More

    ಆಯನೂರು: ಮಾರಿಕಾಂಬಾ, ದುರ್ಗಮ್ಮ ದೇವಿಗೆ ಜಾತ್ರೆಗೆ ವಿಧ್ಯುಕ್ತ ಚಾಲನೆ

    ಆಯನೂರು: ಮಾರಿಕಾಂಬಾ ದೇವಿ ಮತ್ತು ದುರ್ಗಾದೇವಿ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ವಿಧ್ಯುಕ್ತವಾಗಿ ಚಾಲನೆ ದೊರೆಯಿತು. ಬೆಳಗ್ಗೆ ಅಕ್ಕಸಾಲಿಗರು ನೀಡುವ ತಾಳಿ, ಕಾಲುಂಗುರ ಹಾಗೂ ಒಡವೆಗಳನ್ನು ದೇವಿಗೆ ಅರ್ಪಿಸಲಾಯಿತು. ನಂತರ ತವರು ಮನೆಯಲ್ಲಿ (ಬ್ರಾಹ್ಮಣರಿಂದ) ಪೂಜೆ ನೆರವೇರಿತು.
    ಮುಂಜಾನೆಯಿಂದಲೇ ಗಂಗೆ ಪೂಜೆ, ಗಣಪತಿ ಪೂಜೆ, ದೇವನಾಂದಿ, ಶಾಂತಿ ಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸೋಮವಾರ ರಾತ್ರಿ 10 ಗಂಟೆ ನಂತರ ತವರು ಮನೆಯಿಂದ ದೇವಿಯ ಮೂರ್ತಿಯನ್ನು ವಿಜೃಂಭಣೆಯಿಂದ ರಾಜಬೀದಿ ಉತ್ಸವದಲ್ಲಿ ತಂದು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಯಿತು.
    ಬುಧವಾರ ಬೆಳಗ್ಗೆ 9ರ ನಂತರ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಹಾಗೂ ಪೂಜೆಗೆ ಅವಕಾಶ ಕಲ್ಪಿಸಿಕೊಡಲಾಗುವುದು. ಇದಕ್ಕೂ ಮೊದಲು ಚೆನ್ನಳ್ಳಿಯ ಉಪ್ಪಾರರಿಂದ ಮೊದಲ ಬಲಿ ಪೂಜೆ ಹಾಗೂ ಅಗಸ ಮನೆತನದವರಿಂದ ಪೂಜೆ ಸಲ್ಲಿಸಲಾಗುವುದು. ಸಂಜೆ 4 ಗಂಟೆ ನಂತರ ಪೋತರಾಜನಿಂದ ಗಾವುಗುರಿ ಹಿಡಿಯುವ ಕಾರ್ಯಕ್ರಮವಿದೆ. ಗ್ರಾಮದಲ್ಲಿ 8 ದಿನಗಳ ಹಿಂದೆ ಹುಲುಸು ಹಾಕಲಾಗಿರುತ್ತದೆ. 6 ಗಂಟೆ ನಂತರ ಆ ಹುಲುಸನ್ನು ಆಸಾದಿ ಎಂಬುವರು ರಂಗವನ್ನು ಹಾಕಿ ಒಡೆಯುವರು. ಒಡೆದ ಹುಲುಸನ್ನು ಗ್ರಾಮಸ್ಥರಿಗೆ ನೀಡುವರು. ಅಲ್ಲಿಯವರೆಗೂ ಯಾರೂ ಅದನ್ನು ತೆಗೆದುಕೊಂಡು ಹೋಗುವಂತಿಲ್ಲ. ಇದನ್ನು ಮನೆಯಲ್ಲಿ ಹಾಗೂ ಗದ್ದೆಯಲ್ಲಿ ಹಾಕುವುದರಿಂದ ಒಳ್ಳೆಯ ಫಸಲು ಬರುವುದು ಎಂಬ ನಂಬಿಕೆ ಗ್ರಾಮಸ್ಥರದು. ಇದನ್ನು ಯಾರೂ ಕೂಡ ಗಡಿಯಾಚೆ ತೆಗೆದುಕೊಂಡು ಹೋಗುವಂತಿಲ್ಲ.
    ದೇವಿಯು ಗಡಿ ಮಾರಮ್ಮ ಆಗಿರುವುದರಿಂದ 5 ದಿನಗಳ ಕಾಲ ಸಾರ ಹಾಕಲಾಗಿರುತ್ತದೆ. ಈ ಸಂದರ್ಭ ಯಾರೂ ಸಹ ಆಹಾರ ಪದಾರ್ಥಗಳಾದ ಅಕ್ಕಿ, ತೆಂಗು, ಹಾಲು, ನೀರು ಇತರೆ ಸಾಮಗ್ರಿಯನ್ನು ಗ್ರಾಮದಿಂದ ಗಡಿಯಾಚೆ ತರುವಂತಿಲ್ಲ. ಹೀಗಾಗಿ ಹಾಲಿನ ಡೇರಿಯನ್ನು 5 ದಿನಗಳಿಂದ ಬಂದ್ ಮಾಡಲಾಗಿದೆ. ಗ್ರಾಮಸ್ಥರು ಹಾಲನ್ನು ಗಡಿ ಒಳಗಡೆಯೇ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ವ್ಯಾಪಾರಸ್ಥರು ತಂದ ಚಾಪೆ, ಕಸಬರಿಕೆ, ಪಾತ್ರೆ ಇನ್ನಿತರೆ ವಸ್ತುಗಳನ್ನು ಗಡಿಯಲ್ಲೇ ಇಟ್ಟು ಹೋಗುತ್ತಿದ್ದಾರೆ ಎಂದು ಗ್ರಾಮಸ್ಥ ರೇಣುಕಪ್ಪ ಹೇಳಿದರು.
    ಗುರುವಾರ ರಾತ್ರಿ ದುರ್ಗಮ್ಮನ ವೃತ್ತದಲ್ಲಿ ಜಾತ್ರೆ ಅಂಗವಾಗಿ ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜ.24 ಮತ್ತು 25ರಂದು ದುರ್ಗಮ್ಮನ ಜಾತ್ರೆ ಜರುಗಲಿದೆ.
    ಕುಸ್ತಿ ಅಖಾಡ ಸಜ್ಜು:
    ಜ.19ರಿಂದ 21ರವರೆಗೆ 3 ದಿನಗಳ ಕಾಲ ಕುಸ್ತಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಹರಿಯಾಣ, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ವಿವಿಧ ಭಾಗಗಳ ಪೈಲ್ವಾನರು ಪಾಲ್ಗೊಳ್ಳಲಿದ್ದಾರೆ. ಕುಸ್ತಿಯಲ್ಲಿ ಗೆದ್ದವರಿಗೆ 1 ಕೆ.ಜಿ. ಬೆಳ್ಳಿಗದೆ ನೀಡಲಾಗುವುದು. 2ನೇ ಸ್ಥಾನ ಪಡೆದವರಿಗೆ ಅರ್ಧ ಕೆ.ಜಿ., 3ನೇ ಸ್ಥಾನ ಪಡೆದವರಿಗೆ 1/4 ಕೆ.ಜಿ. ಬೆಳ್ಳಿ ಗದೆ ಬಹುಮಾನ ನೀಡಲಾಗುವುದು. 1 ತೋಲ ಬಂಗಾರದ ಉಂಗುರ ಜತೆಗೆ ವಿವಿಧ ಬಹುಮಾನ ಇಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts