More

    ಅಭಿವೃದ್ಧಿ ವಿಚಾರದಲ್ಲಿ ಬೇಡ ರಾಜಕೀಯ

    ಶಿವಮೊಗ್ಗ: ಕರೊನಾ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಥಗಿತಗೊಂಡಿದ್ದ ಎಲ್ಲ ಕಾಮಗಾರಿಗಳಿಗೂ ಚಾಲನೆ ದೊರೆತ್ತಿದ್ದು ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಹೇಳಿದರು.

    ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್​ಸಿಟಿ ಲಿಮಿಟೆಡ್ ಆಶ್ರಯದಲ್ಲಿ 80 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಎಲ್ಲ ಸ್ಮಾರ್ಟ್​ಸಿಟಿಗಳಲ್ಲೂ ಈಗಾಗಲೇ ಕಾಮಗಾರಿಗಳು ಆರಂಭಗೊಂಡಿವೆ. ಶಿವಮೊಗ್ಗವನ್ನು ಮಾದರಿ ನಗರವನ್ನಾಗಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗಿದೆ ಎಂದರು.

    ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಶಿವಮೊಗ್ಗಕ್ಕೆ ವಿಶೇಷ ಒತ್ತು ನೀಡುವಂತೆ ನಿರ್ದೇಶನ ನೀಡಿದ್ದಾರೆ. ಅದರಂತೆ ಸ್ಮಾರ್ಟ್​ಸಿಟಿ ಯೋಜನೆಯಡಿ 80 ಕೋಟಿ ರೂ. ವೆಚ್ಚದ ಹಲವು ಕಾಮಗಾರಿಗಳಿಗೆ ಚಾಲನೆ ಸಿಕ್ಕಿದೆ ಎಂದು ಹೇಳಿದರು.

    ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ಸಮಸ್ಯೆಗಳಿದ್ದರೆ ನೇರವಾಗಿ ಗಮನಕ್ಕೆ ತನ್ನಿ ಬಗೆಹರಿಸಲಾಗುವುದು. ಅದನ್ನು ಬಿಟ್ಟು ಪ್ರತಿಭಟನೆ ಹಾದಿ ಹಿಡಿಯುವುದು ಒಳ್ಳೆಯದಲ್ಲ. ಅಭಿವೃದ್ಧಿಗೆ ಪೂರಕವಾಗಿ ಕೈಜೋಡಿಸಿ ಎಂದು ಪಾಲಿಕೆ ಪ್ರತಿಪಕ್ಷದವರಿಗೆ ಮನವಿ ಮಾಡಿದ ಅವರು, ಕಾಮಗಾರಿಗಳ ನೇತೃತ್ವವನ್ನು ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರು ವಹಿಸಲಿದ್ದಾರೆ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಶಿವಮೊಗ್ಗದಲ್ಲಿ ಚುನಾವಣೆ ಇದ್ದಾಗ ಮಾತ್ರ ರಾಜಕಾರಣ ಮಾಡಲಾಗುತ್ತಿದೆ. ಉಳಿದಂತೆ ಅಭಿವೃದ್ಧಿ ವಿಚಾರದಲ್ಲಿ ಸರ್ವ ಪಕ್ಷದವರು ಸಹೋದರರಂತೆ ಇದ್ದೇವೆ. ಎಲ್ಲ ಕೆಲಸಗಳಿಗೂ ಸಹಕಾರ ನೀಡುತ್ತಾರೆ ಎಂದರು.

    ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಸ್ಮಾರ್ಟ್​ಸಿಟಿ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ಮಾಡಬೇಕಿದೆ. ಕಳಪೆಯಾಗಿ ಮಾಡಬಾರದು. ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ತಿಂಗಳೊಳಗೆ ಕೇಂದ್ರದ ಸಚಿವರು ಸ್ಮಾರ್ಟ್​ಸಿಟಿ ಕಾಮಗಾರಿಗಳ ವೀಕ್ಷಣೆಗೆ ರಾಜ್ಯಕ್ಕೆ ಆಗಮಿಸಲಿದ್ದು, ಅಷ್ಟರೊಳಗೆ ಕೆಲವೊಂದು ಕಾಮಗಾರಿ ಮುಗಿಸಬೇಕಿದೆ ಎಂದು ಸೂಚಿಸಿದರು.

    ಶಿಷ್ಠಾಚಾರ ಉಲ್ಲಂಘಿಸಿದ್ದಕ್ಕೆ ಕಾಂಗ್ರೆಸ್ ಪ್ರತಿಭಟನೆ: ಸ್ಮಾರ್ಟ್​ಸಿಟಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಿಷ್ಠಾಚಾರ ಉಲ್ಲಂಘಿಸಲಾಗಿದೆ ಎಂದು ಪಾಲಿಕೆ ಪ್ರತಿಪಕ್ಷದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸಭಾಂಗಣದಲ್ಲೇ ಪ್ರತಿಭಟಿಸಿದರು. ಪ್ರತಿಪಕ್ಷದ ನಾಯಕನನ್ನೇ ಸಮಾರಂಭಕ್ಕೆ ಆಹ್ವಾನಿಸಿಲ್ಲ. ಇದು ಸಂಪೂರ್ಣ ಬಿಜೆಪಿ ಕಾರ್ಯಕ್ರಮವಾಗಿದೆ ಎಂದು ದೂರಿದರು. ಮೂವರು ಸಚಿವರಿರುವ ಕಾರ್ಯಕ್ರಮದಲ್ಲಿ ಕುಳಿತುಕೊಳ್ಳಲು ಚೇರ್ ಇಲ್ಲವೆಂದು ನೆಲದ ಮೇಲೆ ಕುಳಿತರು. ಈ ವೇಳೆ ಸ್ಥಳಕ್ಕೆ ಬಂದ ಡಿಸಿ ಕೆ.ಬಿ.ಶಿವಕುಮಾರ್ ಪ್ರತಿಭಟನಾಕಾರರ ಮನವೊಲಿಸಿದರು.

    ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಕೆ.ಬಿ.ಅಶೋಕನಾಯ್್ಕ ಎಂಎಲ್​ಸಿಗಳಾದ ಆಯನೂರು ಮಂಜುನಾಥ, ಆರ್.ಪ್ರಸನ್ನಕುಮಾರ್, ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಡಿಸಿ ಕೆ.ಬಿ.ಶಿವಕುಮಾರ್, ಸ್ಮಾರ್ಟ್​ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ, ಡಿ.ಎಸ್.ಅರುಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts