More

    ಅನ್ಯಾಯ ಸರಿಪಡಿಸಲು ಆಗ್ರಹಿಸಿ ಪ್ರತಿಭಟನೆ

    ಕುಮಟಾ: ಧಾರೇಶ್ವರದ ಹರನೀರದಲ್ಲಿರುವ ರಿಲಾಯಬಲ್ ಕ್ಯಾಶ್ಯೂ ಫ್ಯಾಕ್ಟರಿ ಮಾಲೀಕರಿಂದಾದ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಕಾರ್ಖಾನೆ ಕಾರ್ವಿುಕರು ಸೋಮವಾರ ಮಣಕಿ ಮೈದಾನದಿಂದ ಮೆರವಣಿಗೆಯಲ್ಲಿ ತೆರಳಿ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಕಾರ್ಖಾನೆಯಲ್ಲಿ ಕಳೆದ 10 ವರ್ಷಗಳಿಂದ ಗೇರು ಬೀಜ ಸಂಸ್ಕರಣೆ ಕೆಲಸವನ್ನು ಸ್ಥಳೀಯ 600ಕ್ಕೂ ಹೆಚ್ಚು ಮಹಿಳಾ ಕಾರ್ವಿುಕರು ನಿರ್ವಹಿಸುತ್ತಿದ್ದರು. ಬೆಲೆ ಏರಿಕೆಯಿಂದ ಜೀವನ ನಿರ್ವಹಣೆ ಕಷ್ಟವಾದಾಗ ಸರ್ಕಾರದ ನಿಯಮಾವಳಿಯಂತೆ ಕನಿಷ್ಠ ವೇತನಕ್ಕಾಗಿ ಒತ್ತಾಯಿಸಿದ್ದರು. ಅಲ್ಲದೆ, ಸಿಐಟಿಯು ನೇತೃತ್ವದಲ್ಲಿ ಕಾರ್ವಿುಕರು ಸಂಘ ರಚಿಸಿಕೊಂಡು ಕನಿಷ್ಠ ವೇತನ ಹಾಗೂ ಹಿಂದಿನ ಬಾಕಿ ಕೊಡುವಂತೆ ಒತ್ತಾಯಿಸುತ್ತಲೇ ಇದ್ದರೂ ಮಾಲೀಕರು ಕಿವಿಗೊಟ್ಟಿಲ್ಲ. ಇದಕ್ಕೆ ವಿರುದ್ಧವಾಗಿ ಸಂಘದ 15 ಪದಾಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

    350ಕ್ಕೂ ಹೆಚ್ಚು ಕಾರ್ವಿುಕರಿಗೆ ಕೆಲಸಕ್ಕೆ ಬಾರದಂತೆ ತಿಳಿಸಲಾಗಿದೆ. ಜತೆಗೆ ಕಾರ್ಖಾನೆಗೆ ಬೀಗಮುದ್ರೆ ಹಾಕಿ ಎಲ್ಲ ಕಾರ್ವಿುಕರನ್ನು ಅಕ್ಷರಶಃ ಬೀದಿಗೆ ತಳ್ಳಲಾಗಿದೆ. ಈ ಬಗ್ಗೆ ಬೆಳಗಾವಿಯ ಕಾರ್ವಿುಕ ಉಪ ಆಯುಕ್ತರ ಸಮ್ಮುಖದಲ್ಲಿ ಹಲವು ಸುತ್ತಿನ ಸಂಧಾನ ಮಾತುಕತೆ ನಡೆಸಿದರೂ ಕಾರ್ಖಾನೆ ಆಡಳಿತ ವರ್ಗ ಒಪ್ಪಿಲ್ಲ. ಇದರಿಂದಾಗಿ ಕಾರ್ಖಾನೆಯನ್ನು ಕಾನೂನು ಬಾಹಿರವಾಗಿ ಬಂದ್ ಮಾಡಲಾಗಿದೆ ಎಂದು ಕಾರ್ವಿುಕ ಉಪ ಆಯುಕ್ತರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ಬಗ್ಗೆ ಸರ್ಕಾರದಿಂದ ಯಾವುದೇ ಕ್ರಮವಾಗಿಲ್ಲ. ಈ ನಡುವೆ ಆಡಳಿತ ವರ್ಗವು ಕಾರ್ಖಾನೆಯ ಯಂತ್ರಗಳನ್ನು ಬೇರೆಡೆ ಸಾಗಿಸುವ ಪ್ರಯತ್ನ ನಡೆಸಿದೆ. ಈ ವಿಷಯವನ್ನು ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳಿಗೂ ತಿಳಿಸಿದ್ದೇವೆ. ಉಪವಿಭಾಗಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಕಾರ್ಖಾನೆಯನ್ನು ಪುನಾರಂಭಿಸಿ ಅನ್ಯಾಯಕ್ಕೊಳಗಾದ ಕಾರ್ವಿುಕರಿಗೆ ನ್ಯಾಯ ಕೊಡಿಸಬೇಕು ಎಂದು ಕಾರ್ವಿುಕರು ಉತ್ತರ ಕನ್ನಡ ಜಿಲ್ಲಾ ಕ್ಯಾಶ್ಯೂ ಇಂಡಸ್ಟ್ರೀಸ್ ಕಾರ್ವಿುಕರ ಸಂಘದ ಸಹಯೋಗದಲ್ಲಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು. ಮನವಿಯನ್ನು ಉಪವಿಭಾಗಾಧಿಕಾರಿ ಎಂ.ಅಜಿತ್ ಅನುಪಸ್ಥಿತಿಯಲ್ಲಿ ಕಚೇರಿ ಮುಖ್ಯಸ್ಥ ವಿ.ಆರ್. ನಾಯ್ಕ ಸ್ವೀಕರಿಸಿದರು.

    ಕಾರ್ವಿುಕರ ಸಂಘದ ಅಧ್ಯಕ್ಷ ತಿಲಕ ಗೌಡ, ಪ್ರಧಾನ ಕಾರ್ಯದರ್ಶಿ ಸರೋಜಾ ನಾರಾಯಣ ಪಟಗಾರ, ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿದರು. ಪ್ರತಿಭಟನೆಗೆ ಸಿಐಟಿಯು ಹಾಗೂ ಇತರ ಕಾರ್ವಿುಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts