More

    ಅಸಹಕಾರ ಚಳವಳಿ ಆರಂಭಿಸಿದ ಪಿಡಿಒಗಳು

    ಚಿತ್ರದುರ್ಗ: ರಾಜ್ಯದ ಪಿಡಿಒಗಳು ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಬುಧವಾರದಿಂದ ಅಸಹಕಾರ ಚಳವಳಿ ಆರಂಭಿಸಿದ್ದು, ಮೂರು ಹಂತದಲ್ಲಿ ಹೋರಾಟ ನಡೆಯಲಿದೆ ಎಂದು ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷ ನಯಾಜ್ ತಿಳಿಸಿದರು.

    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಕ್ಕೆ 2010 ರಿಂದ ಈವರೆಗೂ ಅನೇಕ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸಿವೆ. ಇದರಲ್ಲಿ ಪಿಡಿಒಗಳ ಪಾತ್ರ ಮುಖ್ಯವಾಗಿದ್ದು, ನಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಬದುಕನ್ನು ಮೇಲಧಿಕಾರಿಗಳು ಕತ್ತಲೆಯ ಕೂಪಕ್ಕೆ ತಳಿದ್ದಾರೆ ಎಂದು ದೂರಿದರು.

    ಮೊದಲ ಹಂತವಾಗಿ ವಾಟ್ಸ್‌ಆ್ಯಪ್ ಗ್ರೂಪ್‌ಗಳಿಂದ ಹೊರಬಂದಿದ್ದೇವೆ. ಎರಡನೇ ಹಂತವಾಗಿ ತಾಪಂ, ಜಿಪಂನಲ್ಲಿ ಅಧಿಕಾರಿಗಳು ಕರೆಯುವ ಸಭೆಗೆ ಹೋಗದೆ ಹೋರಾಟ ನಡೆಸುತ್ತೇವೆ. ಆನ್‌ಲೈನ್ ಸೇವೆ ಸ್ಥಗಿತಗೊಳಿಸಿದ್ದೇವೆ. ಆದರೆ, ಬರವಿರುವ ಕಾರಣ ಅದರ ನಿರ್ವಹಣೆ ಮತ್ತು ಮೂಲಸೌಕರ್ಯ ಒದಗಿಸುವಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸುತ್ತೇವೆ ಎಂದರು.

    ಪಿಡಿಒಗಳನ್ನು ಗ್ರೂಪ್ ‘ಬಿ’ ದರ್ಜೆ ಅಧಿಕಾರಿಗಳಾಗಿ ಮೇಲ್ದರ್ಜೆಗೆ ಏರಿಸಬೇಕು. 2019ರಿಂದ ಯಾವುದೇ ಜೇಷ್ಠತಾ ಪಟ್ಟಿ ಬಿಡುಗಡೆಗೊಳಿಸಿಲ್ಲ, ಈ ಕೆಲಸ ತ್ವರಿತವಾಗಿ ಆಗಬೇಕು. ಬಡ್ತಿ ನೀಡಬೇಕು ಹಾಗೂ ಸಾಮಾನ್ಯ ವರ್ಗಾವಣೆ ಅವಧಿ ಮುಗಿದಿದ್ದರೂ ನಿಯಮ ಮೀರಿ ನಿರಂತರ ವರ್ಗಾವಣೆ ಮಾಡುವುದನ್ನು ನಿಲ್ಲಿಸಬೇಕು. ಸ್ಥಳ ನಿಯುಕ್ತಿಗೊಳಿಸದೆ, ವೇತನ ನೀಡದೇ ಸತಾಯಿಸುವುದನ್ನು ಕೈಬಿಡಬೇಕು. ನಮಗೆ ಸರ್ಕಾರ, ಸಚಿವರು ಸ್ಪಂದಿಸಿದರೂ ಹಿರಿಯ ಅಧಿಕಾರಿಗಳು ಇದಕ್ಕೆ ಮನ್ನಣೆ ನೀಡುತ್ತಿಲ್ಲ. ಈ ನಾಲ್ಕು ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.

    ಸಂಘದ ಪದಾಧಿಕಾರಿಗಳಾದ ಪಾತಣ್ಣ, ಶೃತಿ, ಗೌತಮಿ, ವೀರೇಶ್ ದೊಡ್ಡಮನಿ, ಸಂತೋಷ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts