More

    ಆಧಾರ ನೋಂದಣಿಗೆ ಜನಸಂದಣಿ

    ವೀರೇಶ ಹಾರೋಗೇರಿ ಕಲಘಟಗಿ

    ಕರೊನಾ ಹಾವಳಿ ಮಧ್ಯೆಯೂ ಆಧಾರ ಕಾರ್ಡ್ ನೋಂದಣಿ, ತಿದ್ದುಪಡಿಗಾಗಿ ಸಾರ್ವಜನಿಕರು ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ ಎದುರು ಸೋಮವಾರ ಬೆಳಗಿನ 4 ಗಂಟೆಯಿಂದಲೇ ಸರದಿಯಲ್ಲಿ ನಿಂತಿರುವುದು ಕಂಡು ಬಂತು. ಆದರೆ, ಬಹುತೇಕ ಜನರು ಮುಖಕ್ಕೆ ಮಾಸ್ಕ್ ಧರಿಸಿರಲಿಲ್ಲ ಹಾಗೂ ಪರಸ್ಪರ ಅಂತರ ಕಾಯ್ದುಕೊಂಡಿರಲಿಲ್ಲ.

    ಪ್ರತಿ ಸೋಮವಾರಕ್ಕೊಮ್ಮೆ ಪಟ್ಟಣದ ಎಸ್​ಬಿಐ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸೇರಿ ವಿವಿಧ ಕೇಂದ್ರಗಳಲ್ಲಿ ಕೂಪನ್​ಗಳನ್ನು ನೀಡಲಾಗುತ್ತದೆ. ಕೂಪನ್ ಪಡೆದವರಿಗೆ ಸರದಿ ಪ್ರಕಾರ ತಿದ್ದುಪಡಿ ಮಾಡಲಾಗುತ್ತಿದೆ. ಆದರೆ, ಕೂಪನ್​ಗಳು ಎಣಿಕೆಗೆ ಮಾತ್ರ ಸೀಮಿತವಾಗಿವೆ. ಕೆಲವರು ನೇರವಾಗಿ ಹೋಗಿ ಆಧಾರ ತಿದ್ದುಪಡಿ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಸರದಿಗೆ ನಿಂತವರ ಕಾರ್ಡ್ ನೋಂದಣಿ ವಿಳಂಬವಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

    ಬೆಳಗ್ಗೆ ಬೇಗ ಬಂದು ಕೂಪನ್​ಗಾಗಿ ಸರದಿಯಲ್ಲಿ ನಿಂತಿದ್ದೇವೆ. 50 ರಿಂದ 60 ಜನಕ್ಕೆ ಮಾತ್ರ ಕೂಪನ್ ಕೊಟ್ಟು ಉಳಿದವರನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​ಗೆ ಕಳುಹಿಸುತ್ತಿದ್ದಾರೆ. ಆದರೆ, ಅಲ್ಲಿ 10 ಗಂಟೆಯಾದರೂ ಕೂಪನ್ ನೀಡುತ್ತಿಲ್ಲ ಎಂದು ಮಡಕಿಹೊನ್ನಳ್ಳಿ ಗ್ರಾಮದ ಯುವಕ ನೀಲಪ್ಪ ದೊಡ್ಡವಾಡ ದೂರಿದರು.

    ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಆಧಾರ ಕಾರ್ಡ್ ನೋಂದಣಿ ಸೌಲಭ್ಯ ಒದಗಿಸಿದರೆ ರೈತರು ಮತ್ತು ಕೂಲಿ ಕಾರ್ವಿುಕರಿಗೆ ಸಹಾಯವಾಗುತ್ತದೆ. ತಾಲೂಕು ಕೇಂದ್ರಕ್ಕೆ ಅಲೆದಾಡುವುದು ತಪ್ಪುತ್ತದೆ. ನಮಗೆ ಸಮಯ ಮತ್ತು ಹಣದ ಉಳಿತಾಯವಾಗುತ್ತದೆ.
    | ಬಸಯ್ಯ ಹಿರೇಮಠ ಹಿಂಡಸಗೇರಿ ರೈತ

    90 ಜನರಿಗೆ ಕೂಪನ್ ನೀಡಿದ್ದೇವೆ. ಸರದಿಗೆ ಅನುಗುಣವಾಗಿ ಒಂದು ದಿನಕ್ಕೆ 25 ರಿಂದ 30 ಕಾರ್ಡ್​ಗಳನ್ನು ಮಾಡಿಕೊಡಲಾಗುತ್ತಿದೆ. ಬಿಎಸ್​ಎನ್​ಎಲ್ ಸರ್ವರ್ ಸಮಸ್ಯೆ ಇರುವುದರಿಂದ ದಿನಕ್ಕೆ 10 ರಿಂದ 15 ಕಾರ್ಡ್​ಗಳನ್ನು ಮಾಡಿಕೊಡಲಾಗುತ್ತಿದೆ. ಇದರ ಮಧ್ಯೆ ಹೆಸರು, ಮತ್ತಿತರ ತಿದ್ದುಪಡಿಗೆ ಬರುವ ವೃದ್ಧರನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ.
    | ಮಲ್ಲಿಕಾರ್ಜುನ ನಾಸರಕಿ ಆಧಾರ ಕಾರ್ಡ್ ನೋಂದಣಿ ಆಪರೇಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts