More

    ಅಪಾಯಕಾರಿ ಜಂತ್ರ ತಿರುವಿಗೆ ಮುಕ್ತಿ: ಸಮತಟ್ಟಾದ ನೇರ ರಸ್ತೆ ನಿರ್ಮಾಣ 3.25 ಕೋಟಿ ರೂ ವೆಚ್ಚದ ಕಾಮಗಾರಿ

    ಹರಿಪ್ರಸಾದ್ ನಂದಳಿಕೆ, ಬೆಳ್ಮಣ್
    ಅಪಘಾತಗಳಿಗೆ ಕಾರಣವಾಗುತ್ತಿದ್ದ ಶಿರ್ವ-ಬೆಳ್ಮಣ್ ರಸ್ತೆಯ ತಿರುವುಗಳಿಗೆ ಕೊನೆಗೂ ಲೋಕೋಪಯೋಗಿ ಇಲಾಖೆ ಮುಕ್ತಿ ನೀಡಿದೆ ಬೆಳ್ಮಣ್‌ನಿಂದ ಶಿರ್ವಕ್ಕೆ ಸಾಗುವ ರಸ್ತೆ ಅಲ್ಲಲ್ಲಿ ತಿರುವಿನಿಂದ ಕೂಡಿದ್ದು, ಜಂತ್ರದಲ್ಲಿ ತಿರುವಿನ ಜತೆಗೆ ಇಳಿಜಾರು ಕೂಡ ಇತ್ತು. ಅನೇಕ ಅಪಘಾತ ಮತ್ತು ಸಾವುನೋವಿಗೆ ಕಾರಣವಾಗಿದ್ದ ರಸ್ತೆಯ ತಿರುವುಗಳಿಗೆ ಮುಕ್ತಿ ದೊರಕುವ ಕಾಲ ಸನ್ನಿಹಿತವಾಗಿದೆ. ತಿರುವುಗಳನ್ನು ಸರಿಪಡಿಸುವ ಕಾಮಗಾರಿ ಭರದಿಂದ ನಡೆಯುತ್ತಿದೆ.

    ಲೋಕೋಪಯೋಗಿ ಇಲಾಖೆ 3.25 ಕೋಟಿ ರೂ ವೆಚ್ಚದಲ್ಲಿ ರಸ್ತೆಯನ್ನು ಸರಿಪಡಿಸುತ್ತಿದೆ. ಇಳಿಜಾರು ಪ್ರದೇಶದಲ್ಲಿ ರಸ್ತೆಯನ್ನು ಸಂಪೂರ್ಣ ಅಗೆದು ತೆಗೆದು ಸಮತಟ್ಟು ಮಾಡಿ ಹೊಸದಾಗಿ ನಿರ್ಮಿಸಲಾಗುತ್ತಿದೆ. ಇಳಿಜಾರಿನ ಜತೆಗೆ ತಿರುವನ್ನು ಕೂಡ ತಪ್ಪಿಸಿ ನೇರ ರಸ್ತೆ ಮಾಡಲಾಗುತ್ತಿದೆ. ಅಪಘಾತಗಳನ್ನು ತಡೆಯುವ ಉದ್ದೇಶದಿಂದ ರಸ್ತೆಯನ್ನು ನೇರಗೊಳಿಸಲಾಗುತ್ತಿದೆ.

    ನಿರಂತರ ಅಪಘಾತ ತಾಣ: ಶಿರ್ವದಿಂದ ಬೆಳ್ಮಣ್‌ಗೆ ಸಾಗುವಾಗ ಜಂತ್ರದ ಬಳಿ ರಸ್ತೆ ಇಳಿಜಾರು ಮತ್ತು ತಿರುವಿನಿಂದ ಕೂಡಿದ್ದು, ವಾಹನಗಳು ವೇಗವಾಗಿ ಬರುವಾಗ ಬೆಳ್ಮಣ್ ಕಡೆಯಿಂದ ಶಿರ್ವದ ಕಡೆಗೆ ಹೋಗುವ ವಾಹನಗಳು ಚಡಾವಿನಲ್ಲಿ ಗಮನಕ್ಕೆ ಬರುತ್ತಿರಲಿಲ್ಲ. ಇದರಿಂದಾಗಿ ಈ ತಿರುವಿನಲ್ಲಿ ಅನೇಕ ಆಪಘಾತಗಳು ನಡೆದು ಸಾವುನೋವುಗಳಾಗಿದ್ದವು. ಇದನ್ನು ಅಪಘಾತ ವಲಯ ಎಂದು ಪರಿಗಣಿಸಲಾಗಿತ್ತು. ನಿತ್ಯ ಓಡಾಡುವ ನೂರಾರು ವಾಹನಗಳಿಗೆ ಈ ತಿರುವು ಕಂಟಕವಾಗಿತ್ತು.

    ಕೆಲವು ವರ್ಷಗಳ ಹಿಂದೆ ಬಸ್ಸೊಂದು ಅಪಘಾತಕ್ಕೀಡಾಗಿ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದರು, ಬೈಕಿನಲ್ಲಿ ಸಂಚರಿಸುತ್ತಿದ್ದ ಪೊಲೀಸ್ ಪೇದೆಯೊಬ್ಬರ ಸಹೋದರ ಕಾರು ಆಪಘಾತಕ್ಕೀಡಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಇದೇ ಜಾಗದಲ್ಲಿ ನಡೆದಿತ್ತು. 2019ರ ಫೆಬ್ರವರಿ 23ರಂದು ಖಾಸಗಿ ಬಸ್ಸು ಹಾಗೂ ಟಿಪ್ಪರ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದರು. ಸಂಕಲಕರಿಯದ ಎರಡು ಪುಟ್ಟ ಹೆಣ್ಣು ಮಕ್ಕಳು ಮತ್ತು ಅವುಗಳ ತಾಯಿ ಗಂಭೀರವಾಗಿ ಗಾಯಗೊಂಡ ಅಪಘಾತ ಇಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಬಸ್ಸು ಚಾಲಕ ರವಿ ಎಂಬವರು ಕಾಲು ಕಳೆದುಕೊಂಡು ಹಾಸಿಗೆ ಹಿಡಿಯುವಂತಾಗಿತ್ತು. 2019ರ ಮೇ 28ರಂದು ನಡೆದ ಬೈಕುಗಳೆರಡರ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಬಸ್ಸಿನಡಿಗೆ ಬಿದ್ದು ಸ್ಥಳದಲ್ಲೇ ಮೃತರಾಗಿದ್ದರು. ಬೈಕ್‌ಗಳ ಅಪಘಾತ, ಟಿಪ್ಪರ್ ಬಸ್ಸು ಡಿಕ್ಕಿ ಹೀಗೆ ನಿರಂತರ ಭೀಕರ ಅಪಘಾತಗಳು ಜಂತ್ರ ರಸ್ತೆಯಲ್ಲಿ ನಡೆದಿತ್ತು.

    ವಿಜಯವಾಣಿ ವರದಿ : ಇಳಿಜಾರು ಹಾಗೂ ತಿರುವಿನಿಂದ ಕೂಡಿದ ಜಂತ್ರ ರಸ್ತೆಯಲ್ಲಿ ನಿರಂತರ ಅಪಘಾತವನ್ನು ತಪ್ಪಿಸಲು ರಸ್ತೆಯ ತಿರುವು ಸರಿಪಡಿಸಬೇಕಾಗಿದೆ. ರಸ್ತೆಯ ಕಾಮಗಾರಿ ನಡೆದು ತಿರುವು ರಹಿತ ನೇರವಾಗಿರುವ ವಾಹನ ಸವಾರರಿಗೆ ಯೋಗ್ಯವಾದ ರಸ್ತೆ ನಿರ್ಮಾಣವಾಗಬೇಕು. ಅಪಘಾತಗಳನ್ನು ತಪ್ಪಿಸಲು ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿಜಯವಾಣಿ ಹಲವು ಬಾರಿ ಸಮಗ್ರ ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾದ ಬಳಿಕ ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಅವರ ವಿಶೇಷ ಮುತುವರ್ಜಿಯಿಂದಾಗಿ ಲೋಕೋಪಯೋಗಿ ಇಲಾಖೆ ಇದೀಗ ರಸ್ತೆಯ ಕಾಮಗಾರಿ ನಡೆಸುತ್ತಿದೆ. ರಸ್ತೆಯ ಶೇ.80ರಷ್ಟು ತಿರುವುಗಳನ್ನು ನಿವಾರಿಸಲಾಗಿದ್ದು, ವಾಹನ ಸವಾರರಿಗೆ ಸಂಚಾರಕ್ಕೆ ಯೋಗ್ಯವಾಗುವಂತಿದೆ. ಈ ರಸ್ತೆ ಕಾಮಗಾರಿ ಮುಗಿದ ಬಳಿಕವಾದರೂ ಅಪಘಾತ ನಡೆಯದಿರಲಿ ಎಂದು ಸುತ್ತಮುತ್ತಲಿನ ಜನರು ಆಶಿಸುತ್ತಿದ್ದಾರೆ.

    ಇದು ನಡೆಯಲೇ ಬೇಕಾಗಿದ್ದ ಕಾಮಗಾರಿ. ಜಂತ್ರದ ತಿರುವು ಹಾಗೂ ಇಳಿಜಾರು ರಸ್ತೆ ಅಪಾಯಕಾರಿಯಾಗಿತ್ತು. ಆದರೆ ಇದೀಗ ಎಲ್ಲವನ್ನು ಸಮತಟ್ಟು ಮಾಡುವ ಕಾಮಗಾರಿ ನಡೆಯುತ್ತಿದ್ದು ಅಪಘಾತಗಳು ತಪ್ಪಿಸಲು ಸಾಧ್ಯವಿದೆ.
    ಸುಧಾಕರ್, ಗ್ರಾಮಸ್ಥರು.

    ಈ ರಸ್ತೆ ಹಿಂದೆ ತುಂಬ ಅಪಾಯಕಾರಿಯಾಗಿತ್ತು. ಅನೇಕ ಸಾವುನೋವು ಸಂಭವಿಸಿತ್ತು. ವಿಜಯವಾಣಿ ವರದಿ ಬಳಿಕ ಇದೀಗ ಆಧಿಕಾರಿಗಳು ಎಚ್ಚೆತ್ತು ಅನುದಾನ ಮಂಜೂರು ಮಾಡಿ ಕಾಮಗಾರಿ ಕೈಗೊಂಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.
    – ದಿವಾಕರ್, ವಾಹನ ಸವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts