More

    ಅಮ್ಮನಕೊಪ್ಪ ದೇವಿಯ ಹೊನ್ನಾಟ

    ಹಳಿಯಾಳ: ಅಮ್ಮನಕೊಪ್ಪದ ಶ್ರೀ ಗ್ರಾಮದೇವಿಯ ಜಾತ್ರೆಯ ಪ್ರಮುಖ ಆಕರ್ಷಣೀಯಗಳಲ್ಲಿ ಒಂದಾದ ಶ್ರೀಲಕ್ಷ್ಮೀದೇವಿ (ದ್ಯಾಮವ್ವಾ)ಯ ಎರಡು ದಿನಗಳ ಹೊನ್ನಾಟ ಬುಧವಾರದಿಂದ ಆರಂಭಗೊಂಡಿತು. ಹದಿನೈದು ವರ್ಷಗಳ ನಂತರ ನಡೆದ ಹೊನ್ನಾಟದ ಪಲ್ಲಕ್ಕಿಯನ್ನು ಹೊತ್ತ ಅಮ್ಮನಕೊಪ್ಪ ಗ್ರಾಮದ ಭಕ್ತರು ಭಂಡಾರದೋಕುಳಿಯಲ್ಲಿ ಮಿಂದೆದ್ದು ಸಂಭ್ರಮಿಸಿದರು.

    ಬೆಳಗ್ಗೆ ಇಲ್ಲಿಯ ಗ್ರಾಮದೇವಿ ದೇವಸ್ಥಾನದಲ್ಲಿ ನಡೆದ ಧಾರ್ವಿುಕ ವಿಧಿಯಲ್ಲಿ ದೇವಸ್ಥಾನ ಟ್ರಸ್ಟ್ ಸಮಿತಿ ಹಾಗೂ ಭಕ್ತರು ಪೂಜಾವಿಧಿ ಸಲ್ಲಿಸಿ ಗ್ರಾಮದೇವಿಯ ಹೊನ್ನಾಟ ಶಾಸ್ತ್ರೋಕ್ತವಾಗಿ ಆರಂಭಿಸಿದರು.

    ಉದೋ ಉದೋ: ದೇವಿ ಉದೋ ಉದೋ, ಹರ ಹರ ಮಹಾದೇವ, ಜೈ ಭವಾನಿ ಜೈ ಶಿವಾಜಿ‘ ಎಂಬ ಮುಗಿಲು ಮುಟ್ಟುವ ಉದ್ಗೋಷಗಳು ಜೈಕಾರಗಳು, ವಾದ್ಯ ಮೇಳಗಳ ನಿನಾದಗಳ ನಡುವೆ ಗ್ರಾಮದೇವಿಯ ಹೊನ್ನಾಟದ ಪಲ್ಲಕಿಯು ಮೊದಲ ಸಂಚಾರವನ್ನು ಆರಂಭಿಸಿ ಗ್ರಾಮದಲ್ಲಿನ ಎಲ್ಲ ಪ್ರಮುಖ ಓಣಿಗಳಲ್ಲಿ ಸುತ್ತು ಹಾಕಿ, ಕೆಲಕಾಲ ಗ್ರಾಮದ ಪಕ್ಕದಲ್ಲಿನ ಗದ್ದೆಯಲ್ಲಿ ವಿರಮಿಸಿ ತದನಂತರ ಗ್ರಾಮದಲ್ಲಿನ ದೇವಸ್ಥಾನಗಳಿಗೆ ಭೇಟಿ ನೀಡಿತು.

    ಮನೆ ಮನೆಗೆ ದೇವಿ: ಗ್ರಾಮಾಂತರ ಭಾಗದಲ್ಲಿಯೂ ಅದರಲ್ಲಿಯೂ ಮರಾಠಾ ಸಮುದಾಯ ಬಾಹುಳ್ಯವಿರುವ ಗ್ರಾಮದಲ್ಲಿ ಹೊನ್ನಾಟಕ್ಕೆ ವಿಶೇಷ ಮಾನ್ಯತೆ ನೀಡಲಾಗುತ್ತಿದೆ. ನಿತ್ಯ ದೇವಸ್ಥಾನದಲ್ಲಿ ವಿರಾಜಮಾನಳಾಗಿ ಭಕ್ತರಿಗೆ ದರ್ಶನ ನೀಡುವ ಗ್ರಾಮದೇವಿಯು, ಜಾತ್ರೆಯ ನಿಮಿತ್ತ ನಡೆಯುವ ಹೊನ್ನಾಟದ ದಿನ ಗ್ರಾಮದ ಸಮಸ್ಯೆ, ಜನರ ಸಂಕಷ್ಟಗಳನ್ನು ಅರಿಯಲು ಗ್ರಾಮ ಸಂಚಾರ ಮಾಡುತ್ತಾಳೆ ಎಂಬ ನಂಬಿಕೆ ಮನೆಮಾಡಿದೆ. ಹೀಗೆ ಗ್ರಾಮದ ಸಂಚಾರ ಕೈಗೊಂಡು ಭಕ್ತಾದಿಗಳ ಮನೆಗಳಿಗೆ ತಲುಪಿ ದರ್ಶನ ನೀಡುವ ಸೌಭಾಗ್ಯವನ್ನು ಗ್ರಾಮದೇವಿಯು ನೀಡುತ್ತಾಳೆ. ಪ್ರತಿಯೊಬ್ಬರ ಬೇಡಿಕೆ ಆಲಿಸುತ್ತಾಳೆ ಎಂಬ ನಂಬಿಕೆ ಬೇರೂರಿದೆ.

    ಬಹುವರ್ಷಗಳ ನಂತರ ಜಾತ್ರೆ ನಡೆಯುತ್ತಿರುವುದರಿಂದ ಇಡೀ ಗ್ರಾಮವನ್ನು ಕೇಸರಿ ಪತಾಕೆ ಹಾಗೂ ಧ್ವಜಗಳಿಂದ ಸಿಂಗರಿಸಲಾಗಿದೆ. ಪ್ರತಿ ಮನೆಗಳು ಮದುವೆ ಮನೆಯಂತೆ ಸಿಂಗಾರಗೊಂಡಿವೆ. ಜಾತ್ರೆಗೆ ಬರುವ ಅತಿಥಿಗಳ ಆತಿಥ್ಯಕ್ಕಾಗಿ ಗ್ರಾಮದ ಪ್ರತಿ ಮನೆಗಳ ಎದುರು, ಅಕ್ಕಪಕ್ಕ ಭವ್ಯವಾದ ಹಂದರಗಳನ್ನು (ಪೆಂಡಾಲ್​ಗಳನ್ನು) ಹಾಕಲಾಗಿದೆ. ಶ್ರೀ ಲಕ್ಷ್ಮೀದೇವಿಯು ಗ್ರಾಮದಲ್ಲಿ ಸಂಚಾರ ಕೈಗೊಳ್ಳುತ್ತಿರುವುದರಿಂದ ಪ್ರತಿ ಮನೆಯ ಅಂಗಳಗಳನ್ನು ರಂಗೋಲಿ, ಹೂವಿನ ಅಲಂಕಾರದಿಂದ ಸಿಂಗರಿಸಲಾಗಿತ್ತು. ದೇವಿಯ ಎರಡನೇ ದಿನದ ಹೊನ್ನಾಟ ಗುರುವಾರ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts