More

    ಅವ್ಯವಹಾರ ತನಿಖೆಗೆ ವಾರದ ಗಡುವು

    ಬೆಳಗಾವಿ: ಕೃಷಿ ಭಾಗ್ಯ ಯೋಜನೆಯಡಿ ಪಾಲಿಹೌಸ್ ನಿರ್ಮಾಣದಲ್ಲಿ ನಡೆದಿರುವ ಭ್ರಷ್ಟಾಚಾರ, ಸಬ್ಸಿಡಿ ಅನುದಾನ ದುರ್ಬಳಕೆ ಕುರಿತು ತನಿಖೆ ನಡೆಸಿ ವಾರದಲ್ಲಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದರು.

    ನಗರದ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಆಯೋಜಿಸಿದ್ದ 2022-23ನೇ ಸಾಲಿನ ಎರಡನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಜಮೀನಿನಲ್ಲಿ ಪಾಲಿಹೌಸ್ ನಿರ್ಮಾಣ ಮಾಡದೇ ಏಜೆಂಟರು, ಕಂಪನಿಗಳು ಸಬ್ಸಿಡಿ ಹಣ ಪಡೆದುಕೊಂಡಿರುವ ಕುರಿತು ಶಾಸಕರು ದಾಖಲೆಗಳ ಸಮೇತ ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ತಾಲೂಕುಗಳಲ್ಲಿ ಏಕಕಾಲದಲ್ಲಿ ತನಿಖೆ ನಡೆಸಬೇಕು. ಯಾರೇ ತಪ್ಪು ಮಾಡಿದರೂ ಮುಲಾಜಿಲ್ಲದೆ ಕೇಸ್ ದಾಖಲಿಸಬೇಕು ಎಂದು ಸೂಚಿಸಿದರು.

    ಕುಡಚಿ ಶಾಸಕ ಪಿ.ರಾಜೀವ ಮಾತನಾಡಿ, ರೈತರ ಜಮೀನುಗಳಲ್ಲಿ ಪಾಲಿಹೌಸ್‌ಗಳೆ ಇಲ್ಲ. ಆದರೆ, ಪಾಲಿಹೌಸ್ ಹೆಸರಿನಲ್ಲಿ ಸಬ್ಸಿಡಿ ಪಡೆಯಲಾಗಿದೆ. ಸಬ್ಸಿಡಿಗಾಗಿಯೇ ಎಜೆಂಟರು, ಕಂಪನಿಗಳು ಪಾಲಿಹೌಸ್ ನಿರ್ಮಿಸುತ್ತಿದ್ದಾರೆ. ರಾಯಬಾಗ ತಾಲೂಕಿನಲ್ಲಿ ಎಸ್ಸಿ, ಎಸ್ಟಿ ಫಲಾನುಭವಿಗಳೊಂದಿಗೆ ಏಜೆಂಟರು ನಿಯಮಬಾಹಿರವಾಗಿ ಒಪ್ಪಂದ ಮಾಡಿಕೊಂಡು ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.

    ರಾಯಬಾಗ ತಾಲೂಕಿನಲ್ಲಿ ಸರ್ಕಾರ ಆಸ್ತಿ ಅತಿಕ್ರಮಣ ಮಾಡಿದ್ದೂ ಅಲ್ಲದೆ, ತೆರವು ಮಾಡಲು ತಡೆಯಾಜ್ಞೆ ತರಲು ಅಧಿಕಾರ ಕೊಟ್ಟವರು ಯಾರು? ಸರ್ಕಾರದ ಆಸ್ತಿ ಅವರಪ್ಪನ ಆಸ್ತಿಯಲ್ಲ. ಅಧಿಕಾರಿಗಳ ಸಹಕಾರ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಸಚಿವರು, ತಕ್ಷಣ ಕಾನೂನು ಕ್ರಮ ಜರುಗಿಸಿ ಅಂಗಡಿ ತೆರವುಗೊಳಿಸಬೇಕು. ಅಲ್ಲದೆ, ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

    ವಸತಿ ಯೋಜನೆ ಅಡಿಯಲ್ಲಿ ಬಡವರಿಗೆ ಸ್ಪಂದಿಸುವ ಮನಸ್ಥಿತಿ ಬ್ಯಾಂಕರ್‌ಗಳಿಗೆ ಇಲ್ಲ. ಹೀಗಾಗಿ ಅರ್ಜಿ ಸಹಿತ ಎಲ್ಲ ದಾಖಲಾತಿ ಸಲ್ಲಿಸಿದ್ದರೂ ವಸತಿ ಯೋಜನೆ ಅಡಿ ಮನೆ ನಿರ್ಮಾಣ ಸಾಲ ಬಿಡುಗಡೆ ಮಾಡುತ್ತಿಲ್ಲ. ಗುತ್ತಿಗೆದಾರ ಮನೆ ಕಟ್ಟದೆ ಹಣ ಬಿಡುಗಡೆಯಾಗದೆ ಫಲಾನುಭವಿಗಳೇ ಕಟ್ಟಿಕೊಳ್ಳಿ ಎಂದು ಕೈ ತೊಳೆದುಕೊಳ್ಳುತ್ತಿದ್ದಾರೆ. ಪೂಜೆ ಮಾಡಿದ 15 ದಿನಗಳಲ್ಲಿ ಮನೆ ನಿರ್ಮಾಣ ಕಾಮಗಾರಿ ಆರಂಭಿಸಬೇಕಿದ್ದರೂ ಮೂರು ತಿಂಗಳಾದರೂ ಕೆಲಸ ಮಾಡುತ್ತಿಲ್ಲ. ಮುರಗಿಂಡಿಯಿಂದ ಗೋಟೂರವರೆಗಿನ ಜಿಲ್ಲಾ ರಸ್ತೆಯನ್ನು ರಾಜ್ಯ ಹೆದ್ದಾರಿ ಮಾಡಿದ್ದಾರೆ. ಚರ್ತುಷ್ಪತ ರಸ್ತೆ ನಿರ್ಮಾಣಕ್ಕೆ ಸ್ವತಃ ನಿತಿನ್ ಗಡ್ಕರಿ ಚಾಲನೆ ನೀಡಿದ್ದರೂ ಇಂದಿಗೂ ಏನಾಗಿದೆ ಎನ್ನುವುದೇ ಗೊತ್ತಿಲ್ಲ ಎಂದು ಶಾಸಕ ಮಹಾಂತೇಶ ದೊಡಗೌಡರ ದೂರಿದರು. ಜಿಲ್ಲೆಯಲ್ಲಿ 27 ಸಕ್ಕರೆ ಕಾರ್ಖಾನೆಗಳಿರುವುದರಿಂದ ವಾಹನಗಳ ಓಡಾಟದಿಂದ ರಸ್ತೆಗಳು ಹಾಳಾಗುತ್ತಿವೆ. ಈ ರಸ್ತೆಗಳ ದುರಸ್ತಿಗೆ ಹೆಚ್ಚುವರಿ ಅನುದಾನ ನೀಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸಚಿವ ಗೋವಿಂದ ಕಾರಜೋಳ ನಿರ್ದೇಶನ ನೀಡಿದರು. ಶಾಸಕರಾದ ಮಹಾಂತೇಶ ಕೌಜಲಗಿ, ದುಯೋರ್ಧನ ಐಹೊಳೆ, ಸಂಸದೆ ಮಂಗಲ ಅಂಗಡಿ, ಡಿಸಿ ನಿತೇಶ ಪಾಟೀಲ, ಜಿಪಂ ಸಿಇಒ ದರ್ಶನ್ ಎಚ್.ವಿ ಇತರರಿದ್ದರು.

    ಕ್ಯಾನ್ಸರ್ ಹಾಸ್ಪಿಟಲ್ ಸೇವೆ ಆರಂಭಿಸಿ

    ಜಿಲ್ಲೆಗೆ ಮಂಜೂರಾಗಿದ್ದ ಕ್ಯಾನ್ಸರ್ ಆಸ್ಪತ್ರೆಯನ್ನು ಬೆಳಗಾವಿ ದಕ್ಷಿಣ ಭಾಗದಲ್ಲಿ ಆರಂಭಿಸಬೇಕು ಎಂದು ಸ್ಥಳ ಪರಿಶೀಲನೆ ನಡೆಸಿ ಆರೋಗ್ಯ ಇಲಾಖೆಯ ಹಳೆಯ ಕಟ್ಟಡದಲ್ಲಿ ಆರಂಭಿಸಲು ಅನುಮತಿ ಸಿಕ್ಕಿತ್ತು. ಆದರೆ, ಈ ಹಿಂದಿನ ಪ್ರಾದೇಶಿಕ ಆಯುಕ್ತರು ಉದ್ದೇಶಪೂರ್ವಕವಾಗಿ ಉತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದು ಶಾಸಕ ಅಭಯ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಗೋವಿಂದ ಕಾರಜೋಳ, ಹೊಸ ಕಟ್ಟಡ ನಂತರ ನೋಡೋಣ, ಹಳೇ ಕಟ್ಟಡದಲ್ಲಿ ಸೇವೆ ಆರಂಭಿಸಿ ಎಂದು ನಿರ್ದೇಶನ ನೀಡಿದರು.

    ಡಿಸೆಂಬರ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ

    ಬೆಳಗಾವಿ ಮಹಾನಗರದ ಬಿಮ್ಸ್ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯಾವಾಗ ಪೂರ್ಣವಾಗುತ್ತದೆ. ಯಾವಾಗ ಹಸ್ತಾಂತರವಾಗುತ್ತದೆ ಎಂಬ ವಿಷಯ ಜನಪ್ರತಿನಿಧಿಗಳಾದ ನಮಗೇ ಗೊತ್ತಾಗುತ್ತಿಲ್ಲ. 18 ತಿಂಗಳಲ್ಲಿ ಮುಗಿಯಬೇಕಾಗಿದ್ದ ಕಾಮಗಾರಿ ಎರಡು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಚಿಕ್ಕೋಡಿ, ಸವದತ್ತಿ, ನಿಪ್ಪಾಣಿಗೆ ಮಂಜೂರಾಗಿದ್ದ ತಾಯಿ-ಮಗು ಆಸ್ಪತ್ರೆ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ ಎಂದು ಶಾಸಕರ ದೂರಿದರು. ಅದಕ್ಕೆ ಸ್ಪಂದಿಸಿದ ಸಚಿವ ಗೋವಿಂದ ಕಾರಜೋಳ, ಡಿ. 12 ರೊಳಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಪೂರ್ಣಗೊಳಿಸಿ ಅಧಿವೇಶನ ಸಮಯದಲ್ಲಿ ಉದ್ಘಾಟನೆಗೊಳಿಸೋಣ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ರಿಸ್ಕ್ ಆ್ಯಂಡ್ ಕಾಸ್ಟ್ ನಿಯಮ ಜಾರಿ ಮಾಡಿ ಎಂದು ಸೂಚನೆ ನೀಡಿದರು.

    50ಕ್ಕೂ ಹೆಚ್ಚು ಜಾನುವಾರು ಸಾವು

    ನೇಸರಗಿ ಗ್ರಾಮವೊಂದರಲ್ಲಿಯೇ 50 ಕ್ಕೂ ಹೆಚ್ಚು ಜಾನುವಾರು ಚರ್ಮಗಂಟು ರೋಗದಿಂದ ಮೃತಪಟ್ಟಿವೆ. ರೋಗ ನಿಯಂತ್ರಣಕ್ಕೆ ಇಲಾಖೆಯಲ್ಲಿ ವೈದ್ಯರು, ಸಿಬ್ಬಂದಿ ಮತ್ತು ಔಷಧ ಕೊರತೆ ಹೆಚ್ಚಿದೆ. ಆದರೆ, ಸಮಯಕ್ಕೆ ಸರಿಯಾಗಿ ಔಷಧ ಪೂರೈಕೆಯಾಗುತ್ತಿಲ್ಲ. ಗಂಭೀರ ಪರಿಸ್ಥಿತಿ ಇರುವ ಕಡೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಿ ನಿರ್ವಹಣೆ ಮಾಡಿ ಎಂದು ಜಿಲ್ಲಾಧಿಕಾರಿಗೆ ಎಂದು ಶಾಸಕ ದೊಡಗೌಡರ ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts