More

    ಆಕಾಂಕ್ಷಿಗಳು ಓಂ ಶಕ್ತಿಗೆ ಮೊರೆ: ಉಚಿತ ಪ್ರವಾಸ ಕಳುಹಿಸಲು ಕೈ ಬಿಚ್ಚುತ್ತಿರುವ ಮುಖಂಡರು

    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಸಾರ್ವತ್ರಿಕ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರನ್ನು ಸೆಳೆಯುವ ಕಸರತ್ತು ಆರಂಭಿಸಿರುವ ಜಿಲ್ಲೆಯ ಆಕಾಂಕ್ಷಿಗಳು ಓಂ ಶಕ್ತಿ ಭಕ್ತರ ಮೊರೆ ಹೋಗಿದ್ದಾರೆ.
    ಮಹಿಳಾ ಮತದಾರರ ಮನಸೆಳೆಯುವ ಪ್ರಯತ್ನವಾಗಿ ಓಂಶಕ್ತಿ ಪ್ರವಾಸಕ್ಕೆ ಹೊರಟಿರುವ ಮಹಿಳಾ ಭಕ್ತರಿಗೆ ಉಚಿತ ಪ್ರವಾಸ ಭಾಗ್ಯ ಕಲ್ಪಿಸುವ ಮೂಲಕ ಮಹಿಳಾ ಮತದಾರರ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಹಾತೊರೆಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಮುಂದಿನ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಆರಂಭದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಈಗಿನಿಂದಲೇ ಟೊಂಕಕಟ್ಟಿರುವ ಚುನಾವಣಾ ಆಕಾಂಕ್ಷಿಗಳು ಮತದಾರರನ್ನು ಸೆಳೆಯಲು ನಾನಾ ಕಸರತ್ತು ಆರಂಭಿಸಿದ್ದಾರೆ. ಪ್ರಸ್ತುತ ಮುಖಂಡರು ಓಂಶಕ್ತಿ ಮಾಲಾಧಾರಿಗಳಿಗೆ ಗಾಳ ಹಾಕುತ್ತಿದ್ದು, ಮತದಾರರ ಮನ ಗೆಲ್ಲುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.


    ಓಂ ಶಕ್ತಿ ಬ್ರಾಂಡ್: ಕಳೆದೆರಡು ತಿಂಗಳಿಂದ ಓಂ ಶಕ್ತಿ ಮಾಲಾಧಾರಿಗಳು ತಮಿಳುನಾಡಿನ ಓಂಶಕ್ತಿ ದೇಗುಲಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲೂ ಪ್ರತಿ ವರ್ಷದಂತೆ ಈ ಬಾರಿಯೂ ಭಕ್ತರು ಪ್ರವಾಸ ಕೈಗೊಂಡಿದ್ದು, ಇದಕ್ಕೆ ರಾಜಕೀಯ ನಾಯಕರು ಸಾಥ್ ನೀಡುತ್ತಿದ್ದಾರೆ. ಚುನಾವಣೆ ಹತ್ತಿರವಿರುವುದರಿಂದ ಮಹಿಳಾ ಮತದಾರರನ್ನು ಸೆಳೆಯಲು ಇದೊಂದು ಸದಾವಕಾಶವೆಂದು ಭಾವಿಸಿರುವ ಆಕಾಂಕ್ಷಿಗಳು ಉಚಿತ ಪ್ರವಾಸ ಏರ್ಪಾಡು ಮಾಡಲು ಮುಗಿಬಿದ್ದಿದ್ದಾರೆ. ಭಕ್ತರಿಗೆ ಬಸ್ ವ್ಯವಸ್ಥೆ, ಹೋಗಿಬರಲು ಖರ್ಚಿಗೊಂದಿಷ್ಟು ಕಾಸು ನೀಡಿ ಮನಸ್ಸು ತೃಪ್ತಿ ಪಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.
    ಪೂಜೆ ಮಾಡಿ ಬಸ್ ಹತ್ತಿಸುತ್ತಾರೆ: ಮಾಲಾಧಾರಿಗಳು ಪ್ರವಾಸಕ್ಕೆ ಹೊರಡುವ ದಿನ ಸ್ಥಳಕ್ಕೆ ಲಗ್ಗೆ ಹಾಕುವ ರಾಜಕೀಯ ಮುಖಂಡರು ಭಕ್ತರ ಜತೆಗೆ ಬಸ್‌ಗಳಿಗೆ ಪೂಜೆ ಸಲ್ಲಿಸಿ ಆತ್ಮೀಯವಾಗಿ ಬೀಳ್ಕೊಡುತ್ತಿರುವ ದೃಶ್ಯಗಳು ಜಿಲ್ಲಾದ್ಯಂತ ಕಂಡುಬರುತ್ತಿವೆ. ಸ್ಥಳದಲ್ಲಿಯೇ ಸಣ್ಣ ಕಾರ್ಯಕ್ರಮ ಮಾಡಿ ಮುಂದಿನ ಚುನಾವಣಾ ಅಭ್ಯರ್ಥಿ ಎಂದು ಸ್ವಯಂೋಷಿಸಿಕೊಂಡು ಮುಂದಿನ ಚುನಾವಣೆಯಲ್ಲಿ ಗೆಲುವು ನನ್ನದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವಂತೆ ಮನವಿ ಮಾಡುತ್ತಿರುವ ಪ್ರಸಂಗಳು ಸಾಮಾನ್ಯವಾಗಿವೆ. ಚುನಾವಣೆ ಸಮಯದಲ್ಲಿ ನೀತಿ ಸಂಹಿತೆ ಮತ್ತಿತರ ಅಡೆತಡೆಗಳು ಎದುರಾಗುವುದರಿಂದ ಈಗಲೇ ಮಹಿಳಾ ಮತದಾರರನ್ನು ದೇವರ ಹೆಸರಿನಲ್ಲಿ ಓಲೈಕೆ ಮಾಡುವ ಲೆಕ್ಕಾಚಾರ ವರ್ಕ್‌ಔಟ್ ಆಗುತ್ತಿದೆ.
    ಭಾವಚಿತ್ರ ಹಿಡಿದು ಹೊರಟ ಭಕ್ತರು: ಉಚಿತ ಪ್ರವಾಸ ಭಾಗ್ಯ, ಹೋಗಿಬರುವ ಖರ್ಚು ಸರಿದೂಗಿಸುವ ನಾಯಕರ ಭಾವಚಿತ್ರ ಹಿಡಿದು ಭಕ್ತರು ಪ್ರವಾಸಗಳಿಗೆ ತೆರಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಬಸ್‌ಗಳ ಮುಂಭಾಗದಲ್ಲಿ ಮುಖಂಡರ ಭಾವಚಿತ್ರ ಪ್ರದರ್ಶನ ಕಂಡುಬರುತ್ತಿದೆ. ದೇಗುಲಗಳ ಬಳಿಯೂ ಭಾವಚಿತ್ರದೊಂದಿಗೆ ವ್ರತ ಪೂರ್ಣಗೊಳಿಸುತ್ತಿರುವ ಭಕ್ತರು ಅಷ್ಟೇ ನಿಷ್ಟೆಯಿಂದ ತಮ್ಮ ನಾಯಕರ ಪರ ದೇವರ ಬಳಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
    ಪ್ರವಾಸ ಟ್ರೆಂಡ್
    ಗ್ರಾಮಾಂತರ ಜಿಲ್ಲೆಯಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಮತದಾರರನ್ನು ಸೆಳೆಯುವ ಕಸರತ್ತು ಆರಂಭಗೊಂಡಿದ್ದು, ಇದರಲ್ಲಿ ಮೊದಲ ಹಂತವಾಗಿ ಅಯ್ಯಪ್ಪ ಭಕ್ತರು, ಓಂಶಕ್ತಿ ಭಕ್ತರನ್ನು ಸೆಳೆಯಲು ಈ ಪ್ರವಾಸ ಟ್ರೆಂಡ್ ಸಹಕಾರಿಯಾಗಿದೆ. ಎಲ್ಲಿ ಭಕ್ತರು ಪ್ರವಾಸಕ್ಕೆ ಹೊರಡುತ್ತಾರೆ ಎಂಬ ಮಾಹಿತಿ ಸಿಕ್ಕರೆ ಸಾಕು ಅಲ್ಲಿಗೆ ಆಕಾಂಕ್ಷಿಗಳು ಹಾಜರಿರುತ್ತಾರೆ.


    ಧರ್ಮಸ್ಥಳ, ತಿರುಪತಿ ಪ್ರವಾಸ: ಪ್ರಸಿದ್ಧ ಯಾತ್ರಾ ಸ್ಥಳಗಳಾದ ಧರ್ಮಸ್ಥಳ ಹಾಗೂ ತಿರುಪತಿ ಪ್ರವಾಸಕ್ಕೆ ಹಿರಿಯ ನಾಗರಿಕರನ್ನು ಕಳಿಸಿಕೊಡುವ ಕಸರತ್ತು ನಡೆಯುತ್ತಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರನ್ನು ಗುರುತಿಸಿ ಅವರಿಂದ ಪ್ರವಾಸದ ಇಂಗಿತ ಅರಿತು ತಂಡಗಳ ಪಟ್ಟಿ ಮಾಡಿ ಅವರಿಗೆ ಉಚಿತವಾಗಿ ಧರ್ಮಕ್ಷೇತ್ರಗಳ ಪ್ರವಾಸ ಏರ್ಪಾಡು ಮಾಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts