More

    ಅರ್ಹರಿಗೆ ನಿವೇಶನ ವಿತರಿಸಲು ಆದ್ಯತೆ ವಹಿಸಿ -ಸಂಸದ ಸಿದ್ದೇಶ್ವರ ಸೂಚನೆ- ದಿಶಾ ಸಮಿತಿ ಸಭೆ 

    ದಾವಣಗೆರೆ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಫಲಾನುಭವಿ ಆಯ್ಕೆ ಪಟ್ಟಿಗೆ ತಡೆಹಿಡಿದಿರುವ ಲೋಕಾಯುಕ್ತರಿಂದ ಸ್ಪಷ್ಟೀಕರಣ ಪಡೆದು ಅರ್ಹರಿಗೆ ನಿವೇಶನ ವಿತರಿಸುವಂತೆ ಸಂಸದ ಜಿ.ಎಂ.ಸಿದ್ದೇಶ್ವರ ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಜಿಪಂ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
    ವಿವಿಧ ವಸತಿ ಯೋಜನೆಗಳಡಿ ಮನೆ, ನಿವೇಶನ ಹೊಂದಿದ್ದ 1577 ಅರ್ಜಿದಾರರನ್ನು ಕೈಬಿಡಲಾಗಿದೆ ಎಂದು ಜಿಪಂ ಸಿಇಒ ಸುರೇಶ್ ಬಿ ಇಟ್ನಾಳ್ ತಿಳಿಸಿದರು. ದಾವಣಗೆರೆ ಉತ್ತರ ಕ್ಷೇತ್ರದ 966 ಹಾಗೂ ದಕ್ಷಿಣ ಕ್ಷೇತ್ರದ 1404 ನಿವೇಶನಗಳ ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿಲ್ಲ ಎಂಬ ಕಾರಣಕ್ಕೆ ಹಂಚಿಕೆ ಮಾಡದಂತೆ ಇತ್ತೀಚೆಗೆ ಭೇಟಿ ನೀಡಿದ್ದ ಲೋಕಾಯುಕ್ತರು ತಡೆಹಿಡಿದಿದ್ದಾರೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ಸಭೆಗೆ ತಿಳಿಸಿದರು.
    ನಿವೇಶನ, ಮನೆ ಹೊಂದಿದವರಿಗೆ ಯೋಜನೆಯಡಿ ನಿವೇಶನ ನೀಡಬೇಕಿಲ್ಲ. ಹಾಗೆಂದು ಅರ್ಹರಿಗೆ ನಿವೇಶನ ನೀಡುವುದು ನಿಲ್ಲಬಾರದು. ಈ ಬಗ್ಗೆ ಲೋಕಾಯುಕ್ತರಿಗೆ ಮನವರಿಕೆ ಮಾಡಿಕೊಡಿ ಎಂದು ಸಂಸದರು ಸಲಹೆ ನೀಡಿದರು.
    ವಸತಿ ಯೋಜನೆಯಡಿ 1.5 ಲಕ್ಷ ರೂ.ನಂತೆ ಹಣ ಹೊಡೆದಿದ್ದಾಗಿ ಜಿಲ್ಲಾ ಸಚಿವರು ನನ್ನ ಬಗ್ಗೆ ಆರೋಪಿಸಿದ್ದಾರೆ. ದುಡ್ಡು ತಿನ್ನೋದು ನನಗೆ ಗೊತ್ತಿಲ್ಲ. ವಸತಿ ಯೋಜನೆಯಡಿ ಅಕ್ರಮವಾಗಿದ್ದಲ್ಲಿ ತನಿಖೆ ಆಗಲಿ ಎಂದೂ ತಿಳಿಸಿದರು.
    *ಅನುದಾನ ಹೆಚ್ಚಳಕ್ಕೆ ಕಲಾಪದಲ್ಲಿ ಪ್ರಸ್ತಾವ
    ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸಮುದಾಯ ಶೌಚಗೃಹಕ್ಕೆ 3 ಲಕ್ಷ ರೂ.ಗಳ ಘಟಕ ವೆಚ್ಚ ಬಳಸಲಾಗುತ್ತಿದೆ. ಇದರಲ್ಲಿ 2.10 ಲಕ್ಷ ರೂ.ಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಇದರಲ್ಲಿ ಗುಣಮಟ್ಟ ಕಾಮಗಾರಿ ಆಗದು ಎಂದು ಸಿಇಒ ಹೇಳಿದರು.
    ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಸಮುದಾಯ ಶೌಚಗೃಹಕ್ಕೆ 25 ಲಕ್ಷ ರೂ. ಅನುದಾನ ನೀಡಲು ತೀರ್ಮಾನಿಸಿದೆ. ಅಷ್ಟು ನೆರವು ಸಿಕ್ಕರೆ ಉತ್ತಮ ಸೌಲಭ್ಯ ಕಲ್ಪಿಸಬಹುದು ಎಂದರು. ಅನುದಾನ ಹೆಚ್ಚಿಸಲು ಲೋಕಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ ಸಂಸದರು ನೀರಿದ್ದಲ್ಲಿ ಮಾತ್ರವೇ ಶೌಚಗೃಹ ಕಟ್ಟಿ ಎಂದರು.
    ಸ್ವಚ್ಛ ಭಾರತ ಮಿಷನ್‌ನಡಿ ರಾಜ್ಯ ಗುಣಮಟ್ಟ ನಿಯಂತ್ರಣ ಸಮಿತಿ ಆಕ್ಷೇಪಿಸಿದ 6 ಕಾಮಗಾರಿ ಕುರಿತು ಕ್ರಮ ಕೈಗೊಳ್ಳುವುದಾಗಿ ಸಿಇಒ ತಿಳಿಸಿದರು.
    ಮಲೇಬೆನ್ನೂರಿನ ಘನ ತ್ಯಾಜ್ಯ ಘಟಕ ನಿರ್ಮಾಣದಲ್ಲಿನ ಕಳಪೆ ಬಗ್ಗೆ ಸಂಸದರು ಕಿಡಿಕಾರಿದಾಗ ಜೆಇ ಹಾಲೇಶಪ್ಪ ವಿರುದ್ಧ ಶೋಕಾಸ್ ನೋಟಿಸ್ ನೀಡಿ ಶಿಸ್ತುಕ್ರಮ ಕೈಗೊಳ್ಳುವುದಾಗಿ ಯೋಜನಾ ನಿರ್ದೇಶಕರು ತಿಳಿಸಿದರು.
    ಮಾಯಕೊಂಡ, ಕೊಡಗನೂರು ಸೇರಿ ಕೆಲವು ಪಂಚಾಯ್ತಿಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಬಗ್ಗೆ ಸುಳ್ಳು ವರದಿ ನೀಡಿದ್ದು ದೊಡ್ಡ ಹಗರಣ ನಡೆದಿದೆ. ಪಂಚಾಯ್ತಿಗಳ ಅಧ್ಯಕ್ಷರೂ ಶಾಮೀಲಾಗಿದ್ದಾರೆಂದು ಟಿ.ಎಚ್.ವೆಂಕಟೇಶಪ್ಪ ದೂರಿದರು. ಪರಿಶೀಲಿಸುವುದಾಗಿ ಸಿಇಒ ಹೇಳಿದರು.
    * ಫಸಲ್ ಭಿಮಾ ನೋಂದಣಿ ಹೆಚ್ಚಿಸಿ
    ಈ ವರ್ಷ ಬರಗಾಲ ಎದುರಾದರೆ ವಿಮೆ ಹಣ ಅನುಕೂಲವಾಗಲಿದೆ. ಹೆಚ್ಚು ರೈತರನ್ನು ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ನೋಂದಣಿ ಮಾಡಿಸಬೇಕು. ಇದನ್ನು 1 ಲಕ್ಷಕ್ಕೆ ಏರಿಸಬೇಕು ಎಂದೂ ಸಂಸದರು ಹೇಳಿದರು.
    ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಗುಣಮಟ್ಟದ ಆಹಾರ ನೀಡುತ್ತಿಲ್ಲ ಎಂದು ಸದಸ್ಯ ಭಾಗ್ಯಾ ಪಿಸಾಳೆ ದೂರಿದರು. ಜೇಡ ಊಟದಲ್ಲಿ ಬಿದ್ದರೆ ವಿಷ ಆಗಲಿದೆ. ಗುತ್ತಿಗೆದಾರರು ಸ್ವಚ್ಛತೆ ಕಾಪಾಡದಿದ್ದಲ್ಲಿ ಏಜೆನ್ಸಿ ಬದಲಾಯಿಸಿ ಎಂದು ಸಂಸದರು ತಿಳಿಸಿದರು.
    ಅಂಗನವಾಡಿ ಕೇಂದ್ರಗಳಿಗೆ ಕಡಿಮೆ ತೂಕದ ಮೊಟ್ಟೆ ಸರಬರಾಜು ಆಗಿದ್ದರ ಹಿನ್ನೆಲೆಯಲ್ಲಿ ವ್ಯತ್ಯಾಸದ ಮೊತ್ತವನ್ನು ಏಜೆನ್ಸಿಯವರಿಗೆ ನೀಡಿದ ಬಿಲ್‌ನಲ್ಲಿ ಕಡಿತ ಮಾಡಲಾಗಿದೆ ಎಂದು ಸಿಇಒ ತಿಳಿಸಿದರು.
    ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ ಮಲೇಬೆನ್ನೂರು ಜಾಮಿಯಾ ಮಸೀದಿಯಲ್ಲಿ ನಡೆದಿದೆ ಎನ್ನಲಾದ 2 ಕೋಟಿ ಹಗರಣದ ತನಿಖೆಗೆ ಆಡಳಿತಾಧಿಕಾರಿಯಾಗಿ ಹರಿಹರದ ವೈದ್ಯರನ್ನು ನಿಯಮಬಾಹಿರವಾಗಿ ನೇಮಿಸಲಾಗಿದೆ. ಇದು ವಕ್ಫ್ ಬೋರ್ಡ್‌ನ ದುರಂಹಕಾರದ ತೀರ್ಮಾನ ಎಂದು ದೂರಿದರು.
    ನನಗೆ ಜನಸಂಪರ್ಕ ಕಚೇರಿಗೆ ಜಾಗ ನೀಡಲಾಗಿಲ್ಲ. ಆದರೆ ರಾಜಕೀಯ ಪಕ್ಷವೊಂದರ ಮುಖಂಡ ಶೈಲೇಂದ್ರ ಎಂಬುವರಿಗೆ ಸರ್ಕಾರದ ಕಟ್ಟಡವೊಂದನ್ನು ನೀಡಲಾಗಿದೆ. ಡಿಎಚ್‌ಒ ಜಿಪಂ ಹಿಡಿತದಲ್ಲಿ ಇಲ್ಲದಿರುವುದು ಸ್ಪಷ್ಟವಾಗಿದೆ ಎಂದು ದೂರಿದರು. ಎರಡೂ ವಿಷಯಗಳಲ್ಲಿ ಪರಿಶೀಲನೆ ನಡೆಸುವುದಾಗಿ ಸಿಇಒ ತಿಳಿಸಿದರು.
    ಡಿಎಚ್‌ಒ ವಿರುದ್ಧ ಸಾಕಷ್ಟು ದೂರುಗಳಿವೆ. ಜಗಳೂರು ಶವಾಗಾರ ಅವ್ಯವಸ್ಥೆಯಿಂದ ಕೂಡಿದೆ. ಅಧಿಕಾರಿಗಳು ಗಮನಿಸಿಲ್ಲ ಎಂದು ಶಾಸಕ ದೇವೇಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ದಿಶಾ ಸಮಿತಿ ಸದಸ್ಯರಾದ ಎಂ.ಎಸ್.ಮಂಜುನಾಥ್, ಗಂಗಾಧರ, ಎಂ.ಗುರುನಾಥ, ಸ್ವಾತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts