More

    ಅವಿರೋಧ ಆಯ್ಕೆಯ ಭರವಸೆ

    ಶಿರಸಿ: ಕೆಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ನಾನು ಅವಿರೋಧವಾಗಿ ಆಯ್ಕೆಯಾಗುವ ಸಂಪೂರ್ಣ ವಿಶ್ವಾಸವಿದೆ ಎಂದು ಬ್ಯಾಂಕ್​ನ ನಿಕಟಪೂರ್ವ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಎಸ್.ಎಲ್. ಘೊಟ್ನೇಕರ ವಿಶ್ವಾಸ ವ್ಯಕ್ತಪಡಿಸಿದರು.

    ಹಳಿಯಾಳ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮತ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅವರು ನಗರದ ಕೆಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

    ಈ ಬಾರಿಯ ಕೆಡಿಸಿಸಿ ಬ್ಯಾಂಕ್ ಚುನಾವಣೆ ಹಿಂದಿನ ಅವಧಿಯಂತಿಲ್ಲ. ಪ್ರಸಕ್ತ ಸಾಲಿನ ಅಖಾಡ ತುರುಸಿನಿಂದ ಕೂಡಿದೆ. ಆದರೆ, ನಾನು ಹಾಗೂ ಜೊಯಿಡಾದ ಕೃಷ್ಣ ದೇಸಾಯಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಜತೆಗೆ ಈ ಹಿಂದಿನಂತೆ ಈ ಬಾರಿಯೂ ಎಲ್ಲರ ಸಹಕಾರ ನೀಡಿದರೆ ನಾಲ್ಕನೇ ಬಾರಿ ಅಧ್ಯಕ್ಷನಾಗುವೆ ಎಂದರು.

    ಯಾರೇ ನಿರ್ದೇಶಕರಾಗಿ ಆಯ್ಕೆಯಾಗಿ ಬಂದರೂ ಬ್ಯಾಂಕಿನ ಘನತೆ- ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ಆಡಳಿತ ಮಂಡಳಿಯಲ್ಲಿ ರಾಜಕೀಯ ತರಬಾರದು. ರೈತರ ಕಾಮಧೇನುವಾದ ಬ್ಯಾಂಕಿನಿಂದ ಕೃಷಿಕರಿಗೆ ಸಕಾಲಕ್ಕೆ ಸಾಲ ನೀಡುವುದರ ಜತೆಗೆ ಅವರ ಬೆನ್ನೆಲುಬಾಗಿ ನಿಲ್ಲಬೇಕು ಎಂದರು.ಶಿವರಾಮ ಹೆಬ್ಬಾರ ಬಿಜೆಪಿ ಸೇರ್ಪಡೆಯಿಂದ ಯಾವುದೇ ಅಡ್ಡಿ ಆತಂಕವಿಲ್ಲ. ನಮ್ಮಿಬ್ಬರ ರಾಜಕೀಯ ಪಕ್ಷ ಬೇರೆಯಾದರೂ ಗೆಳೆತನ ಮಾತ್ರ ಇಂದಿಗೂ ಇದೆ. ಹೀಗಾಗಿ ಕೆಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಯಾವುದೇ ನಷ್ಟವಿಲ್ಲ. ಸಹಕಾರ ಭಾರತಿ ಸಂಘಟನೆ ಮುಂದಾಳತ್ವದಲ್ಲಿ ಕೆಲ ಸಹಕಾರಿಗಳು ಚುನಾವಣೆಗೆ ಸ್ಪರ್ಧಿಸುತ್ತಿರುವುದರ ಬಗ್ಗೆ ಪ್ರಶ್ನಿಸಿದಾಗ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಚುನಾವಣೆಯ ಫಲಿತಾಂಶ ಬಂದ ನಂತರ ಎಲ್ಲವೂ ಗೊತ್ತಾಗಲಿದೆ ಎಂದರು.

    ಕೊನೆಯ ದಿನ ಇಂದು
    ಕೆಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ನ. 11ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ನ.3 ಕೊನೆಯ ದಿನವಾಗಿದೆ. ಸೋಮವಾರ 7 ಅಭ್ಯರ್ಥಿಗಳಿಂದ 13 ನಾಮಪತ್ರ ಸಲ್ಲಿಕೆಯಾಗಿವೆ. ಅರ್ಬನ್ ಬ್ಯಾಂಕ್ ಹಾಗೂ ಕೃಷಿಯೇತರ ಸಹಕಾರಿ ಸಂಘದ ಮತಕ್ಷೇತ್ರದಿಂದ ಅಂಕೋಲಾದ ವಸಂತ ಗೋವಿಂದ ನಾಯಕ ಎರಡು ನಾಮಪತ್ರ ಹಾಗೂ ಮುಂಡಗೋಡಿನ ಶ್ರೀಧರ ಡೋರಿ ಒಂದು ನಾಮಪತ್ರ ಸಲ್ಲಿಸಿದ್ದಾರೆ.

    ಮುಂಡಗೋಡ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮತಕ್ಷೇತ್ರಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಎಲ್.ಟಿ. ಪಾಟೀಲ ಮೂರು, ಹಳಿಯಾಳ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮತ ಕ್ಷೇತ್ರದಿಂದ ನಿಕಟಪೂರ್ವ ಅಧ್ಯಕ್ಷ ಎಸ್.ಎಲ್.ಘೊಟ್ನೇಕರ 2, ಹೊನ್ನಾವರ ತಾಲೂಕಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮತಕ್ಷೇತ್ರದಿಂದ ನಿಕಟಪೂರ್ವ ನಿರ್ದೇಶಕ ಶಿವಾನಂದ ಹೆಗಡೆ 3, ಜೊಯಿಡಾ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕ್ಷೇತ್ರದಿಂದ ಕೃಷ್ಣ ದೇಸಾಯಿ 1 ನಾಮಪತ್ರ, ಔದ್ಯೋಗಿಕ ಸಹಕಾರ ಸಂಘಗಳ ಕ್ಷೇತ್ರದಿಂದ ಹೊನ್ನಾವರದ ವಿಶ್ವನಾಥ ಭಟ್ಟ 1 ನಾಮಪತ್ರ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts