More

    ಆನೆಗಳ ಆಹಾರಕ್ಕಾಗಿ ಅರಣ್ಯ ಇಲಾಖೆ ಪರದಾಟ!

    ಬೆಳಗಾವಿ: ನಗರದ ಗಾಲ್ಫ್​ ಮೈದಾನದ ಪೊದೆಯಲ್ಲಿ ಅವಿತುಕೊಂಡಿರುವ ಚಿರತೆಗಾಗಿ ಆನೆಗಳ ಬಳಿಸಿ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆಯು ಆನೆಗಳ ಆಹಾರಕ್ಕಾಗಿ ಪರದಾಡುತ್ತಿದೆ. ಆನೆಗಳ ಮೇವು ಖರೀದಿಸಲು ಅರಣ್ಯ ಇಲಾಖೆಗೆ ಹಣದ ಅಭಾವ ಎದುರಾಗಿದೆ.

    ಹೌದು. ಬೆಳಗಾವಿ ನಗರದಲ್ಲಿನ ಚಿರತೆ ಪತ್ತೆಗಾಗಿ ಶಿವಮೊಗ್ಗ ಜಿಲ್ಲೆಯ ಸಕ್ರೇಬೈಲ್​ ಶಿಬಿರದಿಂದ ಬಂದಿರುವ ಎರಡು ಆನೆಗಳ ಆಹಾರಕ್ಕಾಗಿ ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ರೈತ ರಾಜು ಕಣಬರಕರ್​ ಅವರ 2 ಗುಂಟೆ ಜಮೀನಲ್ಲಿ ಬೆಳೆದು ನಿಂತಿದ್ದ 3ಟನ್​ ನಷ್ಟು ಕಬ್ಬನ್ನು ಅರಣ್ಯ ಇಲಾಖೆ ಸಿಬ್ಬಂದಿ ಹೇಳದೇ ಕೇಳದೆ ತಂದಿದ್ದಾರೆ.

    ಮತ್ತೊಂದೆಡೆ ಆನೆಗಳ ಆಹಾರಕ್ಕಾಗಿ ಎನ್​ಜಿಒಗಳಿಂದ ಬಾಳೆಹಣ್ಣು, ಮೇವು ಸಂಗ್ರಹಿಸುತ್ತಿದ್ದಾರೆ. ಇದು ನಾನಾ ರೀತಿಯ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
    ನಗರದ ಜನವಸತಿ ಪ್ರದೇಶಗಳಿಗೆ ನುಗ್ಗಿರುವ ಚಿರತೆ ಪತ್ತೆಗಾಗಿ ಅರಣ್ಯ ಇಲಾಖೆಯಿಂದ 20 ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದೆ. ಆದರೆ, ಚಿರತೆ ಸೆರೆ ಹಿಡಿಯಲು ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯು ಚಿರತೆ ಪತ್ತೆ ಕಾರ್ಯಾಚರಣೆ ಹೆಸರಿನಲ್ಲಿ ಎನ್​ಜಿಒಗಳಿಂದ ನಾನಾ ರೀತಿಯ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಎನ್​ಜಿಒ ಸದಸ್ಯರನ್ನು ತಮ್ಮ ಕಾರ್ಯಾಚರಣೆಯ ಚಿತ್ರೀಕರಣ ಮಾಡಿಕೊಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

    ಚಿರತೆ ಪತ್ತೆ ಕಾರ್ಯಚರಣೆ ನಡೆಸಲು ಅರಣ್ಯ ಇಲಾಖೆಗೆ ಹಣದ ಅಭಾವ ಎದುರಾಗಿದ್ದರಿಂದ ಎನ್​ಜಿಒಗಳಿಂದ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕೃಷಿ ಜಮೀನುಗಳ ರೈತರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಕಬ್ಬು ಕಳೆದುಕೊಂಡಿರುವ ರೈತನಿಗೆ ಪರಿಹಾರ ನೀಡಬೇಕು. ಎನ್​ಜಿಒಗಳಿಂದ ಸೌಲಭ್ಯ ಪಡೆದುಕೊಳ್ಳುತ್ತಿರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ನಿತ್ಯ ಟನ್​ಗಟ್ಟಲೇ ಆಹಾರ ಬೇಕು ಚಿರತೆ ಶೋಧ ಕಾರ್ಯಚರಣೆಗಾಗಿ ಶಿವಮೊಗ್ಗ ಜಿಲ್ಲೆಯ ಸಕ್ರೇಬೈಲ್​ ಶಿಬಿರದಿಂದ ಕರೆ ತಂದಿರುವ ಎರಡು ಆನೆಗಳಿಗೆ ನಿತ್ಯ ಟನ್​ಗಟ್ಟಲೇ ಆಹಾರಬೇಕು. ಹಣ್ಣು, ಹಸಿ ಮೇವು ಎಷ್ಟಾದರೂ ಸಾಕಾಗುವುದಿಲ್ಲ. ಕಬ್ಬು ಹಾಕಿದರೆ ಆನೆಗಳಿಗೆ ಬೇಗ ಹೊಟ್ಟೆ ತುಂಬುತ್ತದೆ. ಹಾಗಾಗಿಯೇ ಆನೆಗಳ ಆಹಾರಕ್ಕಾಗಿ ಕಬ್ಬು ತರಲಾಗುತ್ತಿದೆ.

    ಚಿರತೆ ಕಾರ್ಯಾಚರಣೆಗಾಗಿ ಕರೆ ತಂದಿರುವ ಆನೆಗಳ ಆಹಾರಕ್ಕಾಗಿ ಯಾರು ಬಳಿ ಕೈ ಚಾಚಿಲ್ಲ. ಕಬ್ಬು ನೀಡಿರುವ ರೈತನಿಗೆ ಪರಿಹಾರ ನೀಡಲಾಗುವುದು. ಅಲ್ಲದೆ, ರೈತರಿಗೆ ಹೇಳದೇ ಕೇಳದೇ ಕಬ್ಬು ಕಟಾವು ಮಾಡಿರುವ ಮತ್ತು ಎನ್​ಜಿಒಗಳ ಕಡೆಯಿಂದ ಅಹಾರ ಸಂಗ್ರಹಿಸಿರುವ ಕುರಿತು ಡಿಎಫ್​ಒಗೆ ತನಿಖೆ ನಡೆಸಲು ಸೂಚನೆ ನೀಡಿದ್ದೇನೆ. ಚಿರತೆ ಪತ್ತೆ ಕಾರ್ಯಾಚರಣೆಗೆ ಹಣ ಕೊರತೆ ಇಲ್ಲ.
    | ಮಂಜುನಾಥ ಚವ್ಹಾಣ, ಸಿಸಿಎಫ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts