More

    ಆಯುಷ್ಮಾನ್ ಭಾರತಕ್ಕೆ ಹೆಬ್ಬೆಟ್ಟು ಬಿಕ್ಕಟ್ಟು!

    ಹುಬ್ಬಳ್ಳಿ: ನಾಲ್ಕು ತಿಂಗಳಿನಿಂದ ಧಾರವಾಡ ಜಿಲ್ಲೆಯ ಕೆಲವೆಡೆ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಕಾರ್ಡ್ ವಿತರಣೆಗೆ ‘ಥಂಬ್’ ಕಂಟಕ ಎದುರಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಡ್ ವಿತರಿಸಲು ಈ ಮೊದಲು ಯೂಸರ್ ಐಡಿ ಮತ್ತು ಪಾಸ್​ವರ್ಡ್ ನೀಡಿತ್ತು. ಈಗ ಕಾರ್ಡ್ ವಿತರಿಸುವವರ ಮತ್ತು ಪಡೆಯುವವರ ಹೆಬ್ಬೆರಳ ಗುರುತು (ಥಂಬ್ ಇಂಪ್ರೆಷನ್) ಕಡ್ಡಾಯ ಗೊಳಿಸಿದ್ದು, ಅನುಷ್ಠಾನ ಹಳ್ಳ ಹಿಡಿದಿದೆ.

    ಧಾರವಾಡ ಜಿಲ್ಲೆಯ 18 ಖಾಸಗಿ ಆಸ್ಪತ್ರೆ, 3 ತಾಲೂಕು ಹಾಗೂ 52 ಪ್ರಾಥಮಿಕ ಆರೋಗ್ಯ ಕೇಂದ್ರ, ಡಿಮ್ಹಾನ್ಸ್, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕಿಮ್್ಸ) ‘ಆರೋಗ್ಯ ಕರ್ನಾಟಕ’ ಕಾರ್ಡ್ ವಿತರಣೆ ಹಾಗೂ ಶಸ್ತ್ರ ಚಿಕಿತ್ಸೆ ವ್ಯವಸ್ಥೆಯಿದೆ. ಅಲ್ಲದೇ ಹುಬ್ಬಳ್ಳಿ-ಧಾರವಾಡ ಒನ್ ಕೇಂದ್ರ ಹಾಗೂ ನೆಮ್ಮದಿ ಕೇಂದ್ರಗಳಲ್ಲಿ ‘ಆರೋಗ್ಯ ಕರ್ನಾಟಕ’ ಕಾರ್ಡ್ ವಿತರಿಸಲು ಸೂಚಿಸಲಾಗಿದೆ. ಆದರೆ, 4 ತಿಂಗಳಿಂದ ಸರ್ವರ್ ಹಾಗೂ ಸಿಬ್ಬಂದಿಯ ಬೆರಳ ಗುರುತು ಪಡೆಯುವಿಕೆ ವಿಳಂಬದಿಂದ ಕಾರ್ಡ್ ವಿತರಣೆಗೆ ಸಮಸ್ಯೆಯಾಗಿದೆ. ಹಾಗಾಗಿ ತೀವ್ರ ತರಹದ ರೋಗಿಗಳು ಶಸ್ತ್ರ ಚಿಕಿತ್ಸೆಗೊಳಗಾಗದೇ ತೊಂದರೆ ಅನುಭವಿಸುವಂತಾಗಿದೆ.

    ಸಿಬ್ಬಂದಿ ಬದಲಾದರೆ ಬೆರಳ ಗುರುತನ್ನು ಕಂಪ್ಯೂಟರ್ ತಿರಸ್ಕರಿಸುತ್ತದೆ. ಇದರಿಂದ ರೋಗಿಗಳ ಆಧಾರ್ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ ಪಡೆದು ‘ಆರೋಗ್ಯ ಕರ್ನಾಟಕ’ ಕಾರ್ಡ್ ವಿತರಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಥ 7-8 ಕೇಂದ್ರಗಳನ್ನು ಗುರುತಿಸಿದೆ. ಆದರೆ, ಲಗುಬಗೆಯಿಂದ ಸಮಸ್ಯೆ ನಿವಾರಣೆಗೆ ಶ್ರಮಿಸುತ್ತಿಲ್ಲ. ಹಾಗಾಗಿ ಯಾವ ಆಸ್ಪತ್ರೆಗೆ ತೆರಳಿ ಕಾರ್ಡ್ ಹಾಗೂ ಚಿಕಿತ್ಸೆ ಪಡೆಯಬೇಕೆಂಬುದು ಗೊತ್ತಾಗದೇ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ.

    3 ಲಕ್ಷ 43 ಸಾವಿರ ಕಾರ್ಡ್ ವಿತರಣೆ: 2018ರ ಅಕ್ಟೋಬರ್​ನಿಂದ 2019ರ, ಡಿ. 31ರವರೆಗೆ 3,43,594 ಕಾರ್ಡ್ ವಿತರಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ 9,988 ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ನೀಡಲು ಉದ್ದೇಶಿಸಿದ್ದು, 8,402 ಜನರು ಚಿಕಿತ್ಸೆ ಪಡೆದಿದ್ದಾರೆ. ಇವರಿಗೆ 37 ಕೋಟಿ 89 ಲಕ್ಷ ರೂ.ನಲ್ಲಿ 16 ಕೋಟಿ 53 ಲಕ್ಷ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ 12,216 ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಉದ್ದೇಶಿಸಿದ್ದು, 11,977 ಜನರು ಚಿಕಿತ್ಸೆ ಪಡೆದಿದ್ದಾರೆ. 3 ಕೋಟಿ 1ಲಕ್ಷ ರೂ.ನಲ್ಲಿ 1 ಕೋಟಿ 18 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ.

    ಸಿಬ್ಬಂದಿ ಹಾಗೂ ರೋಗಿಗಳ ಬೆರಳ ಗುರುತು ಪಡೆಯುವಿಕೆಯ ಸಮಸ್ಯೆ ಇಲ್ಲ. ಅದನ್ನು ಮಾಹಿತಿ ತಂತ್ರಜ್ಞಾನ ವಿಭಾಗ ನಿರ್ವಹಿಸುತ್ತಿದೆ. ಕೆಲ ಸಿಬ್ಬಂದಿಯ ಬೆರಳಚ್ಚು ಹಾಗೂ ಯೂಸರ್ ಐಡಿ, ಪಾಸ್​ವರ್ಡ್ ಮಿಸ್​ವ್ಯಾಚ್ ಆಗುತ್ತಿರುವುದರಿಂದ ಸಮಸ್ಯೆಯಾಗಿದೆ. ಆದಷ್ಟು ಬೇಗ ಬಗೆಹರಿಸುತ್ತೇವೆ.
    |ಡಾ. ಶಶಿ ಪಾಟೀಲ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ವಿಭಾಗದ ಜಿಲ್ಲಾ ಸಂಯೋಜಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts