More

    ಅವ್ಯವಹಾರಗಳಿಗೆ ಅವಕಾಶ ನೀಡಬೇಡಿ: ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಹೇಳಿಕೆ

    ಚಿಕ್ಕಬಳ್ಳಾಪುರ : ಸರ್ಕಾರಿ ಸೌಲಭ್ಯ ಸದ್ವಿನಿಯೋಗಪಡಿಸಿಕೊಳ್ಳಬೇಕೆ ಹೊರತು ಅವ್ಯವಹಾರಗಳಿಗೆ ಅವಕಾಶ ನೀಡಬಾರದು ಎಂದು ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಅಭಿಪ್ರಾಯಪಟ್ಟರು.

    ಜಿಪಂ ಸಭಾಂಗಣದಲ್ಲಿ ಬುಧವಾರ ಸರ್ಕಾರಿ ನೌಕರರಿಗೆ ವೈದ್ಯಕೀಯ ವೆಚ್ಚ ಬಿಲ್‌ಗಳ ಚೆಕ್ ವಿತರಿಸಿ ಮಾತನಾಡಿದರು.
    ಸರ್ಕಾರಿ ನೌಕರರ ವೇತನ ಹಾಗೂ ಇತರೆ ಭತ್ಯೆ, ಪರಿಹಾರ ಬಿಲ್‌ಗಳ ಪಾವತಿಯಲ್ಲಿ ವಿಳಂಬವಾಗಬಾರದು. ಹಿಂದೆ ಜಿಲ್ಲೆಯಲ್ಲಿ ವೈದ್ಯಕೀಯ ವೆಚ್ಚದ ಬಿಲ್ ನ ಅರ್ಜಿ 8 ದಿನದೊಳಗೆ ಇತ್ಯರ್ಥವಾಗುತ್ತಿತ್ತು. ಆದರೆ, ಯಾರೋ ಮಾಡಿದ ತಪ್ಪಿಗೆ ಕಳೆದ 4 ವರ್ಷಗಳಿಂದಲೂ ಸರ್ಕಾರಿ ನೌಕರರಿಗೆ ಹಣವನ್ನು ನೀಡಿಲ್ಲ. ಇದಕ್ಕೆ ಮುಂಬರುವ ದಿನಗಳಲ್ಲಿ ಅವಕಾಶ ನೀಡುವುದಿಲ್ಲ ಎಂದರು.

    ಸರ್ಕಾರಿ ಸವಲತ್ತುಗಳನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಇದರಿಂದ ಅರ್ಹ ಫಲಾನುಭವಿಗಳಿಗೆ ನ್ಯಾಯ ಸಿಗುತ್ತದೆ ಎಂದರು.ಭವಿಷ್ಯದ ದೃಷ್ಟಿಯಿಂದ ಪ್ರತಿಯೊಬ್ಬರು ಸಂಪಾದನೆಯಲ್ಲಿ ಉಳಿತಾಯ ಮಾಡಬೇಕು. ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು. ಸರ್ಕಾರಿ ನೌಕರರಿಗೆ ಉದ್ಯೋಗ ಭದ್ರತೆ ಇರುತ್ತದೆ. ಒಳ್ಳೆಯ ಸವಲತ್ತುಗಳು ಸಿಗುತ್ತವೆ. ಇದನ್ನು ಸದ್ವಿನಿಯೋಗಪಡಿಸಿಕೊಂಡು ಜನರಿಗೆ ಉತ್ತಮ ಸೇವೆ ನೀಡಬೇಕು. ಆಗ ಮಾತ್ರ ಕೆಲಸಕ್ಕೆ ಸಾರ್ಥಕತೆ ಬರುತ್ತದೆ. ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ಕಡ್ಡಾಯವಾಗಿ ಕಚೇರಿ ಆವರಣ ಸೇರಿ ಸೂಕ್ತ ಪ್ರದೇಶಗಳಲ್ಲಿ ಹೆಚ್ಚಿಗೆ ಗಿಡಗಳನ್ನು ಬೆಳೆಸಬೇಕು. ಹಸಿರು ವಾತಾವರಣ ನಿರ್ಮಿಸುವ ಮೂಲಕ ಜನರನ್ನು ಆಕರ್ಷಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಹೆಚ್ಚಿನ ಗಮನಹರಿಸಬೇಕು ಎಂದು ತಿಳಿಸಿದರು.

    ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿ, ಸರ್ಕಾರಿ ನೌಕರರಿಗೆ ವೈದ್ಯಕೀಯ ವೆಚ್ಚ ಬಿಲ್‌ಗಳನ್ನು ಕೊಡುವುದರಲ್ಲಿ ವಿಳಂಬವಾದಾಗ ಸಂಬಂಧಪಟ್ಟವರು ಗಮನ ಸೆಳೆಯಬೇಕು. ಆಗ ತ್ವರಿತವಾಗಿ ಸಮಸ್ಯೆ ಬಗೆಹರಿಸಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.ಜಿಪಂ ಸಿಇಒ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಕರೊನಾ ಸೋಂಕಿನ ನಡುವೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದೆ. ಇದನ್ನು ಯಶಸ್ವಿಗೊಳಿಸಲು ಶಿಕ್ಷಣ ಇಲಾಖೆ ಶ್ರಮಿಸಬೇಕು. ಅದರಲ್ಲೂ ಶಿಕ್ಷಕರು ಪರೀಕ್ಷೆ ಪ್ರಾರಂಭಕ್ಕೂ ಮೊದಲು ಪರಸ್ಪರ ಅಂತರ ಕಾಯ್ದುಕೊಳ್ಳುವಿಕೆ, ಕಡ್ಡಾಯವಾಗಿ ಮಾಸ್ಕ್ ಧರಿಸುವಿಕೆ, ಸ್ಯಾನಿಟೈಜರ್ ಬಳಕೆ ಬಗ್ಗೆ ವಿದ್ಯಾರ್ಥಿಗಳಿಗೆ ಸಲಹೆ ನೀಡಬೇಕು. ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದರು.ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಜಿ.ನಾಗೇಶ್, ವೃತ್ತ ನಿರೀಕ್ಷಕ ಎಚ್.ವಿ.ಸುದರ್ಶನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ ಮತ್ತಿತರರು ಇದ್ದರು.

    183 ಮಂದಿಗೆ ಚೆಕ್ ವಿತರಣೆ : ಕಾರ್ಯಕ್ರಮದಲ್ಲಿ 183 ಮಂದಿ ಸರ್ಕಾರಿ ನೌಕರರರಿಗೆ ವೈದ್ಯಕೀಯ ವೆಚ್ಚ ಮತ್ತು ಇತರೆ ಬಿಲ್ ಗಳ ಚೆಕ್ ವಿತರಿಸಲಾಗಿತ್ತು. ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಕಚೇರಿಯ ಗುಮಾಸ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಹಿಯನ್ನು ನಕಲು ಮಾಡಿ, ಹಲವು ನೌಕರರಿಗೆ ಬಿಲ್ ಹಣವನ್ನು ಕೊಡಿಸಿದ್ದು ಲಕ್ಷಾಂತರ ರೂ ಅವ್ಯವಹಾರದ ಆರೋಪ ಕೇಳಿ ಬಂತು. ಈ ಬಗ್ಗೆ ಡಿಎಚ್‌ಒ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಇದರ ನಡುವೆ ಅಕ್ರಮ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅರ್ಹ ಅನೇಕ ನೌಕರರಿಗೆ ಬಿಲ್ ಮಂಜೂರಾಗಿರಲಿಲ್ಲ. 4 ವರ್ಷ ಚಾತಕ ಪಕ್ಷಿಗಳಂತೆ ಕಾಯಬೇಕಾಯಿತು. ಕೊನೆಗೆ ಇದರ ಬಗ್ಗೆ ಹಲವರು ಅಳಲು ತೋಡಿಕೊಂಡ ಹಿನ್ನೆಲೆಯಲ್ಲಿ ಪರಿಶೀಲಿಸಿ, ಅರ್ಹರಿಗೆ ಚೆಕ್ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts