More

    ಅರಕಲಗೂಡು ಗಡಿ ಭಾಗದಲ್ಲಿ ಕಾಡಾನೆಗಳ ಹಾವಳಿ

    ಅರಕಲಗೂಡು: ತಾಲೂಕಿನ ಕೊಡಗು ಗಡಿ ಭಾಗದ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಬೆಳೆಗಳನ್ನು ತುಳಿದು ಹಾನಿ ಮಾಡಿ ಜನರಲ್ಲಿ ಆತಂಕ ಮೂಡಿಸಿವೆ.
    ತಾಲೂಕಿನ ಗಡಿ ಭಾಗದ ಬೈಸೂರು, ಮದಲಾಪುರ, ಕೆಲಗಳಲೆ, ಮಾಗಲು, ಬಾಗ್ದಾಳ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೂರು ಕಾಡಾನೆಗಳು ಅಡ್ಡಾಡುತ್ತಿದ್ದು, ಕಾಫಿ, ಶುಂಠಿ, ಬಾಳೆ, ಜೋಳ ಮತ್ತಿತರ ಬೆಳೆಗಳನ್ನು ತುಳಿದು ನಾಶ ಮಾಡುತ್ತಿವೆ. ಕೆಲ ದಿನಗಳಿಂದ ಒಂಟಿ ಆನೆಯೊಂದು ಆಹಾರ ಅರಸಿ ಕಾಡಿನಿಂದ ನಾಡಿನತ್ತ ಬಂದಿದ್ದು, ಮದಲಾಪುರ, ಕೆಲಗಳಲೆ, ಬಾಗ್ದಾಳ್ ಭಾಗಗಳಲ್ಲಿ ಬೆಳೆ, ಜಮೀನುಗಳಲ್ಲಿ ಮೋಟಾರ್ ಪೈಪ್‌ಗಳನ್ನು ತುಳಿದು ಹಾನಿಪಡಿಸುತ್ತಿದೆ.
    ಕೊಡಗು ಗಡಿ ಭಾಗದ ಗಂಗಾವರ ಹಾಗೂ ಬೈಸೂರು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಮೂರು ಕಾಡಾನೆಗಳು ಸಂಜೆಯಾದೊಡನೆ ಜಮೀನಿಗೆ ಲಗ್ಗೆ ಇಡುತ್ತಿವೆ. ರಾತ್ರಿಯಿಡಿ ಬೆಳೆಗಳನ್ನು ತಿಂದು, ತುಳಿದು ಬೆಳಗಾಗುವಷ್ಟರಲ್ಲಿ ಅರಣ್ಯ ಪ್ರದೇಶಕ್ಕೆ ಮರಳುತ್ತಿವೆ. ರೈತರ ಜಮೀನಿಗೆ ಲಗ್ಗೆ ಇಡುತ್ತಿರುವ ಕಾಡು ಪ್ರಾಣಿಗಳು ಬೆಳೆಗಳನ್ನು ನಾಶಪಡಿಸಿ ಸಂಕಷ್ಟಕ್ಕೆ ದೂಡುತ್ತಿವೆ. ಇದರಿಂದ ರೈತರು ಜೀವನ ನಡೆಸಲು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾಡುಪ್ರಾಣಿಗಳ ಹಾವಳಿಗೆ ಅಂಕುಶ ಹಾಕಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
    ಈ ಭಾಗದಲ್ಲಿ ಆನೆಗಳ ಹಾವಳಿ ನಿರಂತರವಾಗಿ ನಡೆಸುತ್ತಲೇ ಬಂದಿದ್ದು, ಬೆಳೆಗಳನ್ನು ಕಳೆದುಕೊಂಡು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಗ್ದಾಳ್ ಗ್ರಾಮದ ರಸ್ತೆ ಬದಿಯಲ್ಲೇ ಕಳೆದ ಎರಡು ದಿನಗಳಿಂದ ಒಂಟಿ ಆನೆಯೊಂದು ಅಡ್ಡಾಡುತ್ತಿದ್ದು, ಜನರು ಓಡಾಡಲು ಜೀವಭಯ ಉಂಟಾಗಿದೆ ಎಂದು ಬಾಗ್ದಾಳ್ ನಿವಾಸಿ ಕಾಂತರಾಜು ತಿಳಿಸಿದ್ದಾರೆ. ಮೂರು ಕಾಡಾನೆಗಳು ಹಗಲು ಹೊತ್ತು ಅರಣ್ಯ ಪ್ರದೇಶದಲ್ಲಿದ್ದು, ರಾತ್ರಿ ವೇಳೆ ಜಮೀನಿಗೆ ನುಗ್ಗುತ್ತಿವೆ. ಹೀಗಾಗಿ ಆನೆಗಳನ್ನು ಓಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ರಘು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts