆಸ್ಪತ್ರೆಗಳ ಸಂಬಂಧಪಟ್ಟ ತಜ್ಞ ವೈದ್ಯರು ರೋಗಿಯನ್ನು ತಪಾಸಣೆ ಮಾಡಿ, ತಮ್ಮ ಆಸ್ಪತ್ರೆಯಲ್ಲಿ ಈ ಚಿಕಿತ್ಸೆ ಲಭ್ಯವಿಲ್ಲ ಎಂಬ ಕಾರಣ ನೀಡಿ, ಉನ್ನತ ಕೇಂದ್ರಕ್ಕೆ ಅಥವಾ ಖಾಸಗಿ ಆಸ್ಪತ್ರೆಗೆ ಶಿಫಾರಸು ಪತ್ರ ನೀಡಬೇಕು. ಪತ್ರದಲ್ಲಿ ನೀಡಬೇಕಾದ ಚಿಕಿತ್ಸೆಯ ಕೋಡ್ ಸಂಖ್ಯೆಯನ್ನು ನಮೂದಿಸಬೇಕಿದೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಆ ಶಿಫಾರಸು ಪತ್ರ ಪಡೆಯಲು ಬಂದ ರೋಗಿಗಳಿಗೆ ಅಥವಾ ಅವರ ಕುಟುಂಬದವರಿಗೆ ಕೋಡ್ ಸರಿ ಇಲ್ಲ. ಈ ರೋಗಕ್ಕೆ ಶಿಫಾರಸು ಪತ್ರ ನೀಡಲು ಬರುವುದಿಲ್ಲ ಮುಂತಾದ ಕಾರಣಗಳನ್ನು ನೀಡಿ ಶಿಫಾರಸು ಪತ್ರ ನೀಡದೇ ಅಲೆದಾಡಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳನ್ನೂ ಇಲ್ಲಿಗೇ ಕರೆತರಬೇಕು. ಇಲ್ಲದಿದ್ದಲ್ಲಿ ಶಿಫಾರಸು ಪತ್ರ ನೀಡುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ ಎಂಬುದು ಸಾಕಷ್ಟು ರೋಗಿಗಳ ಗೋಳು. ಇದೇ ಶಿಫಾರಸು ಪತ್ರದ ಸಲುವಾಗಿ ಹಲವು ರೋಗಿಗಳು ಜಿಲ್ಲೆಯ ವಿವಿಧ ಭಾಗಗಳಿಂದ ಕಾರವಾರಕ್ಕೆ ಅಲೆಯುವ ಪರಿಸ್ಥಿತಿ ಇದೆ.

    ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಯೋಜನೆಯ ಸೌಲಭ್ಯ ನೀಡುವ ವಿಚಾರದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿರುವುದು ನಿಜ. ಅದನ್ನು ಬಗೆಹರಿಸಲು ಜಿಪಂ ಸಿಇಒ, ಡಿಎಚ್​ಒ ಹಾಗೂ ಕ್ರಿಮ್್ಸ ಪ್ರಮುಖರ ಸಭೆ ನಡೆಸಲಾಗುತ್ತದೆ.
    | ಮುಲ್ಲೈ ಮುಗಿಲನ್ ಎಂ.ಪಿ. ಜಿಲ್ಲಾಧಿಕಾರಿ, ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts