More

    ಅವಳಿ ನಗರದಲ್ಲಿ ವಿದ್ಯುತ್ ಚಿತಾಗಾರವಿಲ್ಲ

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕಳೆದ 10-15 ದಿನಗಳಿಂದ ಕರೊನಾದಿಂದ ನಿತ್ಯ 5ರಿಂದ 8 ಜನ ಸಾವನ್ನಪ್ಪುತ್ತಿದ್ದಾರೆ. ಉಳಿದ ಕಾಯಿಲೆಗಳಿಂದ ನಿಧನರಾಗುವವರೂ ಇದ್ದಾರೆ. ಅವಳಿ ನಗರದಲ್ಲಿ ಶವ ಸಂಸ್ಕಾರಕ್ಕೆ ಇಲ್ಲಿಯವರೆಗೆ ಸಮಸ್ಯೆಯಾಗಿಲ್ಲ. ಮುಂದಿನ ದಿನಗಳು ಹೇಗೆ ಎಂದು ಹೇಳಲು ಬರುವುದಿಲ್ಲ. ಈ ನಡುವೆ ಹು-ಧಾದ ಜನತೆ ವಿದ್ಯುತ್ ಚಿತಾಗಾರಕ್ಕೆ ಪರಿತಪಿಸುತ್ತಿದ್ದಾರೆ.

    ಅಂದಾಜು 10 ಲಕ್ಷ ಜನಸಂಖ್ಯೆ (2011ರ ಜನಗಣತಿ ಪ್ರಕಾರ) ಇರುವ ಅವಳಿ ನಗರದಲ್ಲಿ ಒಂದೂ ವಿದ್ಯುತ್ ಚಿತಾಗಾರವಿಲ್ಲ. ಹಳೇ ಹುಬ್ಬಳ್ಳಿ ಹೆಗ್ಗೇರಿ ಸ್ಮಶಾನದಲ್ಲಿ ಹಲವು ವರ್ಷಗಳ ಹಿಂದೆಯೇ ಪಾಲಿಕೆಯಿಂದ ವಿದ್ಯುತ್ ಚಿತಾಗಾರ ಸ್ಥಾಪಿಸಲಾಗಿತ್ತು. ಆದರೆ, ಜನ ಬಳಕೆ ಮಾಡದ ಹಿನ್ನೆಲೆಯಲ್ಲಿ ಸೂಕ್ತ ನಿರ್ವಹಣೆಯಿಲ್ಲದೆ ಅಂದಾಜು 12 ವರ್ಷಗಳಿಂದ ಬಂದ್ ಆಗಿದೆ.

    ಉಳಿದಂತೆ ಅವಳಿ ನಗರದಲ್ಲಿ ವಿವಿಧೆಡೆ ಕಟ್ಟಿಗೆಗೆ ಅಗ್ನಿಸ್ಪರ್ಶ ಮಾಡಿ ಶವ ಸಂಸ್ಕಾರ ಮಾಡುವ ವ್ಯವಸ್ಥೆ ಇದೆ. ಹಳೇ ಹುಬ್ಬಳ್ಳಿ ಹೆಗ್ಗೇರಿಯಲ್ಲೂ ಇಂಥ ವ್ಯವಸ್ಥೆ ಇದೆ. ಕರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಸಹ ನಡೆಸಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕರೊನಾದಿಂದ ಮೃತಪಟ್ಟರ ಸಂಖ್ಯೆ 130ರ ಗಡಿ ದಾಟಿದೆ. ನಿತ್ಯದ ಸೋಂಕಿತರ ಸಂಖ್ಯೆ 170-180ರ ಆಸುಪಾಸಿನಲ್ಲಿದೆ.

    ಕರೊನಾಘಾತದ ಹಿನ್ನೆಲೆಯಲ್ಲಿ ಅವಳಿ ನಗರದಲ್ಲಿ ವಿದ್ಯುತ್ ಚಿತಾಗಾರದ ಅವಶ್ಯಕತೆಯಿದೆ ಎಂಬುದು ಇದೀಗ ಆಡಳಿತ ಯಂತ್ರದ ಅನುಭವಕ್ಕೆ ಬರುತ್ತಿದೆ. ವಿದ್ಯಾನಗರ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ಸ್ಥಾಪನೆಗೆ ಪಾಲಿಕೆ ಮುಂದಾಗಿದ್ದು, ಇತ್ತೀಚೆಗೆ ಟೆಂಡರ್ ಕರೆದಿದೆ. ಸಿವಿಲ್ ಕಾಮಗಾರಿ ಸೇರಿದಂತೆ ಅಂದಾಜು 1 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ಸ್ಥಾಪನೆಯಾಗಲಿದೆ. ಟೆಂಡರ್ ಅನುಮೋದನೆಗೊಂಡು ಕಾರ್ಯಾದೇಶ ನೀಡಿ ಕಾಮಗಾರಿ ಪೂರ್ಣಗೊಳ್ಳಲು ಒಂದೆರಡು ವರ್ಷವೇ ಹಿಡಿಯಬಹುದು. ಅಲ್ಲಿಯವರೆಗೆ ವಿದ್ಯುತ್ ಚಿತಾಗಾರ ಕಾರ್ಯಾಚರಣೆ ಮಾಡಲು ಸಾಧ್ಯವಿಲ್ಲ,

    ಸ್ಮಾರ್ಟ್ ಸಿಟಿಯಲ್ಲಿ: ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಟೂರ ರಸ್ತೆ ಹರಿಶ್ಚಂದ್ರ ಘಾಟ್​ನಲ್ಲಿ 2.9 ಕೋ. ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ನಿರ್ವಿುಸಲಾಗುತ್ತಿದೆ. ಬೆಂಗಳೂರಿನ ಬಿ.ಎನ್. ಗಿರೀಶ ಎಂಬುವವರು ಗುತ್ತಿಗೆ ಪಡೆದಿದ್ದು, ಕಾರ್ಯಾದೇಶ ಪಡೆದಿದ್ದಾರೆ. ಇಲ್ಲಿ ವ್ಹೇಟಿಂಗ್ ರೂಂ ಹಾಗೂ ಫರ್ನೆಸ್ ರೂಂ ಇರಲಿದೆ.

    ಸ್ಮಾರ್ಟ್ ಸಿಟಿ ಯೋಜನೆಯಡಿ ವಿದ್ಯುತ್ ಚಿತಾಗಾರ ನಿರ್ವಣಕ್ಕೆ 3-4 ವರ್ಷಗಳ ಹಿಂದೆಯೇ ಟೆಂಡರ್ ಕರೆಯಲಾಗಿತ್ತು. 3 ಬಾರಿ ಟೆಂಡರ್ ರದ್ದಾಗಿತ್ತು. 4ನೇ ಬಾರಿ ಕರೆದ ಟೆಂಡರ್​ನಲ್ಲಿ ಕಾಮಗಾರಿ ಅಖೈರುಗೊಂಡಿದೆ. ಗುತ್ತಿಗೆದಾರ ಬಿ.ಎನ್. ಗಿರೀಶ ಅವರಿಗೆ ಡಿಸೆಂಬರ್ 2019ರಲ್ಲಿ ಕಾಮಗಾರಿ ಆರಂಭಿಸಲು ಹು-ಧಾ ಸ್ಮಾರ್ಟ್ ಸಿಟಿ ಕಂಪನಿ ಕಾರ್ಯಾದೇಶ ನೀಡಿತ್ತು. ಆದರೆ, ಅವರು ಕಾಮಗಾರಿ ಆರಂಭಿಸದ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 20ರಂದು ನೋಟಿಸ್ ನೀಡಲಾಗಿತ್ತು. ಆದರೆ, ಇದೀಗ ಕಾಮಗಾರಿ ಆರಂಭಗೊಂಡಿದೆ.

    ವಿದ್ಯುತ್ ಚಿತಾಗಾರದಲ್ಲಿ ಶವ ಸಂಸ್ಕಾರ ಮಾಡಿದರೆ ಮೃತ ವ್ಯಕ್ತಿಯ ಮೂಳೆ ಹಾಗೂ ಬೂದಿ ಸಿಗುವುದಿಲ್ಲ ಎಂಬ ಕೊರಗು ಸಾಮಾನ್ಯ ಜನರದ್ದಾಗಿದೆ. ಈ ಕಾರಣಕ್ಕೆ ಹೆಗ್ಗೇರಿಯ ವಿದ್ಯುತ್ ಚಿತಾಗಾರವನ್ನು ಜನರು ಬಳಕೆ ಮಾಡಿರಲಿಲ್ಲವಂತೆ. ಆದರೆ, ಇದೀಗ ವಿದ್ಯುತ್ ಚಿತಾಗಾರದಲ್ಲಿ ಬೂದಿಯನ್ನು ಪ್ರತ್ಯೇಕಿಸುವ ವ್ಯವಸ್ಥೆ ಇದೆಯಂತೆ.

    ಹುಬ್ಬಳ್ಳಿ ಮಂಟೂರ ರಸ್ತೆಯಲ್ಲಿ ವಿದ್ಯುತ್ ಚಿತಾಗಾರ ನಿರ್ವಣಕ್ಕೆ ಬೆಂಗಳೂರಿನ ಬಿ.ಎನ್. ಗಿರೀಶ ಅವರಿಗೆ ಟೆಂಡರ್ ಅನುಮೋದನೆಯಾಗಿ ಕಾರ್ಯಾದೇಶ ನೀಡಲಾಗಿದೆ. ಕರೊನಾದಿಂದ ಕಾಮಗಾರಿ ಆರಂಭಕ್ಕೆ ವಿಳಂಬವಾಗಿದೆ. ಆ ಪ್ರದೇಶದಲ್ಲಿ ಹೆಚ್ಚು ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವುದರಿಂದ ಹಾಗೂ ಕಂಟೇನ್ಮೆಂಟ್ ವಲಯಗಳೆಂದು ಘೊಷಿಸಲ್ಪಟ್ಟಿರುವುದರಿಂದ ಗುತ್ತಿಗೆದಾರರು ಹಿಂದೇಟು ಹಾಕಿದ್ದಾರೆ.

    | ಎಸ್.ಎಚ್. ನರೇಗಲ್

    ವಿಶೇಷಾಧಿಕಾರಿ, ಹು-ಧಾ ಸ್ಮಾರ್ಟ್ ಸಿಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts