More

    ಆಧ್ಯಾತ್ಮಿಕ ಮೌಲ್ಯ ಪ್ರಸಾರ ಅತ್ಯಗತ್ಯ – ಡಾ. ಡಾ. ಬಸವರಾಜ ರಾಜಋಷಿ ಆಶಯ – ಈಶ್ವರೀಯ ವಿಶ್ವವಿದ್ಯಾಲಯ ಪ್ರವಚನ ಆರಂಭ

    ದಾವಣಗೆರೆ: ಶರಣ ಸಾಹಿತ್ಯದ ಆಧ್ಯಾತ್ಮಿಕ ಮೌಲ್ಯಗಳ ಮೂಲಕ ಜಾಗೃತ ಸಮಾಜ ಕಟ್ಟುವತ್ತ ಧಾರ್ಮಿಕ ವರ್ಗದ ಶಾಖೆಗಳು ಮತ್ತು ಸರ್ಕಾರಗಳು ಗಮನ ಹರಿಸುವ ಅಗತ್ಯವಿದೆ ಎಂದು ಈಶ್ವರೀಯ ವಿಶ್ವವಿದ್ಯಾಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ. ಬಸವರಾಜ ರಾಜಋಷಿ ಆಶಿಸಿದರು.
    ಇಲ್ಲಿನ ವಿದ್ಯಾನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿ ಆವರಣದಲ್ಲಿ ಸೋಮವಾರ ಆರಂಭವಾದ ‘ಶರಣರು ಕಂಡ ಶಿವ’ ಪ್ರವಚನಮಾಲೆ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.
    ಬಸವಾದಿ ಶಿವಶರಣರು ನಮಗೆ ಸಾಮಾಜಿಕ ಮೌಲ್ಯವನ್ನು ನೀಡಿದರು. ಆದರೆ ಇಂದಿನ ವಿಜ್ಞಾನ ನಮ್ಮನ್ನು ಬೇರೆಡೆ ಕರೆದೊಯ್ಯುತ್ತಿದೆ. ನಾವೆಷ್ಟೇ ವಿದ್ಯಾವಂತರಿದ್ದರೂ ಮೌಲ್ಯಗಳಿಲ್ಲ. ವಿಜ್ಞಾನದ ಅಮಲಿನಲ್ಲಿ ನಮ್ಮನ್ನು ನಾವು ಭಸ್ಮಾಸುರರಂತೆ ಸುಟ್ಟುಕೊಳ್ಳುವ ಹಂತಕ್ಕೆ ಹೋಗುತ್ತಿದ್ದೇವೆ. ಮಾನವೀಯ ಮೌಲ್ಯ, ಸನಾತನ ಧರ್ಮವನ್ನು ಮರೆಯುತ್ತಿದ್ದೇವೆ ಎಂದು ವಿಷಾದಿಸಿದರು.
    ನಮ್ಮಲ್ಲಿ ಸಾಕಷ್ಟು ತತ್ವಶಾಸ್ತ್ರ, ತತ್ವಜ್ಞಾನವಿದೆ. ಹೆಚ್ಚಿನ ಸಿದ್ಧಾಂತಗಳಿವೆ. ಆದರೆ ಯಾವನ್ನು ಸ್ವೀಕರಿಸಬೇಕು ಎಂಬ ಗೊಂದಲಗಳೂ ಇವೆ. ಆದರೆ 12ನೇ ಶತಮಾನದ ಶಿವಶರಣರು ಸಮಾಜದ ಉನ್ನತಿಗೆ ಮೌಲ್ಯಗಳನ್ನು ನೀಡಿದರು. ಅವರ ವಚನಗಳಲ್ಲಿ ದೇವರುಗಳಿಲ್ಲ. ಲಿಂಗ-ಜಾತಿ, ವಯಸ್ಸು-ವರ್ಗ ಭೇದವಿಲ್ಲ. ಮಾತೃಭಾಷೆಯಲ್ಲಿ ಅವರು ನೀಡಿದ ಅನುಭಾವ ಅಂತಾರಾಷ್ಟ್ರೀಯ ಮಟ್ಟಕ್ಕೂ ತಲುಪಿವೆ. ನಾವದನ್ನು ಅರಗಿಸಿಕೊಳ್ಳಬೇಕಿದೆ ಎಂದು ಹೇಳಿದರು.
    ಮಾನವ ಎಂದರೆ ತೊಗಲಿನ ಬೊಂಬೆಯಾಗಲೀ, ವಿಕಸಿತ ಪ್ರಾಣಿಯಾಗಲೀ, ಜೈವಿಕ ಯಂತ್ರವಾಗಲೀ ಅಲ್ಲ. ನಮ್ಮೊಳಗಿನ ಆತ್ಮಕ್ಕೆ ದಿವ್ಯ ಚೇತನ ಶಕ್ತಿ ಇಎ. ಇದನ್ನು ಅರಿತು ನಡೆದರೆ ಶೆರಣರಾಗುತ್ತೇವೆ, ಮರೆತರೆ ಸಾಮಾನ್ಯ ಮನುಷ್ಯರಾಗಿಯೇ ಇರುತ್ತೇವೆ. ಆತ್ಮವಿಲ್ಲದ ಮಾನವನ ಶರೀರಕ್ಕೆ ಬೆಲೆ ಇಲ್ಲ. ಹಾಗಾಗಿ ಕನಿಷ್ಠ ಶರಣರಾಗಿ ಸಾಯಬೇಕು ಎಂದು ಮಾರ್ಮಿಕವಾಗಿ ಹೇಳಿದರು.
    ದಿವ್ಯಸಾನ್ನಿಧ್ಯ ವಹಿಸಿದ್ದ ಜಡೇಸಿದ್ದ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ ಶರಣತ್ವ ಕುರುಹು ಮಾನವರ ಅಂತರಂಗದ ಕ್ರಿಯೆಯೇ ಹೊರತಾಗಿ ಲಿಂಗ, ರುದ್ರಾಕ್ಷಿ ಮೊದಲಾದ ಬಾಹ್ಯ ವೇಷಗಳು ಅದರ ಮಾನದಂಡವಲ್ಲ. ಇಂದಿನ ವಿಜ್ಞಾನ ಯುಗದಲ್ಲಿ ಮಾನವನ ಮನಸ್ಸಿನ ವೇಗ ಹೆಚ್ಚಿದೆ. ಇದನ್ನು ನಿಲ್ಲಿಸಲು ಯೋಗ ಸಾಧನವಾಗಿದೆ ಎಂದರು.
    ಮಾನವರು ಧ್ಯಾನ ಮಾಡಬೇಕು. ಆದರೆ, ಅದಕ್ಕೆ ನಾಲಗೆಯ ರುಚಿ ನೀಡಬಾರದು, ಭಗವಂತನ ಸ್ಮರಣೆ ಹಾಗೂ ಶುದ್ಧ ಕಾಯಕ ಬೆಳೆಸಿಕೊಂಡಾಗ ಉತ್ತಮರಾಗುತ್ತೇವೆ ಎಂದ ಅವರು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿಯು ಯಾವ ಜಾತಿ-ಕುಲ, ಗೋತ್ರ, ಧರ್ಮಭೇದವಿಲ್ಲದ ಸಂಸ್ಥೆ ಎಂದು ಗುಣಗಾನ ಮಾಡಿದರು.
    ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಮಾತನಾಡಿ 12ನೇ ಶತಮಾನದ ಶರಣರು ಮಾನವೀಯತೆ, ಆದರ್ಶ ಜೀವನ ಮತ್ತು ಸಂಯಮದ ಪಾಠಗಳನ್ನು ವಚನಗಳ ಮೂಲಕ ತಿಳಿಸಿದ್ಧಾರೆ. ಇದನ್ನು ತಿಳಿದರೆ ಸಮಾಜದಲ್ಲಿ ಕ್ರೌರ್ಯ, ಅಹಂಕಾರ ಅಳಿಯಲಿದೆ. ಆಧ್ಯಾತ್ಮಿಕತೆಯಿಂದ ಮಾನವರು ಜೀವನದ ಶ್ರೇಷ್ಠತೆಯನ್ನು ಕಾಣಬಹುದು ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ದಾವಣಗೆರೆ ಉಪವಿಭಾಗಾಧಿಕಾರಿ ದುರ್ಗಾಶ್ರೀ, ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಎಂ.ಬಿ.ಸಂಗಮೇಶ್ವರಗೌಡ್ರು, ಭೂದಾನಿ ಸಣ್ಣಗೌಡ್ರು ಲಕ್ಕಮ್ಮ ದ್ಯಾಮಪ್ಪ, ಈಶ್ವರೀಯ ವಿವಿ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ, ರಾಜಯೋಗಿನಿ ಬ್ರಹ್ಮಾಕುಮಾರಿ ಗೀತಕ್ಕ ಇದ್ದರು. ಎಚ್.ಎನ್. ಓಂಕಾರಪ್ಪ ಸ್ವಾಗತಿಸಿದರು. ಅನ್ನಪೂರ್ಣ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts