More

    ಅವ್ಯವಸ್ಥೆಯ ಆಗರ ಬೆಳ್ಳಟ್ಟಿಯ ಮುರಾರ್ಜಿ ವಸತಿ ಶಾಲೆ

    ಶಿರಹಟ್ಟಿ: ಸ್ನಾನಕ್ಕೆ ನೀರಿಲ್ಲ, ಶೌಚಗೃಹಗಳ ಕೊರತೆ, ಅಡುಗೆಗೆ ಕೊಳೆತ ತರಕಾರಿ ಬಳಕೆ, ದೊಡ್ಡ ಗೋದಾಮಿನಲ್ಲಿ ಮಕ್ಕಳ ವಾಸ, ಶಿಕ್ಷಕರ ಕೊರತೆ… ಹೇಳುತ್ತ ಹೋದರೆ ಸಮಸ್ಯೆಗಳ ಸರಮಾಲೆಯೇ ಆಗುತ್ತದೆ. ಇದು ತಾಲೂಕಿನ ಬೆಳ್ಳಟ್ಟಿಯಲ್ಲಿರುವ ಮುರಾರ್ಜಿ ವಸತಿ ಶಾಲೆಯ ದುಸ್ಥಿತಿ.
    ವಡವಿ ಗ್ರಾಮಕ್ಕೆ ಮಂಜೂರಾದ ಶಾಲೆಯ ಕಟ್ಟಡ ನಿರ್ಮಾಣ ಆರಂಭವಾಗಿ ಮೂರು ವರ್ಷ ಕಳೆದರೂ ಪೂರ್ಣವಾಗಿಲ್ಲ. ಹೀಗಾಗಿ, ಸದ್ಯ ಬೆಳ್ಳಟ್ಟಿ ಗ್ರಾಮದಲ್ಲಿ ಗೋದಾಮಿನಂತಹ ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಸಲಾಗುತ್ತಿದೆ. ಇಲ್ಲಿ 6ರಿಂದ 10ನೇ ತರಗತಿವರೆಗಿನ 205 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾರೆ.
    ಮಕ್ಕಳಿಗೆ ಮಲಗಲು ಹಾಸಿಗೆ ಇಲ್ಲ, ತಾವೇ ಮನೆಯಿಂದ ತಂದ ಚಾಪೆ ಹಾಸಿಕೊಂಡು ಅನಿವಾರ್ಯತೆ ಇದೆ. ಮಳೆ ಬಂದರೆ ತಗಡಿನ ಮೇಲ್ಛಾವಣಿ ಸೋರುತ್ತದೆ. ಸರಿಯಾದ ವೈರಿಂಗ್ ವ್ಯವಸ್ಥೆ ಇಲ್ಲದ ಕಾರಣ ಮಕ್ಕಳಿಗೆ ಆಗಾಗ ವಿದ್ಯುತ್ ರ್ಸ³ಸಿದ ಅನುಭವವಾಗಿದೆ. ಇನ್ನು ಶಾಲೆಯಲ್ಲಿ ಕಾಯಂ ಶಿಕ್ಷಕರು, ವಾರ್ಡನ್ ಕೊರತೆ ಇದೆ. ಇಷ್ಟೆಲ್ಲ ಸಮಸ್ಯೆಗಳಿಂದ ಬೇಸತ್ತ ಪಾಲಕರು ಶುಕ್ರವಾರ ಪತ್ರಕರ್ತರನ್ನ ಶಾಲೆಗೆ ಕರೆಯಿಸಿ ಅಳಲು ತೋಡಿಕೊಂಡು, ತಾಲೂಕು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕಿದರು.
    ‘ನೀರು ಇಲ್ಲದ್ದಕ್ಕ 2-3 ದಿನಕ್ಕೊಮ್ಮೆ ಸ್ನಾನ ಮಾಡಬೇಕಾದ ಅನಿವಾರ್ಯತೆ ಇದೆ. ನಾವು ಮನೆಯಿಂದ ತಂದ ಚಾಪೆಯ ಮೇಲೆ ಮಲಗಬೇಕು, ಹಾಸಿಗೆ ಏನೂ ಕೊಟ್ಟಿಲ್ಲ. ಮಳೆ ಬಂದ್ರ ವಾಸದ ಕೋಣೆ ಸೋರತೇತಿ. ರಾತ್ರಿ ಆದಂತೆ ಸೊಳ್ಳೆ ಕಾಟದಿಂದ ನಿದ್ರೆ ಮಾಡೋದು ಕಷ್ಟಾಗೇತ್ರಿ’ ಎಂದು ಮಕ್ಕಳು ತಮ್ಮ ಸಮಸ್ಯೆ ಹೇಳಿಕೊಂಡರು. ಈ ಕುರಿತು ಪ್ರತಿಕ್ರಿಯಿಸಿದ ಪ್ರಾಚಾರ್ಯ ಎನ್.ಸಿ.ಕೆ. ಪಾಟೀಲ, ‘ಕಳೆದ 4-5 ತಿಂಗಳ ಹಿಂದೆ ಇಲ್ಲಿಗೆ ಕರ್ತವ್ಯಕ್ಕೆ ಬಂದ ಮೇಲೆ ವಸತಿ ಶಾಲೆಯ ವಾಸ್ತವಿಕ ಪರಿಸ್ಥಿತಿ ಹಾಗೂ ಸಮಸ್ಯೆಗಳ ಬಗ್ಗೆ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಪ್ರಶಾಂತ ವರಗಪ್ಪನವರ ಅವರಿಗೆ ತಿಳಿಸಿದ್ದೇನೆ. ಸುಸಜ್ಜಿತ ಕಟ್ಟಡದ ಅಗತ್ಯವಿದ್ದು ಸಾಧ್ಯವಾದರೆ ಲಕ್ಷೆ್ಮೕಶ್ವರ ಸ್ಥಳಾಂತರಿಸುವುದು ಸೂಕ್ತ ಎಂದು ತಿಳಿಸಿದ್ದಾರೆ. ಕೊಳೆತ ತರಕಾರಿ ಬಳಕೆ ವಿಷಯ ಇಂದೇ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಅಡುಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಮಕ್ಕಳ ಹಿತರಕ್ಷಣೆಯತ್ತ ಗಮನ ಹರಿಸುತ್ತೇನೆ’ ಎಂದು ತಿಳಿಸಿದರು.


    ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಶಾಲೆಯನ್ನು ಬೇರೆಡೆ ವರ್ಗಾಯಿಸಲು ಸೂಚನೆ ನೀಡಿದ್ದೇನೆ. ಬೆಳ್ಳಟ್ಟಿ ಗ್ರಾಮದಲ್ಲಿ ಸುಸಜ್ಜಿತ ಕಟ್ಟಡ ಒದಗಿಸಿಕೊಟ್ಟರೆ ನನ್ನದೇನೂ ಅಭ್ಯಂತರವಿಲ್ಲ. ಉಳಿದಂತೆ ಮಕ್ಕಳಿಗೆ ಶುಚಿರುಚಿಯಾದ ಊಟ ಹಾಗೂ ಅಗತ್ಯ ಸೌಲಭ್ಯದತ್ತ ಗಮನ ಹರಿಸಲು ಪ್ರಾಚಾರ್ಯ, ಶಿಕ್ಷಕರಿಗೆ ಸೂಚನೆ ನೀಡುತ್ತೇನೆ.
    | ಪ್ರಶಾಂತ ವರಗಪ್ಪನವರ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ


    ವಡವಿ ಗ್ರಾಮಕ್ಕೆ ಮಂಜೂರಿಯಾದ ಮುರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದೆ. ತಾತ್ಕಾಲಿಕವಾಗಿ ಬೆಳ್ಳಟ್ಟಿಯಲ್ಲಿ ಆರಂಭಿಸಿದ ವಸತಿ ಶಾಲೆಯಲ್ಲಿ ಮಕ್ಕಳಿಗೆ ತೊಂದರೆಯಾಗದಂತೆ ಶಾಲೆ ಮುಂದುವರೆಸಿದರೆ ಈ ಭಾಗದ ಮಕ್ಕಳಿಗೆ ಅನುಕೂಲ. ಲಕ್ಷೆ್ಮೕಶ್ವರಕ್ಕೆ ವರ್ಗಾಯಿಸಿದರೆ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ.
    | ರಮೇಶ ಗುಳೇದ ವಡವಿ ಗ್ರಾಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts