More

    ಆತ್ಮಸಾಕ್ಷಿಗೆ ಪಡೆಯುವ ಪ್ರಶಸ್ತಿ ಎಲ್ಲದಕ್ಕಿಂತಲೂ ದೊಡ್ಡದು

    ಚಿಕ್ಕಬಳ್ಳಾಪುರ: ಆತ್ಮಸಾಕ್ಷಿಗೆ ಪಡೆಯುವ ಪ್ರಶಸ್ತಿ ಎಲ್ಲದಿಕ್ಕಿಂತಲೂ ದೊಡ್ಡದು. ಇದನ್ನು ಸ್ವೀಕರಿಸಲು ಶಿಕ್ಷಕರು ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಕರೆ ನೀಡಿದ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ನಿರಂತರವಾಗಿ ಹೊಸ ಹೊಸ ವಿಷಯಗಳ ಅಧ್ಯಯನದೊಂದಿಗೆ ಹೆಚ್ಚಿನ ಜ್ಞಾನ ಸಂಪಾದಿಸಬೇಕು ಎಂದು ಸಲಹೆಯಿತ್ತರು.

    ಜಿಲ್ಲಾಡಳಿ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಕರ ಸಂಘ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

    ಉತ್ತಮ ಬೋಧನೆಗೆ ಹೆಚ್ಚಿನ ಕೌಶಲ ಅಗತ್ಯ. ಜ್ಞಾನದಾಹಿ ಶಿಕ್ಷಕ ಮಾತ್ರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬಲ್ಲ. ಈ ನಿಟ್ಟಿನಲ್ಲಿ ಹೊಸ ಆವಿಷ್ಕಾರ, ಸಂಶೋಧನೆ ಬಗೆಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಉತ್ಸಾಹದಿಂದ ಕಾರ್ಯನಿರ್ವಹಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣಾ ಶಕ್ತಿಯಾಗಬೇಕು. ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಬೇಕು ಎಂದರು.

    ಇತರ ವೃತ್ತಿಗಳ ಮಾದರಿಯಲ್ಲಿ ಶಿಕ್ಷಕರ ಸೇವೆಗೆ ನಿವೃತ್ತಿ ಎನ್ನುವುದು ಇರುವುದಿಲ್ಲ. ಕೆಲಸದಿಂದ ನಿವೃತ್ತಿಯಾದರೂ ಜ್ಞಾನ ನೀಡುವ ಜವಾಬ್ದಾರಿ ಮುಂದುವರಿಯುತ್ತಲೇ ಇರುತ್ತದೆ ಎಂದು ಅಭಿಪಾಯಪಟ್ಟರು.

    ಉತ್ತಮ ಸಮಾಜದ ನಿರ್ಮಾಣಕ್ಕೆ ಜನ ಸಮೂಹವನ್ನು ಗಟ್ಟಿಗೊಳಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಹಿಂದಿನಿಂದಲೂ ಸಮಾಜ ಗುರುಗಳಿಗೆ ವಿಶೇಷ ಸ್ಥಾನಮಾನ ನೀಡಿದ್ದು, ಇಂದಿಗೂ ಪೂಜನೀಯವಾಗಿಯೇ ಕಾಣಲಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.

    ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಬುನಾದಿಯಾಗಿದೆ. ಈ ಹಂತದಲ್ಲಿ ಶಿಕ್ಷಕರು ಹೊಸ ಕೌಶಲ, ಕ್ರಿಯಾಶೀಲ ಗುಣಗಳ ಜತೆಗೆ ಸನ್ನಡತೆ, ಆತ್ಮಸೈರ್ಯ ಬೆಳೆಸಬೇಕು. ಈಗಾಗಲೇ ರಾಜ್ಯದಲ್ಲೇ ಮಾದರಿಯಾಗಿ ಜಿಲ್ಲೆಯಲ್ಲಿ ಗುರುಭವನ ನಿರ್ಮಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಹಾಗೆಯೇ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ಆ್ಯಪ್ ಸೇವೆ ಒದಗಿಸಲಾಗಿದೆ ಎಂದು ತಿಳಿಸಿದರು.

    ಕರೊನಾ ತುರ್ತು ಸಂದರ್ಭದಲ್ಲಿ ವೈದ್ಯರು, ಶುಶ್ರೂಷಕಿಯರು, ಪೊಲೀಸರು, ವಿವಿಧ ಇಲಾಖೆ ಅಧಿಕಾರಿಗಳ ಜತೆಗೆ ಶಿಕ್ಷಕರು ಸಹ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರತಿ ತಾಲೂಕುಗಳಿಂದ ಜಿಲ್ಲಾಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ತಲಾ ಮೂವರನ್ನು ಶಿಕ್ಷಕರನ್ನು ಸನ್ಮಾನಿಸಲಾಯಿತು.

    ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಉಪಾಧ್ಯಕ್ಷೆ ಪಿ.ನಿರ್ಮಲಾ ಮುನಿರಾಜು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಸಿ ರಾಜಾಕಾಂತ್, ಬಂಕ್ ಮುನಿಯಪ್ಪ, ಜಿಲ್ಲಾಧಿಕಾರಿ ಆರ್.ಲತಾ, ಸಿಇಒ ಬಿ.ಫೌಜೀಯಾ ತರನ್ನುಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್. ನಾಗೇಶ್ ಇತರರಿದ್ದರು.

    ಪರಿವರ್ತನೆ ಅಗತ್ಯ: ಕಲಿಕೆ ನಿಂತ ನೀರಲ್ಲ, ಹುಟ್ಟಿನಿಂದ ಸಾವಿನವರೆಗೂ ಸಾಗುತ್ತಿರುತ್ತದೆ. ಕಾಲ ತಕ್ಕಂತೆ ಪ್ರತಿ ಕ್ಷೇತ್ರದಲ್ಲೂ ಬದಲಾವಣೆಗಳಾಗುತ್ತಿರುತ್ತವೆ. ಇದಕ್ಕನುಗುಣವಾಗಿ ಪೀಳಿಗೆಗೆ ತಕ್ಕಂತೆ ಶಿಕ್ಷಣದ ಪದ್ಧತಿಯಲ್ಲೂ ಪರಿವರ್ತನೆ ಅಗತ್ಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರತಿಪಾದಿಸಿದರು.

    ಶಾಲೆಗಳನ್ನು ದತ್ತು ಸ್ವೀಕರಿಸಿ: ಈಗಾಗಲೇ ಜಿಲ್ಲೆಯ ಸರ್ಕಾರಿ ಶಾಲೆಗಳನ್ನು ಸಚಿವರು, ಶಾಸಕರು, ಐಟಿ-ಬಿಟಿ ಕಂಪನಿಗಳು ಹಾಗೂ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ದತ್ತು ಪಡೆದು ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿ ಪಡಿಸುತ್ತಿವೆ. ಇದೇ ಮಾದರಿಯಲ್ಲಿ ಮಕ್ಕಳಿಗೆ ಉತ್ತಮ ವಾತಾವರಣದಲ್ಲಿ ಗುಣಮಟ್ಟದ ಶಿಕ್ಷಣ ನೀಡುವಂತಾಗಲು ಉಳ್ಳವರು ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕು ಎಂದು ಸಚಿವ ಡಾ ಕೆ.ಸುಧಾಕರ್ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts