More

    ಅನುದಾನ ತಡೆಗೆ ಜೀವರಾಜ್ ಕಾರಣ, ವ್ಯಕ್ತಿಗತ ದ್ವೇಷದಿಂದ ಕ್ಷೇತ್ರಕ್ಕೆ ಅನ್ಯಾಯ

    ಕೊಪ್ಪ: ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಶೃಂಗೇರಿ ಕ್ಷೇತ್ರಕ್ಕೆ ಮಂಜೂರಾಗಿದ್ದ 170.48 ಕೋಟಿ ರೂ. ಅನುದಾನವನ್ನು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ತಡೆಹಿಡಿಯಲಾಗಿದ್ದು, ಮಾಜಿ ಸಚಿವ ಜೀವರಾಜ್ ಅವರೇ ಇದಕ್ಕೆ ಕಾರಣ ಎಂದು ಶಾಸಕ ಟಿ.ಡಿ. ರಾಜೇಗೌಡ ಆರೋಪ ಮಾಡಿದರು.

    ಅನುದಾನ ತಡೆ ಹಿಡಿದಿರುವುದು ಹಾಗೂ ವಿವಿಧ ಯೋಝುನೆ ವಿರೋಧಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯ ಖಂಡಿಸಿ ತಾಲೂಕು ಕಚೇರಿ ಬಳಿ ಶುಕ್ರವಾರ ಹಮ್ಮಿಕೊಂಡಿದ್ದ ಒಂದು ದಿನದ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಶೃಂಗೇರಿ ಕ್ಷೇತ್ರದಲ್ಲಿ ಸೇಡಿನ ರಾಜಕಾರಣ ಆರಂಭವಾಗಿದೆ ಎಂದು ವಾಗ್ದಾಳಿ ಮಾಡಿದರು.

    ನಾನು ಶಾಸಕನಾಗಿ ಆಯ್ಕೆಯಾದ ನಂತರ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿಯನ್ನು ಸಹಿಸದೆ ಮಾಜಿ ಸಚಿವ ಜೀವರಾಜ್ ಮತ್ತು ಅವರ ಬೆಂಬಲಿಗರು ಅಧಿಕಾರ ದುರ್ಬಳಕೆ ಮಾಡಿಕೊಂಡು ಅನುದಾನ ತಡೆಹಿಡಿಯುವಂತೆ ಮಾಡಿದ್ದಾರೆ. ನನ್ನ ಮೇಲಿನ ರಾಜಕೀಯ ದ್ವೇಷವನ್ನು ಶೃಂಗೇರಿ ಕ್ಷೇತ್ರದ ಜನರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಎಂದರು.

    ಅತಿವೃಷ್ಟಿಯಿಂದ ಅಂದಾಜು 343.92 ಕೋಟಿ ರೂ. ಹಾನಿ ಸಂಭವಿಸಿದ್ದು, ಪರಿಹಾರಕ್ಕೆ ಕೇವಲ 28.61 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಕ್ಷೇತ್ರದಲ್ಲಿನ ಅಂಗನವಾಡಿ ಕಾರ್ಯಕರ್ತೆಯರಿಗೆ, ಆಶಾ ಕಾರ್ಯಕರ್ತೆಯರಿಗೆ, ಬಿಸಿಯೂಟದ ಅಡುಗೆ ಸಹಾಯಕರಿಗೆ ಸಹಾಯಧನ ಬಿಡುಗಡೆಯಾಗಿಲ್ಲ ಎಂದರು.

    ಮನೆ ಮನೆಗೆ ತಲುಪಿಸಿ: ಶೃಂಗೇರಿ ಕ್ಷೇತ್ರಕ್ಕೆ ರಾಜ್ಯ ಸರ್ಕಾರದಿಂದ ಆಗುತ್ತಿರುವ ಅನ್ಯಾಯವನ್ನು ಕ್ಷೇತ್ರದ ಪ್ರತಿ ಮನೆಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಕಾರ್ಯಕರ್ತರಿಗೆ ಕರೆ ನೀಡಿದರು. ಬಿಜೆಪಿ ಅಭಿವೃದ್ಧಿ, ಜನಪರ ಕೆಲಸಗಳ ಆಧಾರದ ಮೇಲೆ ಚುನಾವಣೆ ಎದುರಿಸುವುದಿಲ್ಲ. ಜಾತಿ, ಧರ್ಮ, ಹಣ ಬಲದಿಂದ ಚುನಾವಣೆ ಮಾಡಿ ಅಧಿಕಾರಕ್ಕೆ ಬರುತ್ತಾರೆ. ಬಿಜೆಪಿಯ ಈ ಸಿದ್ಧಾಂತ ದೇಶಕ್ಕೆ ಮಾರಕ. ನಾವು ಚುನಾವಣೆ ಗೆಲುವಿಗಾಗಿ ಕೆಲಸ ಮಾಡಬಾರದು. ಬಿಜೆಪಿ ಮತ್ತು ಅವರ ಸಿದ್ಧಾಂತ ತೊಲಗಿಸಲು ಕೆಲಸ ಮಾಡಬೇಕು ಎಂದು ಹೇಳಿದರು. ಕರೊನಾ ಕಾಲದಲ್ಲಿ ಶಾಲೆ ಪುನರಾರಂಭದ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ನಿಲುವು ಇರಬೇಕು. ಜಾತಕ ನೋಡಿ, ಶಾಸ್ತ್ರ ಕೇಳಿ ದಿನಾಂಕ ನಿಗದಿಪಡಿಸುವಂತೆ ಶಿಕ್ಷಣ ಸಚಿವರು ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರದ ದ್ವಂದ್ವ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು, ಪೋಷಕರನ್ನು ಗೊಂದಲದಲ್ಲಿ ಇಟ್ಟಿದೆ. ಶಾಲೆ ಆರಂಭಿಸುವ ಬಗ್ಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts