More

    ಆದ್ರಳ್ಳಿಯಲ್ಲಿ ಮಳೆ ಅವಾಂತರ

    ಲಕ್ಷ್ಮೇಶ್ವರ: ಸತತ ಮಳೆಯಿಂದ ತಾಲೂಕಿನ ಆದ್ರಳ್ಳಿ, ಯಳವತ್ತಿ, ಯತ್ನಳ್ಳಿ, ಮಾಢಳ್ಳಿ, ಬಸಾಪುರ, ಸೂರಣಗಿ ಮೊದಲಾದ ಗ್ರಾಮಗಳ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಬೆಳೆಗಳು ಜಲಾವೃತವಾಗಿವೆ.

    ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ಗುಡ್ಡದ ನೀರು ನುಗ್ಗಿ ಮೂರು ಮನೆಗಳು ಕುಸಿದಿವೆ. ದವಸ-ಧಾನ್ಯ, ಆಹಾರ ಪದಾರ್ಥ ಮತ್ತಿತರ ವಸ್ತುಗಳು ನೀರು ಪಾಲಾಗಿದ್ದರಿಂದ ಜನರು ಊಟ, ವಸತಿಗಾಗಿ ರಾತ್ರಿಯಿಡೀ ಪರದಾಡಿದರು.

    ಆದ್ರಳ್ಳಿ ತಾಂಡಾದಲ್ಲಿ ವೆಂಕಟೇಶ ಲಮಾಣಿ, ತುಳಜಪ್ಪ ಲಮಾಣಿ, ರಘು ಲಮಾಣಿ, ಧರ್ಮಪ್ಪ ಲಮಾಣಿ, ಸಂಕ್ರಪ್ಪ ಲಮಾಣಿ, ಸೋಮಲೆಪ್ಪ ಲಮಾಣಿ ಹಾಗೂ ಭೋವಿ ಓಣಿಯಲ್ಲಿ ಚನ್ನವ್ವ ವಡ್ಡರ, ಸಾವಕ್ಕ ವಡ್ಡರ, ಸಿದ್ದಪ್ಪ ವಡ್ಡರ ಅವರ ಮನೆಗಳು ಕುಸಿದು ಬಿದ್ದಿವೆ. ರಾಮಪ್ಪ ವಡ್ಡರ, ಮಲ್ಲಪ್ಪ ವಡ್ಡರ, ಲಕ್ಷ್ಮ್ಪ ವಡ್ಡರ, ಉಡಚವ್ವ ವಡ್ಡರ ಅವರ ಮನೆಗಳಿಗೆ ನೀರು ನುಗ್ಗಿದೆ. ಪಂಪ್​ಸೆಟ್​ನಿಂದ ನೀರು ಹೊರಹಾಕಲಾಗುತ್ತಿದೆ.

    ಶೇಂಗಾ, ಉಳ್ಳಾಗಡ್ಡಿ, ಮೆಕ್ಕೆಜೋಳ, ಹತ್ತಿ, ಮೆಣಸಿನಗಿಡ ಮೊದಲಾದ ಬೆಳೆಗಳು ಜಲಾವೃತವಾಗಿವೆ. ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಸಂಚಾರ ಅಸ್ತವ್ಯಸ್ತವಾಯಿತು.

    ಆದ್ರಳ್ಳಿಗೆ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಮಂಗಳವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು. ನೀರು ಹರಿದು ಬರುವ ಮಾರ್ಗದಲ್ಲಿ ಕಾಲುವೆ ತೋಡಿ ಮಾರ್ಗ ಬದಲಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಗ್ರಾಮದ ಚರಂಡಿ ಸ್ವಚ್ಛಗೊಳಿಸಿ, ರಾಸಾಯನಿಕ ಸಿಂಪಡಿಸುವಂತೆ ಪಿಡಿಒ ಡಿ.ಡಿ. ಹಂದಿಗನೂರ ಅವರಿಗೆ ಸೂಚನೆ ನೀಡಿದರು.

    130 ಮನೆಗಳಿಗೆ ಹಾನಿ

    ಮಳೆಯಿಂದ ಒಂದು ವಾರದಲ್ಲಿ ಲಕ್ಷ್ಮೇಶ್ವರ ತಾಲೂಕಿನ 130ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಕಂದಾಯ ಇಲಾಖೆ ಮಾಹಿತಿಯಂತೆ ಯಳವತ್ತಿ ಗ್ರಾಮದಲ್ಲಿ 60ಕ್ಕೂ ಹೆಚ್ಚು ಮನೆಗಳು ಬಿದ್ದಿವೆ. ಶಿಗ್ಲಿ, ಗೋನಾಳ, ಕುಂದ್ರಳ್ಳಿ, ಬಾಲೆಹೊಸೂರ, ಒಡೆಯರ ಮಲ್ಲಾಪುರ, ಗೊಜನೂರ, ಬಡ್ನಿ, ಲಕ್ಷ್ಮೇಶ್ವರ ಮತ್ತಿತರ ಗ್ರಾಮಗಳಲ್ಲಿ ಮನೆಗಳಿಗೆ ಧಕ್ಕೆಯಾಗಿದೆ.

    ಆಗಸ್ಟ್​ನಲ್ಲಿ ಮಳೆಯಿಂದ ತಾಲೂಕಿನಲ್ಲಿ ಬಿದ್ದ ಮನೆಗಳ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ. ಪೂರ್ಣ ಬಿದ್ದ ಮನೆಗಳಿಗೆ 95,100 ರೂ., ಭಾಗಶಃ ಬಿದ್ದ ಮನೆಗಳಿಗೆ 3,200 ರೂ. ಸೇರಿ ಮೊದಲ ಹಂತದಲ್ಲಿ 88 ಮನೆಗಳಿಗೆ ಪರಿಹಾರ ನೀಡಲಾಗಿದೆ. ಸೆಪ್ಟೆಂಬರ್​ನಲ್ಲಿ ಬಿದ್ದ 79 ಮನೆಗಳು, ಕಳೆದ 1 ವಾರದಲ್ಲಿ ಬಿದ್ದ 130 ಮನೆಗಳ ವರದಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ.

    ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ

    ಬೆಳೆ ಹಾಳಾಗಿದೆ. ಮನೆಯಲ್ಲಿ ಗಂಜಿ ಕುಡಿದು ಬದುಕಬೇಕೆಂದರೂ ಮಳೆ ಬಿಡುತ್ತಿಲ್ಲ. ಶಾಲೆಗಳು ಆರಂಭವಾಗದ್ದರಿಂದ ಮಕ್ಕಳನ್ನು ಹಿಡಿಯುವುದೇ ಕಷ್ಟವಾಗಿದೆ. ಎಲ್ಲೂ ಸಾಲ ಸಿಗುತ್ತಿಲ್ಲ. ದುಡಿಯಲು ಊರು ಬಿಡಬೇಕೆಂದರೆ ಕರೊನಾ, ಮಳೆಯಿಂದಾಗಿ ಕೆಲಸವೂ ಸಿಗುವುದಿಲ್ಲ. ಗ್ರಾಮದಲ್ಲಿ ಸ್ವಚ್ಛತೆ, ಮೂಲ ಸೌಲಭ್ಯಗಳು ಮರೀಚಿಕೆಯಾಗಿವೆ. ಬದುಕು ಸಾಗಿಸುವುದು ಹೇಗೆಂಬ ಚಿಂತೆ ಕಾಡುತ್ತಿದೆ. ಶಾಸಕರು, ಅಧಿಕಾರಿಗಳು, ಸರ್ಕಾರ ಬಡವರ ಕಷ್ಟಕ್ಕೆ ಸ್ಪಂದಿಸಬೇಕು.

    | ಮಲ್ಲೇಶ ವಡ್ಡರ, ಶೇಖಪ್ಪ ಲಮಾಣಿ, ಚನ್ನಪ್ಪ ವಡ್ಡರ, ಷಣ್ಮುಕಪ್ಪ ವಡ್ಡರ, ಆದ್ರಳ್ಳಿ ಗ್ರಾಮಸ್ಥರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts