More

    ಅವ್ಯವಸ್ಥೆ ಆಗರವಾದ ಸರ್ಕಾರಿ ಕಟ್ಟಡ

    ಬೆಳಗಾವಿ: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ, ಮಹತ್ವದ ಇಲಾಖೆಗಳ ಕಚೇರಿಗಳನ್ನು ಹೊಂದಿರುವ ಜಿಲ್ಲಾ ಪಂಚಾಯಿತಿ ಹಳೇ ಕಟ್ಟಡ ಅವ್ಯವಸ್ಥೆಯ ಆಗರವಾಗಿದೆ. ಸುಣ್ಣ, ಬಣ್ಣವಾಗಿ ದಶಕ ಕಳೆದಿದೆ. ಕಟ್ಟಡದ ಅವಶೇಷಗಳು ಹಾಗೂ ಮುರಿದ ಪಿಠೋಪಕರಣಗಳು ಕಟ್ಟಡದಲ್ಲಿ ತುಂಬಿವೆ. ಧೂಳು ತಿಂದ ಕುರ್ಚಿ, ಟೇಬಲ್‌ಗಳು ಸಾರ್ವಜನಿಕರನ್ನು ಸ್ವಾಗತಿಸುತ್ತಿವೆ. ಕಟ್ಟಡದ ಗೋಡೆಗಳು ಸುಣ್ಣ, ಬಣ್ಣವಿಲ್ಲದೇ ಮಂಡಕ್ಕಿ ಬಟ್ಟಿಯಂತೆ ಭಾಸವಾಗುತ್ತಿವೆ. ಅಧಿಕಾರಿಗಳು ಇಂತಹ ವ್ಯವಸ್ಥೆ ನಡುವೆ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಹಳೇ ಕಟ್ಟಡವಾಗಿದ್ದರಿಂದ ಕಟ್ಟಡದ ಗೋಡೆಯ ಹೊರಭಾಗದಲ್ಲಿ ಗಿಡ-ಗಂಟಿ, ಕಸ ಬೆಳೆದಿದೆ. ಅಧಿಕಾರಿಗಳು ಪ್ರತಿನಿತ್ಯ ಇದೇ ಆವರಣದಲ್ಲಿ ಸಂಚರಿಸುತ್ತಾರೆಯಾದರೂ ಕಟ್ಟಡವನ್ನು ಕಂಡೂ ಕಾಣದಂತೆ ಮೌನವಹಿಸಿದ್ದಾರೆ. ಇನ್ನು ಮಳೆಗಾಲದಲ್ಲಂತೂ ಈ ಕಟ್ಟಡ ಸೋರುತ್ತದೆ.
    ದಶಕದಿಂದ ಇಂತಹ ಸಮಸ್ಯೆ ಇದ್ದರೂ ಅಧಿಕಾರಿಗಳು ಪರ್ಯಾಯ ಕ್ರಮ ಕೈಗೊಳ್ಳುತ್ತಿಲ್ಲ. ಅನಿವಾರ್ಯವಾಗಿ ಅಧಿಕಾರಿಗಳು ಕಚೇರಿ ಕಾರ್ಯಗಳನ್ನು ಮುಂದುವರಿಸಿದ್ದಾರೆ.

    ಕಟ್ಟಡದಲ್ಲಿವೆ ಮಹತ್ವದ ಕಚೇರಿಗಳು: ಜಿಲ್ಲಾಧಿಕಾರಿ ಅವರ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರ ಕಾರ್ಯಾಲಯ, ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ನಗರ ಭೂ ಮಾಪನ ಕಾರ್ಯಾಲಯ, ಕರ್ನಾಟಕ ಲೋಕಸೇವಾ ಆಯೋಗದ ಪ್ರಾಂತ್ರೀಯ ಕಚೇರಿ, ರಾಜ್ಯಸಭಾ ಸದಸ್ಯರ ಜನಸಂಪರ್ಕ ದಂತಹ ಪ್ರಮುಖ ಕಚೇರಿಗಳು ಇದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ದಿನಂಪ್ರತಿ ಸಾವಿರಾರು ಜನರು ತಮ್ಮ ಕೆಲಸ-ಕಾರ್ಯಗಳಿಗೆ ಈ ಕಟ್ಟಡಕ್ಕೆ ಭೇಟಿ ಕೊಡುತ್ತಾರೆ. ಅವರಿಗೆ ಕುಳಿತುಕೊಳ್ಳುವುದಕ್ಕೆ ಸರಿಯಾದ ಆಸನ ವ್ಯವಸ್ಥೆಯಿಲ್ಲ.

    ಧೂಳು ತಿಂದ ನೆಲಹಾಸು, ಮೆಟ್ಟಿಲುಗಳು ಅಧಿಕಾರಿಗಳ ಜಿಡ್ಡುಗಟ್ಟಿದ ಆಡಳಿತವನ್ನು ಎತ್ತಿ ತೋರಿಸುತ್ತವೆ. ನಿತ್ಯ ಈ ಕಟ್ಟಡಗಳಲ್ಲಿರುವ ಕಚೇರಿಗಳ ಕಾರ್ಯ ಚಟುವಟಕೆಗಳನ್ನು ಗಮನಿಸಿಯಾದರೂ ಈ ಕಟ್ಟಡಕ್ಕೆ ಕಾಯಕಲ್ಪ ಕಲ್ಪಿಸಬೇಕೆಂಬ ಒತ್ತಾಯ ನಾಗರಿಕರಿಂದ ವ್ಯಕ್ತವಾಗುತ್ತಿದೆ. ಅಲ್ಲಿರುವ ಸಿಬ್ಬಂದಿ ಪ್ರಕಾರ ಮಳೆಗಾಲದಲ್ಲಿ ಈ ಕಟ್ಟಡ ಸೋರುತ್ತದೆ. ಸುಮಾರು 11 ವರ್ಷಗಳಿಂದ ಇದೇ ಪರಿಸ್ಥಿತಿಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ಹೇಳುತ್ತಾರೆ. ಪ್ರಮುಖ ಸರ್ಕಾರಿ ಕಾರ್ಯಾಲಯವಿರುವ ಈ ಕಟ್ಟಡವನ್ನು ವ್ಯವಸ್ಥಿತವಾಗಿ ಇಡಬೇಕು ಎನ್ನುವುದು ಪ್ರಜ್ಞಾವಂತರ ಅಪೇಕ್ಷೆ.

    ಕ್ರಮಕ್ಕಿಲ್ಲ ಆಸಕ್ತಿ

    ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಈ ಕಟ್ಟಡವು ಬಹಳ ಹಳೇದಾಗಿದ್ದರಿಂದ ಹಾಗೂ ನಿರ್ವಹಣೆ ಇಲ್ಲದ್ದರಿಂದ ಕಟ್ಟಡದ ಗೋಡೆಗಳಲ್ಲಿ ಕಸ ಬೆಳೆದಿದ್ದು, ಮಳೆಗಾಲದಲ್ಲಿ ಸೋರುತ್ತದೆ. ಗೋಡೆಗಳ ಹೊರಗೆ ಕಾಣಿಸುವ ಗಿಡಗಳನ್ನು ಕಿತ್ತು, ಸ್ವಚ್ಛತೆ ಮಾಡಿಸುವುದಕ್ಕೆ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ.

    ಈ ಕಟ್ಟಡದ ಮೆಟ್ಟಿಲುಗಳ ಮೇಲೆ ಕಾಲಿಟ್ಟರೆ ಧೂಳು ಮೆತ್ತಿಕೊಳ್ಳುತ್ತದೆ. ಕಚೇರಿಯಲ್ಲಿ ಸ್ವಚ್ಛತೆ ಇಲ್ಲ. ಸಾರ್ವಜನಿಕರಿಗೆ ಕುಳಿತುಕೊಳ್ಳುವುದಕ್ಕೆ ಸರಿಯಾದ ವ್ಯವಸ್ಥೆಯಿಲ್ಲ. ನಿತ್ಯ ಬಹಳಷ್ಟು ಜನರು ಕಚೇರಿಗಳು ಬರುತ್ತಾರೆ. ವರ್ಷಗಳಿಂದ ಕಟ್ಟಡ ಸುಧಾರಣೆ ಕಂಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕಟ್ಟಡ ನವೀಕರಿಸಲು ಮುಂದಾಗಬೇಕು.
    | ಬಸವರಾಜ ಬೆಂಗೇರಿ ಸ್ಥಳೀಯ ನಿವಾಸಿ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts