More

    ಆಗ ಆನೆ ದಾಳಿ, ಈಗ ಕರಡಿ ಹಾವಳಿ

    ಹಳಿಯಾಳ: ಕರಡಿ ಮತ್ತು ಮರಿಗಳಿವೆ ಎಚ್ಚರಿಕೆ… ಹೀಗೊಂದು ಎಚ್ಚರಿಕೆಯ ಸೂಚನಾ ಫಲಕಗಳು ಸಾಂಬ್ರಾಣಿ ಅರಣ್ಯ ವ್ಯಾಪ್ತಿ ಪ್ರದೇಶಕ್ಕೆ ಭೇಟಿ ನೀಡಿದರೆ ನಿಮ್ಮ ಕಣ್ಣಿಗೆ ಕಾಣಿಸುತ್ತವೆ.
    ಕರಡಿ ದಾಳಿಯಿಂದ ಜನರನ್ನು ಸಂರಕ್ಷಿಸಲು ಸಾಂಬ್ರಾಣಿ ಅರಣ್ಯ ವಲಯದವರು ಕೈಗೊಂಡ ಮೊದಲ ಮುನ್ನೆಚ್ಚರಿಕೆ ಕ್ರಮವಿದು. ಸಾಂಬ್ರಾಣಿ ಅರಣ್ಯ ವ್ಯಾಪ್ತಿಯ ಕಾಡಂಚಿನ ರಸ್ತೆಗಳ ಪಕ್ಕದ ಮರಗಳಲ್ಲಿ ಈ ಸೂಚನಾ ಫಲಕಗಳನ್ನು ನೇತು ಹಾಕಲಾಗಿದೆ.

    ಕಾಯುವ ಕಾಯಕ: ತಾಲೂಕಿನ ಸಾಂಬ್ರಾಣಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಆನೆ ದಾಳಿ ಸಾಮಾನ್ಯ. ಪ್ರತಿವರ್ಷ ಸುಗ್ಗಿಯ ಸಮಯದಲ್ಲಿ ಲಗ್ಗೆಯಿಡುವ ಆನೆಗಳ ದಾಳಿಯಿಂದ ಸುಸ್ತಾಗಿರುವ ಈ ಭಾಗದ ಗ್ರಾಮಸ್ಥರಿಗೆ ಈಗ ಕರಡಿಗಳ ಗುಂಪು ನಿದ್ದೆಗೆಡಿಸಿದೆ. ಆನೆ ದಾಳಿಯಿಂದ ಬೆಳೆಯನ್ನು ಕಾಯ್ದುಕೊಂಡು, ಅವುಗಳನ್ನು ಹಿಮ್ಮೆಟಿಸುವ ಕಾಯಕದಲ್ಲಿ ತೊಡಗುತ್ತಿದ್ದ ರೈತರಿಗೆ ಈಗ ಎಲ್ಲೆಂದರಲ್ಲಿ ದಾಳಿ ಮಾಡುವ ಕರಡಿಗಳಿಂದ ಬಚಾವ್ ಆಗುವ ಹೆಚ್ಚುವರಿ ತಲೆನೋವು ಶುರುವಾಗಿದೆ.

    ಸಾಂಬ್ರಾಣಿ ಅರಣ್ಯ ವಲಯ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಕರಡಿಗಳು ತಮ್ಮ ಮರಿಗಳೊಂದಿಗೆ ಸುತ್ತಾಡುತ್ತಿದ್ದು, ದಾರಿಯಲ್ಲಿ ಸಿಗುವ ಗ್ರಾಮಸ್ಥರ ಮೇಲೆ ಹಠಾತ್ ದಾಳಿ ನಡೆಸುತ್ತಿವೆ. ರಾತ್ರಿ ಹೊತ್ತು ಬಿಡಿ ಹಗಲಿನಲ್ಲಿಯೇ ರೈತರ ಮೇಲೆ ದಾಳಿ ನಡೆಸಿರುವ ಮೂರು ಪ್ರಕರಣಗಳು ವರದಿಯಾಗಿವೆ. ನಿರ್ಭೀತಿಯಿಂದ ಹೊಲಗದ್ದೆಗಳಿಗೆ ತೆರಳುತ್ತಿದ್ದ ರೈತರೀಗ ಕೈಯಲ್ಲಿ ಜೀವ ಹಿಡಿದುಕೊಂಡು ಅನ್ಯ ದಾರಿ ಹಿಡಿದು ಹೊಲಗಳಿಗೆ ತೆರಳುತ್ತಿದ್ದಾರೆ.

    ಅಧಿಕಾರಿಗಳಿಂದ ಜಾಗೃತಿ: ಸಾಂಬ್ರಾಣಿ ಅರಣ್ಯ ವಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾಡಂಚಿನ ಗ್ರಾಮ, ಹೊಲಗದ್ದೆಗಳಲ್ಲಿನ ಮನೆಗಳಿಗೆ ಭೇಟಿ ನೀಡಿ ವನ್ಯಪ್ರಾಣಿಗಳ ದಾಳಿಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಒಂಟಿಯಾಗಿ ಓಡಾಡದಂತೆ, ಅನವಶ್ಯಕವಾಗಿ ಸುತ್ತಾಡದಂತೆ ಮನವರಿಕೆ ಮಾಡುತ್ತಿದ್ದಾರೆ. ಕಾಡು ಪ್ರಾಣಿಗಳು ಒಂದೆಡೆ ಇರುವುದಿಲ್ಲ. ಅವು ವಿವಿಧೆಡೆ ಸುತ್ತಾಡುತ್ತವೆ. ಹೀಗಾಗಿ, ಗ್ರಾಮಸ್ಥರು ಭಯಭೀತರಾಗಬಾರದು ಎಂಬ ಉದ್ದೇಶದಿಂದ ಧೈರ್ಯ ತುಂಬುತ್ತಿದ್ದಾರೆ.

    ಇತ್ತೀಚಿನ ಕೆಲ ವರ್ಷಗಳಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಕೃಷಿ ಬೇಸಾಯ ಪದ್ಧತಿ ಬದಲಾಗಿದೆ, ಕಬ್ಬಿನ ಬದಲು ವನ್ಯಪ್ರಾಣಿಗಳು ಆಕರ್ಷಿತರಾಗದಂತಹ ಬೆಳೆ ಬೆಳೆಯಲು ರೈತರನ್ನು ಪ್ರೇರೆಪಿಸುವ ದಿಸೆಯಲ್ಲಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲು ಯೋಜಿಸಲಾಗುತ್ತಿದೆ.
    | ಕಿರಣಕುಮಾರ ಅಂಗಡಿ ಸಾಂಬ್ರಾಣಿ ವಲಯ ಅರಣ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts