More

    ಅನ್ಯ ಉದ್ಯೋಗದತ್ತ ಅತಿಥಿ ಉಪನ್ಯಾಸಕರು!

    ಪರಶುರಾಮ ಕೆರಿ ಹಾವೇರಿ

    ಪದವಿ ಕಾಲೇಜ್ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಅತಿಥಿ ಉಪನ್ಯಾಸಕರಿಗೆ ಲಾಕ್​ಡೌನ್ ಬರೆ ಎಳೆದಿದ್ದು, ಕಳೆದ 5 ತಿಂಗಳಿನಿಂದ ವೇತನ ಬಾರದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಜೀವನ ನಿರ್ವಹಣೆಗಾಗಿ ಕೆಲವರು ವಿವಿಧ ವ್ಯಾಪಾರಕ್ಕಿಳಿದಿದ್ದಾರೆ.

    ಜಿಲ್ಲೆಯಲ್ಲಿ ಒಟ್ಟು 350 ಅತಿಥಿ ಉಪನ್ಯಾಸಕರಿದ್ದು, ಅವರೆಲ್ಲರೂ ಕಳೆದ ಹತ್ತಾರು ವರ್ಷಗಳಿಂದ ವಿವಿಧ ಸರ್ಕಾರಿ ಪದವಿ ಕಾಲೇಜ್​ಗಳಲ್ಲಿ ಪಾಠ ಮಾಡುತ್ತ ಬಂದಿದ್ದರು. ಲಾಕ್​ಡೌನ್ ಇಲ್ಲದ ಸಮಯದಲ್ಲಿಯೂ ಸರ್ಕಾರ ಇವರಿಗೆ ವಿಳಂಬವಾಗಿಯೇ ವೇತನ ಪಾವತಿಸುತ್ತಿತ್ತು. ಆದರೆ, ಈಗ ಲಾಕ್​ಡೌನ್ ಘೋಷಣೆಯಾಗುವ ಮುನ್ನವೇ ವೇತನ ಸ್ಥಗಿತಗೊಂಡಿದ್ದು, ಸಂಕಷ್ಟದ ಸಮಯದಲ್ಲಿಯೂ ಸರ್ಕಾರ ಕೈ ಹಿಡಿಯಲಿಲ್ಲ. ಇದರಿಂದ ಕುಟುಂಬ ನಿರ್ವಹಣೆಗೆ ಅನಿವಾರ್ಯವಾಗಿ ಅನ್ಯ ಉದ್ಯೋಗದತ್ತ ಉಪನ್ಯಾಸಕರು ಒಲವು ತೋರುವಂತಾಗಿದೆ.

    ವ್ಯಾಪಾರಕ್ಕಿಳಿದ ಉಪನ್ಯಾಸಕರು: ಜಿಲ್ಲೆಯ ಡೊಮ್ಮನಾಳ ಗ್ರಾಮದ ಅತಿಥಿ ಉಪನ್ಯಾಸಕ ಹಾಗೂ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಜಂಟಿ ಕಾರ್ಯದರ್ಶಿ ಸಿ.ಕೆ. ಪಾಟೀಲ ಅವರು ಹಾವೇರಿಯಲ್ಲಿ ಮಾವಿನಹಣ್ಣು ಮಾರಾಟದಲ್ಲಿ ತೊಡಗಿದ್ದಾರೆ. ಅವರ ಸ್ವಂತ ಊರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸದ್ಯ ಮಾವಿನಹಣ್ಣಿನ ಸೀಜನ್ ಜೋರಾಗಿದೆ. ರೈತರಿಂದ ನೇರವಾಗಿ ಮಾವಿನಕಾಯಿಗಳನ್ನು ಖರೀದಿಸಿ ಅವುಗಳನ್ನು ನೈಸರ್ಗಿಕವಾಗಿ ಒತ್ತೆ ಹಾಕಿ ಹಣ್ಣು ಮಾಡಿ ಮಾರಾಟ ಆರಂಭಿಸಿದ್ದಾರೆ.

    ಸವಣೂರಿನ ಅತಿಥಿ ಉಪನ್ಯಾಸಕ ಫಕೀರಯ್ಯಾ ಮುರುಗಯ್ಯ ಸಾಲಿಮಠ ಎಂಬುವರು ಮನೆಯಲ್ಲಿಯೇ ಕಾಳುಕಡಿ ವ್ಯಾಪಾರ ಆರಂಭಿಸಿದ್ದಾರೆ. ಇವುಗಳ ಮಾರಾಟದಿಂದ ಬರುವ ಆದಾಯದಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಇನ್ನು ಅನೇಕರು ಕೃಷಿ ಜಮೀನು ಹೊಂದಿದ್ದು, ಈ ನೌಕರಿ ಸಹವಾಸವೇ ಸಾಕು ಎಂದು ಕೃಷಿ ಕಾರ್ಯಕ್ಕೆ ಇಳಿದಿದ್ದಾರೆ. ಇನ್ನು ಕೆಲವರು ಅನ್ಯ ಉದ್ಯೋಗ ಮಾಡಲಾಗದೇ ಸಂಕಷ್ಟದಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

    ಕೈಯಲ್ಲಿ ಕಾಸಿಲ್ಲದವನಿಗೆ ಗೊತ್ತು ಕಷ್ಟ: ನಾವು ಎಷ್ಟು ದಿನಾ ಅಂತಾ ಅಲ್ಲಿ, ಇಲ್ಲಿ ಸಾಲ ಕೇಳಿ ಜೀವನ ಸಾಗಿಸುವುದು. ಸರ್ಕಾರ ನಿಗದಿತ ಸಮಯಕ್ಕೆ ವೇತನ ನೀಡಲಿಲ್ಲ. ಅದರ ಜೊತೆಗೆ ಕರೊನಾ ಮಹಾಮಾರಿ ವಕ್ಕರಿಸಿತು. ಇದೀಗ ಸರ್ಕಾರದ ಬಳಿ ಕಾಯಂ ನೌಕರರಿಗೆ ವೇತನ ನೀಡಲು ದುಡ್ಡಿನ ಸಮಸ್ಯೆ ಎದುರಾಗಿದೆ. ಕಾಸಿದ್ದ ಸಮಯದಲ್ಲಿಯೇ ಸರ್ಕಾರ ನಮ್ಮನ್ನು ಮಲತಾಯಿ ಮಕ್ಕಳಂತೆ ನೋಡಿದೆ. ನಮ್ಮನ್ನು ಕಾಯಂ ಮಾಡಿ ಎಂದರೂ ಪರಿಗಣಿಸಿಲ್ಲ. ಇನ್ನು ಈ ಸಂಕಷ್ಟ ಸಮಯದಲ್ಲಿ ನಮಗೆ ವೇತನ ಕೊಡುವುದು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡಿದ್ದೇವೆ. ಸರ್ಕಾರವನ್ನು ನಂಬಿ ಕೂರುವ ಬದಲು ಕಾಯಕದಲ್ಲಿಯೇ ಕೈಲಾಸ ಕಂಡುಕೊಳ್ಳುತ್ತಿದ್ದೇವೆ. ಸದ್ಯ ವ್ಯಾಪಾರ ಹೊಸದಾಗಿದ್ದರೂ ಮುಂದೆ ಇದನ್ನೇ ನಂಬಿಕೊಂಡು ದುಡಿದರೆ ಕೈ ಹಿಡಿಯುವ ನಿರೀಕ್ಷೆಯೂ ಮೂಡಲಾರಂಭಿಸಿದೆ ಎನ್ನುತ್ತಾರೆ ಅತಿಥಿ ಉಪನ್ಯಾಸಕರು.

    ಕಾರ್ವಿುಕರ ಪ್ಯಾಕೇಜ್ ಸಹ ಇಲ್ಲ: ಈಗಾಗಲೇ ರಾಜ್ಯದಲ್ಲಿನ ವಿವಿಧ ವರ್ಗದ ಕಾರ್ವಿುಕರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪ್ಯಾಕೇಜ್ ಘೊಷಿಸಲಾಗಿದೆ. ನಮ್ಮನ್ನು ಕಾರ್ವಿುಕರೆಂದು ಪರಿಗಣಿಸಿ ಪ್ಯಾಕೇಜ್​ನ್ನಾದರೂ ನೀಡಿ ಎಂದು ಕೇಳಿಕೊಳ್ಳುವುದು ಬಾಕಿಯಿದೆ. ಮಕ್ಕಳಿಗೆ ಬೋಧನೆ ಮಾಡುವ ನಾವು ಸರ್ಕಾರದ ಮುಂದೆ ಬಹಿರಂಗವಾಗಿ ಪ್ಯಾಕೇಜ್​ಗಾಗಿ ಕೈ ಚಾಚುವುದು ಸರಿಯಲ್ಲ ಎಂಬ ಸ್ವಾಭಿಮಾನದಿಂದ ಸುಮ್ಮನಿದ್ದೇವೆ ಎಂದು ಅತಿಥಿ ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಜ್ಯದಲ್ಲಿನ ಅತಿಥಿ ಉಪನ್ಯಾಸಕರನ್ನು ಸರ್ಕಾರ ಮೊದಲಿನಿಂದಲೂ ಗಣನೆಗೆ ತೆಗೆದುಕೊಂಡಿಲ್ಲ. ಯುಜಿಸಿ ನಿಮಯದ ಪ್ರಕಾರ ಅತಿಥಿ ಉಪನ್ಯಾಸಕರಿಗೆ 50 ಸಾವಿರ ರೂ. ವೇತನ ನೀಡಬೇಕು. ಆದರೆ, ಸದ್ಯ ನೆಟ್, ಸೆಟ್ ಆದವರಿಗೆ 13 ಸಾವಿರ, ಎಂಎ ಆದವರಿಗೆ 11 ಸಾವಿರ ರೂ.ಗಳ ವೇತನವನ್ನು ನೀಡಲಾಗುತ್ತಿದೆ. ಕರೊನಾ ಸಂಕಷ್ಟದ ಸಮಯದಲ್ಲಿ 5 ತಿಂಗಳಿನಿಂದ ವೇತನ ಕೊಟ್ಟಿಲ್ಲ. ಕಡೆ ಪಕ್ಷ ಸರ್ಕಾರ ನಮ್ಮನ್ನು ಕಾರ್ವಿುಕರೆಂದು ಪರಿಗಣಿಸಿ ವಿಶೇಷ ಪ್ಯಾಕೇಜ್ ಆದರೂ ನೀಡಬೇಕು.

    | ಸಿ.ಕೆ. ಪಾಟೀಲ, ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts