More

    ಅನಾಥ ಮಕ್ಕಳ ರಕ್ಷಣೆಗೆ ಕ್ರಮ

    ಚಿಕ್ಕೋಡಿ: ರಾಜ್ಯದಲ್ಲಿ ಕರೊನಾ ಸೋಂಕು ತಗುಲಿ ತಂದೆ, ತಾಯಿ ಮೃತಪಟ್ಟು ಅನಾಥರಾದ ಮಕ್ಕಳನ್ನು ರಕ್ಷಿಸುವ ಸಲುವಾಗಿ ಸರ್ಕಾರ 1098 ಸಹಾಯವಾಣಿ ಆರಂಭಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ಪಟ್ಟಣದ ಸಂಸದರ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಕುರಿತು ಕೆಲ ಸುದ್ದಿಗಳು ಹರಿದಾಡುತ್ತಿದ್ದು, ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎನ್ನುವ ಉದ್ದೇಶದಿಂದ ಸರ್ಕಾರದಿಂದಲೇ ಕಾನೂನಾತ್ಮಕವಾಗಿ ನೋಂದಾಯಿತವಾಗಿರುವ ಸಂಘ-ಸಂಸ್ಥೆಗಳು, ಟ್ರಸ್ಟ್‌ಗಳಿಗೆ ಅನಾಥ ಮಕ್ಕಳನ್ನು ನೀಡಲಾಗುವುದು. ಸರ್ಕಾರವನ್ನು ಸಂಪರ್ಕಿಸದೇ ಯಾವುದೇ ಕಾರಣಕ್ಕೂ ಅನಾಥವಾಗಿರುವ ಮಕ್ಕಳನ್ನು ಯಾರೂ ದತ್ತು ಕೊಡಬಾರದು ಎಂದು ಮನವಿ ಅವರು ಮಾಡಿದರು.

    ದೇಶದ ಇತರ ರಾಜ್ಯಗಳ ಮಾದರಿಯಲ್ಲಿಯೇ ರಾಜ್ಯ ಸರ್ಕಾರವೂ ಅನಾಥವಾಗಿರುವ ಮಕ್ಕಳ ನೆರವಿಗೆ ನಿಲ್ಲಲಿದ್ದು, ಈಗಾಗಲೇ ಇಲಾಖೆಯಿಂದ ಮುಖ್ಯಮಂತ್ರಿಗಳಿಗೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ಅನಾಥ ಮಕ್ಕಳಿಗೆ ಶೀಘ್ರ ಸಹಾಯ ಧನ ಘೋಷಿಸಲಿದ್ದಾರೆ ಎಂದರು.

    ಮಕ್ಕಳ ನಿಗಾ ಘಟಕ: ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಕರೊನಾ ನಿಯಂತ್ರಣಕ್ಕಾಗಿ ಮಕ್ಕಳ ನಿಗಾ ಘಟಕ ಸ್ಥಾಪಿಸಲಿದ್ದು, ತಾಲೂಕು ಕೇಂದ್ರಗಳಲ್ಲಿ ತಲಾ 30 ಹಾಸಿಗೆ ಸಾಮರ್ಥ್ಯವುಳ್ಳ ಮಕ್ಕಳ ನಿಗಾ ಘಟಕ ಸ್ಥಾಪನೆಯಾಗಲಿದೆ. ಮಕ್ಕಳ ಚಿಕಿತ್ಸೆ ಜತೆಗೆ ಅವರ ಮನರಂಜನೆಗೆ ಅಗತ್ಯವಿರುವ ಸಾಮಗ್ರಿ ಪೂರೈಸಲಾಗುವುದು. ಅಲ್ಲದೆ, ಪೌಷ್ಟಿಕಾಂಶವುಳ್ಳ ಆಹಾರ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

    ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಕರೊನಾ ಲಸಿಕೆ ಬಗ್ಗೆ ಕಾಂಗ್ರೆಸ್ ಪಕ್ಷ ಅಪಪ್ರಚಾರ ಮಾಡುವ ಮೂಲಕ ದೇಶದ ಬಹುತೇಕರನ್ನು ಲಸಿಕೆಯಿಂದ ವಂಚಿತರನ್ನಾಗಿಸಿದೆ. ಇದು ರಾಜಕೀಯ ಮಾಡುವ ಸಮಯವಲ್ಲ. ಜನರ ಜೀವ ಉಳಿಸುವ ಸಮಯ ಎಂದರು. ಕೇಂದ್ರ ಸರ್ಕಾರ ದೇಶದಲ್ಲಿದ್ದ 2 ಸಾವಿರ ವೆಂಟಿಲೇಟರ್ ಬೆಡ್‌ಗಳನ್ನು 80 ಸಾವಿರಕ್ಕೆ ಹೆಚ್ಚಿಸಿದ್ದು, ಆಕ್ಸಿಜನ್ ಕೊರತೆ ನೀಗಿಸಲು ವಿಮಾನ, ರೈಲು, ಹಡಗುಗಳ ಮೂಲಕ ವಿದೇಶಗಳಿಂದ ಆಮ್ಲಜನಕ ಆಮದು ಮಾಡಿಕೊಂಡಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಶಾಂಭವಿ ಅಶ್ವತ್ಥಪುರ, ಶಕುಂತಲಾ ಡೋಣವಾಡೆ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts