More

    ಆಧಾರ್ ನೋಂದಣಿ, ನವೀಕರಣಕ್ಕೆ ಕ್ರಮವಹಿಸಿ

    ಚಿತ್ರದುರ್ಗ: ಜಿಲ್ಲೆಯಲ್ಲಿ ಆಧಾರ್ ನೋಂದಣಿ, ದಾಖಲಾತಿ ನವೀಕರಣ ಕಡಿಮೆ ಆಗಿರುವೆಡೆ ಹೆಚ್ಚಳವಾಗುವ ನಿಟ್ಟಿನಲ್ಲಿ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಆಧಾರ್ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿದರು.
    ಹೆಚ್ಚು ಜನಸಂಖ್ಯೆ ಇರುವೆಡೆ, ತಾಲೂಕು, ಹೋಬಳಿ ಕೇಂದ್ರಗಳಿಂದ ದೂರವಿರುವ ಗ್ರಾಮಗಳ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚುವರಿವಾಗಿ ನೋಂದಣಿ ಕೇಂದ್ರ ತೆರೆಯಬೇಕು ಎಂದು ತಾಕೀತು ಮಾಡಿದರು.

    ಅನಾರೋಗ್ಯ, ಅಪಘಾತ ಇತರೆ ಕಾರಣಗಳಿಂದ ಓಡಾಡಲು ಸಾಧ್ಯವಾಗದೆ, ಮನೆಯಲ್ಲೇ ಚಿಕಿತ್ಸೆ ಪಡೆಯುವವರನ್ನು ಕೇಂದ್ರಗಳಿಗೆ ಕರೆತರುವುದು ಕಷ್ಟ. ಆಧಾರ್ ಇಲ್ಲದಿದ್ದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಸಾಧ್ಯವಾಗದು. ಆದ್ದರಿಂದ ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಮಾಹಿತಿ ಪಡೆದು ಖುದ್ದಾಗಿ ಅವರ ಮನೆಗಳಿಗೆ ಭೇಟಿ ನೀಡಿ, ನೋಂದಣಿ ಮಾಡಿಸಿ ಎಂದು ಸೂಚಿಸಿದರು.

    ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ನೋಂದಣಿ ಕಡಿಮೆ ಇರುವ ಪ್ರದೇಶಗಳಲ್ಲಿ ಅಭಿಯಾನ ಕೈಗೊಳ್ಳಿ. 10 ವರ್ಷ ಹಳೆಯ ಆಧಾರ್ ಗುರುತಿನ ಚೀಟಿ ಇದ್ದಲ್ಲಿ ಅಗತ್ಯ ಮಾಹಿತಿಯೊಂದಿಗೆ ನವೀಕರಣ ಮಾಡಬೇಕಿದ್ದು, ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.
    ಜಿಲ್ಲೆಯಲ್ಲಿ 7,31,173 ಜನರ ಆಧಾರ್ ನವೀಕರಣ ಬಾಕಿ ಉಳಿದಿದ್ದು, ಕಳೆದ ಮೂರು ತಿಂಗಳಿಂದ ಕೇವಲ 967 ಜನರು ಅಪ್ಡೇಟ್ ಮಾಡಿಕೊಂಡಿದ್ದಾರೆ. ಈ ಕುರಿತು ಇನ್ನಷ್ಟು ವ್ಯಾಪಕ ಪ್ರಚಾರ ಕೈಗೊಳ್ಳುವ ಅಗತ್ಯವಿದೆ ಎಂದರು.

    ಯುಐಡಿಎಐನ ಪ್ರಾದೇಶಿಕ ಕಚೇರಿ ಯೋಜನಾ ವ್ಯವಸ್ಥಾಪಕ ವಿಜಯ್‌ಕುಮಾರ್ ಮಾತನಾಡಿ, ಈ ಸಂಬಂಧ ಅಗತ್ಯ ಕಿಟ್ ಸರಬರಾಜಿಗೆ ಕ್ರಮ ಕೈಗೊಳ್ಳಲಾಗುವುದು. ಶಾಲೆ, ಅಂಗನವಾಡಿಗಳಲ್ಲಿ ವಿಶೇಷ ಶಿಬಿರದ ಮೂಲಕ ನೋಂದಣಿಗೆ ಹೆಚ್ಚುವರಿಯಾಗಿ ಕಿಟ್‌ಗಳನ್ನು ನೀಡಲಾಗುವುದು ಎಂದು ತಿಳಿಸಿದರು.
    ಆಧಾರ್ ಜಿಲ್ಲಾ ಸಂಯೋಜಕ ರಂಗನಾಥ್ ಮಾತನಾಡಿ, ಜಿಲ್ಲೆಯಲ್ಲಿ 80 ಕೇಂದ್ರಗಳಲ್ಲಿ ನೋಂದಣಿಯಾಗುತ್ತಿದೆ. ಈ ಕುರಿತು ಪ್ರತಿ ದಿನದ ಮಾಹಿತಿ ಲಭ್ಯವಾದರೆ, ನಿರ್ವಹಣೆ ಹಾಗೂ ಕೇಂದ್ರದ ಅಪರೇಟರ್‌ಗಳಿಗೆ ಸೂಕ್ತ ಸಲಹೆ, ಸೂಚನೆ ನೀಡಲು ಅನುಕೂಲವಾಗಲಿದೆ ಎಂದರು.
    ಜಿಪಂ ಮುಖ್ಯ ಯೋಜನಾಧಿಕಾರಿ ಸತೀಶ್‌ರೆಡ್ಡಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ತಿಪ್ಪೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts