More

    ಆನ್​ಲೈನ್​ನಲ್ಲಿ ಆಸ್ತಿ ತೆರಿಗೆ ಪಾವತಿ

    ಹುಬ್ಬಳ್ಳಿ: ಅವಳಿ ನಗರದ ಆಸ್ತಿಧಾರಕರು ಪರಿಷ್ಕೃತ ದರದಂತೆ ಮೇ 25ರಿಂದ ಆಸ್ತಿ ತೆರಿಗೆಯನ್ನು ಆನ್​ಲೈನ್​ನಲ್ಲಿ ಪಾವತಿಸಬಹುದಾಗಿದೆ.

    ಪರಿಷ್ಕೃತ ದರವನ್ನು ತಂತ್ರಾಂಶದಲ್ಲಿ ಅಡಕ ಮಾಡಬೇಕಾದ ಹಿನ್ನೆಲೆಯಲ್ಲಿ ತೆರಿಗೆ ಪಾವತಿ ಪ್ರಕ್ರಿಯೆಯನ್ನು ತಡೆ ಹಿಡಿಯಲಾಗಿತ್ತು. ಹಾಗಾಗಿ ಕಳೆದ ಕೆಲವು ದಿನಗಳಿಂದ ತೆರಿಗೆ ಪಾವತಿಸಲು ನಾಗರಿಕರು ಪರದಾಡಿದ್ದರು. ಇದೀಗ ಹೊಸ ದರದಂತೆ ತೆರಿಗೆ ಪಾವತಿ ಮಾಡಬಹುದಾಗಿದೆ.

    ಹು-ಧಾ ಒನ್ ಕೇಂದ್ರಗಳಲ್ಲಿ, ವಲಯ ಕಚೇರಿಗಳಲ್ಲಿ, ಬ್ಯಾಂಕ್​ಗಳಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಬಹುದು ಎಂದು ಪಾಲಿಕೆ ತಿಳಿಸಿದೆ.

    ಕಳೆದ ಸಾಲಿಗಿಂತ 2020-21ನೇ ಸಾಲಿನಲ್ಲಿ ಆಸ್ತಿ ತೆರಿಗೆ ದರವನ್ನು ವಾಸದ ಕಟ್ಟಡಗಳ ಮೇಲೆ ಶೇ. 15ರಷ್ಟು, ವಾಣಿಜ್ಯ ಕಟ್ಟಡಗಳಿಗೆ ಶೇ. 20, ವಾಸೇತರ ಮತ್ತು ವಾಣಿಜ್ಯಕ್ಕಲ್ಲದ ಕಟ್ಟಡಗಳಿಗೆ ಶೇ. 20 ಹಾಗೂ ಎಲ್ಲ ಸ್ವರೂಪದ ಖುಲ್ಲಾ ಜಾಗಗಳಿಗೆ ಶೇ. 25ರಷ್ಟು ಏರಿಕೆ ಮಾಡಲಾಗಿದೆ.

    ಇನ್ನೂ ಸರಿಯಾಗಿಲ್ಲ: ಕಟ್ಟಡ ನಿರ್ವಣಕ್ಕೆಪರವಾನಗಿ ನೀಡುವ ಆನ್​ಲೈನ್ ವ್ಯವಸ್ಥೆ ಇನ್ನೂ ಸರಿಯಾಗಿಲ್ಲ. 2 ತಿಂಗಳಿಂದಲೇ ಈ ವ್ಯವಸ್ಥೆ ಸ್ಥಗಿತಗೊಂಡಿದೆ. ಜತೆಗೆ ಸಿವಿಲ್ ಇಂಜಿನಿಯರ್​ಗಳ ಲೈಸೆನ್ಸ್ ಸಹ ನವೀಕರಣಗೊಳ್ಳುತ್ತಿಲ್ಲ. ರಾಜ್ಯಾದ್ಯಂತ ನಿರ್ವಣ-2 ತಂತ್ರಾಂಶದಲ್ಲಿ ಆನ್​ಲೈನ್​ನಲ್ಲಿ ಕಟ್ಟಡ ನಿರ್ವಣಕ್ಕೆ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಬೇಕಿತ್ತು. ಈ ತಂತ್ರಾಂಶವನ್ನು ನಿರ್ವಹಿಸುತ್ತಿರುವ ಐಡಿಬಿಐ ಟೆಕ್ನಾಲಜೀಸ್ ಇಂಡಿಯಾ ಪ್ರೖೆವೇಟ್ ಲಿಮಿಟೆಡ್ ಎಂಬ ಸಾಫ್ಟ್​ವೇರ್ ಕಂಪನಿ ಹಾಗೂ ರಾಜ್ಯ ಸರ್ಕಾರ ಟೌನ್ ಆಂಡ್ ಕಂಟ್ರಿ ಪ್ಲಾನಿಂಗ್ ಇಲಾಖೆ ನಡುವೆ ಹಗ್ಗಜಗ್ಗಾಟ ನಡೆದಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.

    ‘ಕಟ್ಟಡ ನಿರ್ವಣಕ್ಕೆ ಪರವಾನಗಿ ನೀಡುವ ಆನ್​ಲೈನ್ ವ್ಯವಸ್ಥೆ ಇಂದಿಗೂ ಸರಿಯಾಗಿಲ್ಲ. ಸೋಮವಾರದವರೆಗೆ ಸರಿಯಾಗಬಹುದು. ಆಗದಿದ್ದರೆ ಮಂಗಳವಾರ ಬದಲಿ ವ್ಯವಸ್ಥೆಯನ್ನು ಕೇಳುತ್ತೇವೆ’ ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ತಿಳಿಸಿದ್ದಾರೆ.

    ಮಳಿಗೆ ಬಾಡಿಗೆ ಕಡಿತಕ್ಕೆ ಆಗ್ರಹ: ಲಾಕ್​ಡೌನ್ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದಲ್ಲಿನ 31 ಮಳಿಗೆಗಳ ವ್ಯಾಪಾರಸ್ಥರು ತೀವ್ರ ನಷ್ಟ ಅನುಭವಿಸಿದ್ದಾರೆ. ಜತೆಗೆ ಬಸ್ ನಿಲ್ದಾಣದಿಂದ ಕೆಲವು ಸಾರಿಗೆ ಬಸ್​ಗಳ ಕಾರ್ಯಾಚರಣೆಯನ್ನು ಸ್ಥಳಾಂತರಿಸಿರುವುದರಿಂದ ವ್ಯಾಪಾರ- ವಹಿವಾಟು ಇಲ್ಲದೆ ಮಳಿಗೆದಾರರು ಸಂಕಷ್ಟದಲ್ಲಿದ್ದು, ಮಳಿಗೆಗಳ ಮಾಸಿಕ ಬಾಡಿಗೆಯನ್ನು ಕಡಿಮೆ ಮಾಡುವಂತೆ ಶಾಸಕ ಪ್ರಸಾದ ಅಬ್ಬಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಲ್ಲಿನ ಮಳಿಗೆಗಳ ಮಾಸಿಕ ಬಾಡಿಗೆಯು 60 ಸಾವಿರದಿಂದ 1.5 ಲಕ್ಷ ರೂ. ಇದೆ. ಮಾರ್ಚ್​ಗಿಂತ ಮೊದಲು ಹಳೇ ಬಸ್ ನಿಲ್ದಾಣದಿಂದ 3600 ಬಸ್ ಸಂಚರಿಸುತ್ತಿದ್ದು, ಪ್ರಯಾಣಿಕರ ಸಂಚಾರವೂ ಹೆಚ್ಚಿತ್ತು. ಇದರಿಂದ ವ್ಯಾಪಾರ- ವಹಿವಾಟು ಉತ್ತಮವಾಗಿತ್ತು. ಆದರೆ, ಇದೀಗ ಅನೇಕ ವೇಗದೂತ ಬಸ್​ಗಳ ಕಾರ್ಯಾಚರಣೆಯನ್ನು ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣ ಹಾಗೂ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಿದ್ದು, 50 ಕಿ.ಮೀ. ವ್ಯಾಪ್ತಿಯೊಳಗಿನ ಗ್ರಾಮಾಂತರ ಸಾರಿಗೆ, ನಗರ ಸಾರಿಗೆ ಬಸ್​ಗಳು ಮಾತ್ರ ಹಳೇ ಬಸ್ ನಿಲ್ದಾಣದಿಂದ ಸಂಚರಿಸುತ್ತಿವೆ. ಇದರಿಂದ ವಹಿವಾಟು ಕಡಿಮೆಯಾಗಿದೆ. ಲಾಕ್​ಡೌನ್ ಸಡಿಲಿಕೆಯಿಂದ ಬಸ್ ಸಂಚಾರ ಆರಂಭವಾಗಿದ್ದರೂ ಜನ ಸಂಚಾರ ಎಂದಿನಂತಿಲ್ಲ, ಇದರಿಂದ ಮಳಿಗೆದಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts