More

    ಅನೈತಿಕ ಚಟುವಟಿಕೆ ತಾಣವಾದ ವಸತಿಗೃಹ

    ಕಿತ್ತೂರು, ಬೆಳಗಾವಿ: ನೂರಾರು ವಿದ್ಯಾರ್ಥಿಗಳಿಗೆ ಆಸರೆ ಆಗಬೇಕಿದ್ದ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಸಾರ್ವಜನಿಕ ವಿದ್ಯಾರ್ಥಿಗಳ ವಸತಿಗೃಹ, ಹಲವು ವರ್ಷಗಳಿಂದ ಅನಾಥವಾಗಿ ಬಿದ್ದಿದ್ದು, ಜೂಜುಕೋರರ, ಕುಡುಕರ ,ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

    ಪಟ್ಟಣದ ಸೋಮವಾರ ಪೇಟೆಯ ಗೊಂಬಿಗುಡಿ ರಸ್ತೆಯ ಗಡಾದ ಮರಡಿಯಲ್ಲಿ ಸಾರ್ವಜನಿಕ ವಿದ್ಯಾರ್ಥಿಗಳ ವಸತಿಗೃಹ ಆರಂಭದಲ್ಲಿ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟಿತ್ತು. ಆದರೆ, ಕೆಲ ವರ್ಷಗಳು ಗತಿಸುತ್ತಾ ಸಮರ್ಪಕ ನಿರ್ವಹಣೆ ಹಾಗೂ ಸೌಲಭ್ಯಗಳ ಕೊರತೆಯಿಂದ ವಸತಿಗೃಹದ ಹಾಳು ಕೊಂಪೆಯಾಗಿದೆ. ಕಳೆದ 15 ವರ್ಷಗಳಿಂದ ಇದು ಮುಚ್ಚಲ್ಪಟ್ಟಿದ್ದು, ಕಿಟಕಿ, ಬಾಗಿಲುಗಳು ಹಾಳಾಗಿದ್ದು, ಇತರೆ ವಸ್ತುಗಳು ಕಳ್ಳರ ಪಾಲಾಗಿವೆ.

    ಅನೈತಿಕ ಚಟುವಟಿಕೆಯ ತಾಣ: ವಸತಿ ನಿಲಯ ಮುಚ್ಚಲ್ಪಟ್ಟಿರುವುದರಿಂದ ಈ ಜಾಗವನ್ನು ಕೆಲ ಪುಂಡರು ಜೂಜಾಡಲು, ಅನೈತಿಕ ಚಟುವಟಿಕೆಗಳಿಗಾಗಿ ಹಾಗೂ ಸಾರಾಯಿ ಸೇವಿಸಲು ಬಳಕೆ ಮಾಡುತ್ತಿದ್ದಾರೆ. ದಿನನಿತ್ಯ ಇಂತಹ ಅಕ್ರಮ ಚಟುವಟಿಕೆಗಳು ಇಲ್ಲಿ ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದೆ. ಅಲ್ಲದೆ ಕೆಲವರು ಧನಕರು, ಕುರಿಗಳ ತೊಟ್ಟಿ ಮಾಡಿಕೊಂಡಿದ್ದಾರೆ.

    ತಾಲೂಕು ಆಸ್ಪತ್ರೆಗೆ ಈ ಜಾಗ ಬಳಕೆಯಾಗಲಿ: ಸರ್ಕಾರಿ ತಾಲೂಕು ಆಸ್ಪತ್ರೆಗೆ ಸ್ಥಳದ ಸಮಸ್ಯೆಯಿಂದ ಕಿತ್ತೂರಿನಿಂದ ಎಂಟು -ಹತ್ತು ಕಿಲೋಮೀಟರ್ ದೂರದ ಹೊರ ವಲಯದಲ್ಲಿ ನಿರ್ಮಿಸಲು ಯೋಜನೆ ನಡೆಯುತ್ತಿದೆ. ಆದರೆ, ಆಸ್ಪತ್ರೆ ಹೊರವಲಯದಲ್ಲಿ ನಿರ್ಮಾಣ ಮಾಡುವುದರಿಂದ ಸಾರ್ವಜನಿಕರಿಗೆ ಯಾವುದೇ ರೀತಿ ಪ್ರಯೋಜನವಾಗುವದಿಲ್ಲ.

    ಅದರ ಬದಲಾಗಿ ಪಟ್ಟಣದ ಮಧ್ಯದಲ್ಲಿರುವ ಪಾಳು ಬಿದ್ದಿರುವ ಈ ವಸತಿಗೃಹವನ್ನು ತೆರವುಗೊಳಿಸಿ, ಇದೇ ಜಾಗದಲ್ಲಿ ತಾಲೂಕು ಆಸ್ಪತ್ರೆ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ಉಪಯೋಗವಾಗುತ್ತದೆ ಎಂದು ಜನರ ಅಭಿಪ್ರಾಯವಾಗಿದೆ. ಇನ್ನಾದರೂ ಹಲವು ವರ್ಷಗಳಿಂದ ಹಾಳಾಗಿ ಹೋಗುತ್ತಿರುವ ಸಾರ್ವಜನಿಕ ಆಸ್ತಿಯನ್ನು ಅಧಿಕಾರಿಗಳು, ಪ್ರತಿನಿಧಿಗಳು ರಕ್ಷಣೆ ಮಾಡಲಿ ಹಾಗೂ ಇದನ್ನು ಸರ್ಕಾರಿ ಯೋಜನೆಗಳಿಗೆ ಉಪಯೋಗ ಮಾಡಲಿ ಎಂದು ಜನರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts