More

    ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ

    ಮುಂಡರಗಿ: ಸ್ಥಳೀಯ ಪುರಸಭೆಯಲ್ಲಿ ಸಿಬ್ಬಂದಿ ಕೊರತೆ ಇದೆ. ನೂತನ ಸದಸ್ಯರ ಆಡಳಿತ ಕಮಿಟಿಯೂ ರಚನೆಯಾಗಿಲ್ಲ. ಹೀಗಾಗಿ, ಪಟ್ಟಣದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ. ಜತೆಗೆ, ಸಾರ್ವಜನಿಕ ಕೆಲಸಗಳಿಗೂ ಹಿನ್ನಡೆಯಾಗುತ್ತಿದೆ.

    ಉತಾರ ನೀಡುವುದು, ಖಾತೆ ಬದಲಾವಣೆ ಮಾಡುವುದು ವಿಳಂಬವಾಗುತ್ತಿದೆ. ಕುಡಿಯುವ ನೀರು ಪೂರೈಕೆ, ಬೀದಿದೀಪ ನಿರ್ವಹಣೆ ಹಾಗೂ ಇತರೆ ಕಾರ್ಯಗಳು ಸಮರ್ಪಕವಾಗಿ ಆಗುತ್ತಿಲ್ಲ.

    2017ರಲ್ಲಿ ಪುರಸಭೆ ವ್ಯಾಪ್ತಿಯ ಶಿರೋಳ ಗ್ರಾಮದ ಬಳಿ ನಿರ್ಗತಿಕರಿಗೆ ಆಶ್ರಯ ಮನೆ ನಿರ್ವಿುಸಲು 2.5 ಕೋಟಿ ರೂ. ವೆಚ್ಚದಲ್ಲಿ 25 ಎಕರೆ ಭೂಮಿ ಖರೀದಿಸಲಾಗಿದೆ. ಆದರೆ, ಜಮೀನು ಅಭಿವೃದ್ಧಿಪಡಿಸಿ ವಸತಿ ರಹಿತರಿಗೆ ನಿವೇಶನ ಹಂಚುವ ಕಾರ್ಯ ನಡೆಯುತ್ತಿಲ್ಲ.

    ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ 2016ರಲ್ಲಿ 205 ಕೋಟಿ ರೂ. ವೆಚ್ಚದಲ್ಲಿ ಹೂವಿನಹಡಗಲಿ ಮಾರ್ಗವಾಗಿ ಮುಂಡರಗಿ- ಹರಪನಹಳ್ಳಿ ಹೆದ್ದಾರಿ ರಸ್ತೆ ಕಾಮಗಾರಿ ಪ್ರಾರಂಭಿಸಲಾಗಿತ್ತು. ಗುತ್ತಿಗೆ ಪಡೆದಿದ್ದ ಡಿಬಿಎಲ್ ಟೋಲ್ ವೇಜ್ ಲಿಮಿಟೆಡ್ ಕಂಪನಿಯವರು 2 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಅವಧಿ ಮುಗಿದು ಒಂದು ವರ್ಷ ಕಳೆದರೂ ಪುರಸಭೆ ವ್ಯಾಪ್ತಿಯ ಹೆಸರೂರ ವೃತ್ತದಿಂದ ಹೆಸ್ಕಾಂ ಕಚೇರಿವರೆಗೆ ರಸ್ತೆ ವಿಭಜಕ, ಚರಂಡಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಿಲ್ಲ.

    ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ವತಿಯಿಂದ ಪುರಸಭೆ ವ್ಯಾಪ್ತಿಯ ಪ್ರತಿ ಮನೆಗಳಿಗೆ ನಿರಂತರ ನೀರು ಪೂರೈಸುವ ಯೋಜನೆಯನ್ನು 2018ರ ಮಾರ್ಚ್​ನಲ್ಲಿ 17.43 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಿತು. ಗುತ್ತಿಗೆ ಪಡೆದಿದ್ದ ಎಎಸ್​ಆರ್ ಇಂಜಿನಿಯರಿಂಗ್ ಕಂಪನಿಯು 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಅವಧಿ ಪೂರ್ಣಗೊಂಡು ಐದು ತಿಂಗಳು ಕಳೆದರೂ ಶೇ. 40ರಷ್ಟು ಕಾಮಗಾರಿ ಪೂರ್ಣವಾಗಿಲ್ಲ. ಕಳೆದ ಎರಡು ತಿಂಗಳಿನಿಂದ ಕಾಮಗಾರಿ ಕೂಡ ಸ್ಥಗಿತವಾಗಿದೆ.

    ಅಲ್ಲದೆ, ಗಲೀಜು ಚರಂಡಿಗಳು, ಹದಗೆಟ್ಟ ರಸ್ತೆಗಳು, ಸಮರ್ಪಕ ನಿರ್ವಹಣೆ ಇಲ್ಲದ ಬೀದಿ ದೀಪ, ಹಂದಿ ನಾಯಿಗಳ ಹಾವಳಿ ಹೀಗೆ ಹತ್ತಾರು ಸಮಸ್ಯೆಗಳು ಪಟ್ಟಣದಲ್ಲಿ ತಾಂಡವವಾಡುತ್ತಿವೆ. ಸರ್ಕಾರ ಸಿಬ್ಬಂದಿ ಕೊರತೆ ನೀಗಿಸುವುದರ ಜತೆಗೆ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟಿಸಿ ಆಡಳಿತ ಕಮಿಟಿ ರಚಿಸುವ ಕಾರ್ಯಕ್ಕೆ ಮುಂದಾಗಬೇಕು ಎನ್ನುವುದು ಸ್ಥಳೀಯರ ಒತ್ತಾಸೆಯಾಗಿದೆ.

    ಸಿಬ್ಬಂದಿ ಕೊರತೆ:

    ಪುರಸಭೆಯಲ್ಲಿ ಪರಿಸರ ಇಂಜಿನಿಯರ್, ಕಚೇರಿ ವ್ಯವಸ್ಥಾಪಕ, ಕಂದಾಯ ಅಧಿಕಾರಿ, ಇಬ್ಬರು ಕಿರಿಯ ಇಂಜಿನಿಯರ್, ಹಿರಿಯ ಆರೋಗ್ಯ ನಿರೀಕ್ಷಕ, ಇಬ್ಬರು ಪ್ರಥಮ ದರ್ಜೆ ಸಹಾಯಕರು, ಶೀಘ್ರ ಲಿಪಿಕಾರ, ಕಿರಿಯ ಆರೋಗ್ಯ ನಿರೀಕ್ಷಕ, ಪ್ಲಂಬರ್ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ತುಂಬಿದರೆ ಪಟ್ಟಣದ ಅಭಿವೃದ್ಧಿ ಕಾರ್ಯಕ್ಕೆ ಸಹಕಾರಿಯಾಗುತ್ತದೆ.

    ಇದ್ದೂ ಇಲ್ಲದಂತಹ ಸ್ಥಿತಿ:

    2019ರ ಮೇ 29ರಂದು ಪುರಸಭೆ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಿತು. ಮೇ 31ರಂದು ಫಲಿತಾಂಶ ಪ್ರಕಟಗೊಂಡಿತು. ಪುರಸಭೆಯ ಒಟ್ಟು 23 ವಾರ್ಡ್​ಗಳಲ್ಲಿ 12 ಬಿಜೆಪಿ, 6 ಕಾಂಗ್ರೆಸ್, 1 ಜೆಡಿಎಸ್ ಹಾಗೂ 4 ಸ್ಥಾನಗಳಿಗೆ ಪಕ್ಷೇತರರು ಆಯ್ಕೆಯಾಗಿದ್ದಾರೆ. ಫಲಿತಾಂಶ ಪ್ರಕಟಗೊಂಡು ಎಂಟು ತಿಂಗಳು ಕಳೆದರೂ ಇದುವರೆಗೆ ಅಧಿಕೃತವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮೀಸಲಾತಿ ಪ್ರಕಟಗೊಂಡಿಲ್ಲ. ಪುರಸಭೆ ಆಡಳಿತ ಕಮಿಟಿ ರಚನೆಯಾಗಿಲ್ಲ. ಸ್ಥಳೀಯ ಸಮಸ್ಯೆಗಳು, ಅಭಿವೃದ್ಧಿ ಕಾರ್ಯಗಳ ಪ್ರಸ್ತಾಪ ಮಾಡದಂತಹ ಸ್ಥಿತಿ ಸದಸ್ಯರದ್ದಾಗಿದೆ. ಹೀಗಾಗಿ, ಪುರಸಭೆ ಸದಸ್ಯರು ಇದ್ದರೂ ಇಲ್ಲದಂತಹ ಸ್ಥಿತಿಯಲ್ಲಿದ್ದಾರೆ.

    ಹತ್ತಾರು ದಿನ ಕಳೆದರೂ ಉತಾರ ನೀಡುವುದಿಲ್ಲ. 2 ತಿಂಗಳು ಕಳೆದರೂ ಖಾತೆ ಬದಲಾವಣೆ ಮಾಡಿಕೊಡುತ್ತಿಲ್ಲ. ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕೆಲವು ಯೋಜನೆಯ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವುದರ ಜೊತೆಗೆ ಸಾರ್ವಜನಿಕ ಕಾರ್ಯಗಳು ವಿಳಂಬವಾಗದಂತೆ ನೋಡಿಕೊಳ್ಳಬೇಕು.

    ಪುರಸಭೆಯಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು ಅವುಗಳನ್ನು ತುಂಬುವಂತೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಕೆಲವೊಂದು ಕೆಲಸ ವಿಳಂಬವಾಗುತ್ತಿದೆ. ಆದರೆ, ಯಾವುದೇ ಕೆಲಸಗಳನ್ನು ನಿಲ್ಲಿಸದಂತೆ ಈಗಿರುವ ಸಿಬ್ಬಂದಿಯೊಂದಿಗೆ ಮಾಡಲಾಗುತ್ತಿದೆ. ಪಟ್ಟಣದ ಅಭಿವೃದ್ಧಿಗೆ ಒತ್ತು ನೀಡಲಾಗುವುದು.

    | ಎಸ್.ಎಚ್. ನಾಯ್ಕರ, ಮುಖ್ಯಾಧಿಕಾರಿ

    ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟಗೊಳ್ಳದ ಹಿನ್ನೆಲೆಯಲ್ಲಿ ಕಮಿಟಿ ರಚನೆಯಾಗಿಲ್ಲ. ಸದಸ್ಯರೆಲ್ಲ ಅತಂತ್ರ ಸ್ಥಿತಿಯಲ್ಲಿದ್ದೇವೆ. ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ತಕ್ಷಣ ಸರ್ಕಾರ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟಿಸುವುದರ ಜತೆಗೆ ಸಿಬ್ಬಂದಿ ಕೊರತೆ ನೀಗಿಸುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೇಕು.

    | ಟಿ.ಬಿ. ದಂಡಿನ, ಪುರಸಭೆ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts