More

    ಅಬ್ಬಿಗೇರಿಯಲ್ಲಿ ಸರಣಿ ಕಳ್ಳತನ

    ನರೇಗಲ್ಲ: ಇಲ್ಲಿಗೆ ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ ಸರಣಿ ಕಳ್ಳತನ ನಡೆದಿದ್ದು ಒಂದು ಅಂಗಡಿ, ನಾಲ್ಕು ಮನೆಗಳಲ್ಲಿ ಕಳ್ಳತನ ಮಾಡಲಾಗಿದೆ. ಅಲ್ಲದೆ, ನರೇಗಲ್ಲ ಪಟ್ಟಣದ ಒಂದು ಮನೆಯಲ್ಲೂ ಕಳ್ಳರು ಕೈಚಳಕ ತೋರಿದ್ದಾರೆ.

    ಘಟನೆ ವಿವರ: ಅಬ್ಬಿಗೇರಿ ಗ್ರಾಮದ ಶ್ರೀ ಅನ್ನದಾನೇಶ್ವರ ಮಠದ ಓಣಿಯ ಒಂದು ಅಂಗಡಿ ಹಾಗೂ ಮನೆ, ಸಿದ್ಧಾರೂಢ ನಗರ, ಹಲಕುರ್ಕಿ ಪ್ಲಾಟ್, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ ಮನೆ ಹಾಗೂ ನರೇಗಲ್ಲ ಪಟ್ಟಣದ ಅನ್ನದಾನೇಶ್ವರ ಕಾಲನಿಯಲ್ಲಿ ಕಳವು ಮಾಡಲಾಗಿದೆ.

    ಅಬ್ಬಿಗೇರಿ ಗ್ರಾಮದ ವೃದ್ಧೆ ಕಾಳಮ್ಮ ಅರಳಿಕಟ್ಟಿ ಎಂಬುವವರು ಕೂಲಿ ಕೆಲಸ ಮಾಡಿ ಸಂಗ್ರಹಿಸಿದ್ದ 8 ಸಾವಿರ ರೂ., ಗರಡಿ ಮನೆ ಹತ್ತಿರದ ಬಸವರಾಜ ನಿಂಗಪ್ಪ ಶಿವಶಿಂಪರ ಎಂಬುವವರ ಕಿರಾಣಿ ಅಂಗಡಿಯ ಬೀಗ ಒಡೆದು 1500 ರೂ, ಸಿದ್ಧಾರೂಢ ನಗರದ ನಿವಾಸಿ ಕೆಎಸ್​ಆರ್​ಟಿಸಿ ನಿವೃತ್ತ ನೌಕರ ಪ್ರಕಾಶ ಕಳಕಪ್ಪ ಚಿತ್ತರಗಿ ಎಂಬುವವರ ಮನೆಯಲ್ಲಿ 15 ಸಾವಿರ ರೂ. ಮತ್ತು 1.5 ತೊಲ ಚಿನ್ನ, 5 ತೊಲ ಬೆಳ್ಳಿ ಕಳ್ಳತನ ಮಾಡಿದ್ದಾರೆ.

    ಎರಡು ಮನೆ ಹಾಗೂ ಒಂದು ಅಂಗಡಿಯಲ್ಲಿ ಮಾತ್ರ ಹಣ ಸಿಕ್ಕಿದ್ದು ಇನ್ನುಳಿದ ಮನೆಯಲ್ಲಿ ಯಾವುದೇ ಹಣ, ಚಿನ್ನಾಭರಣ ಸಿಕ್ಕಿಲ್ಲ. ಸ್ಥಳಕ್ಕೆ ರೋಣ ಸಿಪಿಐ ಸುನೀಲ ಸವದಿ, ನರೇಗಲ್ಲ ಪಿಎಸ್​ಐ ಬಸವರಾಜ ಕೊಳ್ಳಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರೀಶಿಲನೆ ಕೈಗೊಂಡಿದ್ದಾರೆ. ನರೇಗಲ್ಲ ಠಾಣೆಯಲ್ಲಿ ಒಂದು ದೂರು ಮಾತ್ರ ದಾಖಲಾಗಿದೆ.

    ನರೇಗಲ್ಲ ಪಟ್ಟಣದ ಶ್ರೀ ಅನ್ನದಾನೇಶ್ವರ ಕಾಲನಿಯ ನಿವಾಸಿ ಎಸ್.ಎಸ್. ಕಂಠಿ ಎಂಬುವವರ ಮನೆಯ ಬೀಗ ಮರಿದು ಕಳ್ಳತನಕ್ಕೆ ಯತ್ನಿಸಲಾಗಿದೆ. ಆದರೆ. ಮನೆಯಲ್ಲಿ ಯಾವುದೇ ಬೆಲೆ ಬಾಳುವ ವಸ್ತು ಮತ್ತು ಹಣ ಸಿಕ್ಕಿಲ್ಲ.

    ಸಾರ್ವಜನಿಕರ ಆಗ್ರಹ : ನರೇಗಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮಗಳಲ್ಲಿ ರಾತ್ರಿ ವೇಳೆ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಇತ್ತೀಚಿಗೆ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿದ್ದು, ಅದಕ್ಕೆ ಕಡಿವಾಣ ಹಾಕಲು ಕನಿಷ್ಠ ಒಂದು ಗ್ರಾಮಕ್ಕೆ ಇಬ್ಬರು ಪೊಲೀಸರನ್ನು ನೇಮಿಸಿ ದುಷ್ಕೃತ್ಯಕ್ಕೆ ಆಸ್ಪದ ನೋಡದಂತೆ ನೊಡಿಕೊಳ್ಳಬೇಕು ಎಂದು ಅಬ್ಬಿಗೇರಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts