More

    ಅಶಾಂತಿ ಸೃಷ್ಟಿಸುವ ವಾತಾವರಣಕ್ಕೆ ಅವಕಾಶ ಕೊಡಬಾರದು

    ಮೈಸೂರು: ಜಾತಿ ಪ್ರಾಧಿಕಾರಗಳನ್ನು ರಚಿಸಿ ಅಶಾಂತಿ ಸೃಷ್ಟಿಸುವ ವಾತಾವರಣಕ್ಕೆ ಅವಕಾಶ ಕೊಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದರು.
    ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಪ್ರಾಧಿಕಾರಗಳನ್ನು ರಚಿಸುವುದು ಸರಿಯಲ್ಲ. ಈ ನೆಲ ಕರ್ನಾಟಕ ಬಹಳ ವಿಶೇಷವಾದದ್ದು. ಕುವೆಂಪು ಅವರು ಹೇಳಿದಂತೆ ಚೆಲುವ ಕನ್ನಡ ನಾಡು. ಇದು ಶಾಂತಿಯ ನೆಲ ಬೀಡು. ಇಂಥ ನೆಲದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುವುದು ಸರಿಯಲ್ಲ ಎಂದು ತಿಳಿಸಿದರು.
    ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಸಿದ್ದಿಪುರುಷರ ಕಲ್ಪನೆಯಲ್ಲಿ ಸಂವಿಧಾನ ರಚನೆಯಾಗಿದೆ. ಬಸವೇಶ್ವರ, ಅಂಬೇಡ್ಕರ್, ಮಹಾತ್ಮ ಗಾಂಧಿ ಹೆಸರಲ್ಲಿ ಅವರ ಆಶಯಗಳಂತೆ ಸರ್ಕಾರಗಳನ್ನು ನಡೆಸಬೇಕಿದೆ. ಆ ರೀತಿಯಲ್ಲಿ ಆಡಳಿತ ನಡೆಸುವಂತೆ ಕೇಳಿಕೊಳ್ಳುತ್ತೇನೆ ಎಂದು ಪರೋಕ್ಷವಾಗಿ ಟೀಕಿಸಿದರು.
    ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಸಂಪುಟ ವಿಸ್ತರಣೆಯೋ? ಪುನರಚನೆಯೋ? ಅದು ಯಾವಾಗ ಎಂಬುದೆಲ್ಲ ಅಮಿತ್ ಶಾ, ಮೋದಿ ಮತ್ತು ಆ ದೇವರಿಗೆ ಮಾತ್ರ ಗೊತ್ತು. ಒಂದು ಪರಿಪೂರ್ಣವಾದ ಸಂಪುಟದ ಅವಶ್ಯಕತೆ ಇದೆ. ಜನರ ಜೊತೆಯಲ್ಲಿ ಇದ್ದು ಕೆಲಸ ಮಾಡುವ ಸದೃಡ ಸಂಪುಟ ಬೇಕು. ಅದು ಆದಾಗ ಸರ್ಕಾರಕ್ಕೆ ಒಳ್ಳೆಯ ಹೆಸರು ತರುತ್ತದೆ. ದೇವರಾಜ ಅರಸ್ ಕಾಲದಲ್ಲಿ ಸದೃಢ ಸಂಪುಟ ಇದ್ದ ಕಾರಣ ಎರಡು ಬಾರಿ ಆಡಳಿತ ಮಾಡಲು ಸಾಧ್ಯವಾಯಿತು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ದೆಹಲಿ ಕೇಂದ್ರಿತ ಪಕ್ಷಗಳು. ಹಾಗಾಗಿ ಕೆಲವು ನಿರ್ಣಯ ತೆಗೆದುಕೊಳ್ಳಲು ವಿಳಂಬವಾಗುತ್ತದೆ. ಇಲ್ಲಿಯ ಲೆಕ್ಕಚಾರ ಬೇರೆ ಅಲ್ಲಿಯದ್ದೆ ಬೇರೆ ಎಂದರು.
    ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆ ಸಂಬಂಧ ಶೀಘ್ರವಾಗಿ ತೀರ್ಮಾನವಾಗುತ್ತೆ. ನನಗೂ ಸಂಪುಟದಲ್ಲಿ ಸ್ಥಾನ ನೀಡಲು ಅವಕಾಶ ಇದೆ. ಕೊಡುವ ಬಯಕೆಯು ಅವರಿಗೆ ಇದೆ. ನೋಡೋಣ ಏನೇನಾಗುತ್ತೆ ಎಂದು ತಿಳಿಸಿದರು.
    ಮಂಡ್ಯ ಡಿಸಿಸಿ ಬ್ಯಾಂಕ್‌ನಲ್ಲಿ ಬಿಜೆಪಿ ಜೆಡಿಎಸ್ ಜೊತೆ ಒಪ್ಪಂದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಎಚ್.ಡಿ ಕುಮಾರಸ್ವಾಮಿ ಆಗ್ಗಾಗ ಸಖರ ಹುಡುಕಾಟ ನಡೆಸುತ್ತಿರುತ್ತಾರೆ. ಅವರಿಗೆ ಯಾರು ಯಾವಾಗ ಸಖ ಆಗುತ್ತಾರೆ ಗೊತ್ತಿಲ್ಲ. ಸ್ಥಿರತೆ ಸದೃಢತೆಗಾಗಿ ಸಖರ ಹುಡುಕಾಟ ಇರುತ್ತದೆ. ಮುಂದೆ ಯಾರು ಅವರಿಗೆ ಸಖರಾಗುತ್ತಾರೆ ಎಂಬುದು ಗೊತ್ತಿಲ್ಲ ಎಂದು ಕಾಲೆಳೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts