More

    ಅನಧಿಕೃತ ಲೇಔಟ್​ಗಳ ತೆರವು

    ಧಾರವಾಡ: ಇಲ್ಲಿಯ ರಾಜೀವ ಗಾಂಧಿ ನಗರದಲ್ಲಿ ಅಂದಾಜು 13 ಎಕರೆ ಜಾಗದಲ್ಲಿ ನಿರ್ವಿುಸಿದ್ದ ಅನಧಿಕೃತ ಲೇಔಟ್​ಗಳನ್ನು ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ(ಹುಡಾ)ದ ವತಿಯಿಂದ ಶುಕ್ರವಾರ ತೆರವು ಮಾಡಲಾಯಿತು.

    ಹುಡಾ ಪರವಾನಗಿ ಪಡೆಯದೆ ನಿವೇಶನಗಳನ್ನು ಅಭಿವೃದ್ಧಿಪಡಿಸಿದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಲಾಗಿತ್ತು. ಆದರೆ, ಸೂಕ್ತ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ನಿವೇಶನ ಎಂದು ಕಾಣುವಂತೆ ಮಾಡಲು ಅಳವಡಿಸಿದ್ದ ಗುರುತು ಕಲ್ಲು ಹಾಗೂ ರಸ್ತೆ, ಚರಂಡಿ, ವಿದ್ಯುತ್ ಕಂಬ, ಇತರ ಸೌಲಭ್ಯಗಳನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಲಾಯಿತು.

    ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಶ ಕಲಬುರ್ಗಿ, ಈ ಲೇಔಟ್ ಅನಧಿಕೃತವಾಗಿದ್ದರಿಂದ ಕೆಲ ದಿನಗಳ ಹಿಂದೆ ಅಧಿಕಾರಿಗಳೊಂದಿಗೆ ಆಗಮಿಸಿ ಪರಿಶೀಲನೆ ನಡೆಸಲಾಗಿತ್ತು. ಮಾಲೀಕರಿಗೆ ನೋಟಿಸ್ ಸಹ ನೀಡಲಾಗಿತ್ತು. ಆದರೆ ಸೂಕ್ತ ಸ್ಪಂದನೆ ಬಾರದ ಕಾರಣಕ್ಕೆ ತೆರವು ಮಾಡಲಾಗಿದೆ ಎಂದರು.

    ಹುಡಾದಿಂದ ಈಗಾಗಲೇ ಹು-ಧಾ ಅವಳಿ ನಗರದ ಹಲವು ಕಡೆಗಳಲ್ಲಿ ಅನಧಿಕೃತ ವಸತಿ ವಿನ್ಯಾಸಗಳ ತೆರವು ಕಾರ್ಯ ನಡೆಸಲಾಗಿದೆ. ಕರೊನಾ ಕಾರಣಕ್ಕೆ ಕೆಲ ತಿಂಗಳು ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದು, ಯಾವುದೇ ಕಾರಣಕ್ಕೂ ಕಾರ್ಯಾಚರಣೆ ನಿಲ್ಲುವುದಿಲ್ಲ. ಅನಧಿಕೃತ ಲೇಔಟ್ ನಿರ್ಮಾಣ ಕಾರ್ಯವನ್ನು ಸಂಬಂಧಪಟ್ಟವರು ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಂಟಾಗುವ ನಷ್ಟಕ್ಕೆ ಅವರೇ ಹೊಣೆಯಾಗುತ್ತಾರೆ ಎಂದರು.

    ಹುಡಾ ಸದಸ್ಯರಾದ ಚಂದ್ರಶೇಖರ ಗೋಕಾಕ, ಸುನೀಲ ಮೋರೆ, ಮೀನಾಕ್ಷಿ ಒಂಟಮುರಿ, ಆಯುಕ್ತ ನಿಂಗಪ್ಪ ಕುಮ್ಮಣ್ಣವರ, ಟಿಪಿಎಂ ವಿವೇಕ ಕಾರೇಕರ, ಕಾರ್ಯನಿರ್ವಾಹಕ ಅಧಿಕಾರಿ ಎಂ. ರಾಜಶೇಖರ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಕೊಕ್ಕಳಕಿ, ಉಮೇಶ ಬೇವೂರ, ಬಸವರಾಜ ದೇವಗಿರಿ, ಮುಕುಂದ ಜೋಶಿ, ಮೌನೇಶ ಬಡಿಗೇರ, ಸಿಬ್ಬಂದಿ, ಇತರರು ಇದ್ದರು.

    ಬಡವರೇ ಬಲಿಪಶು

    ಅನಧಿಕೃತ ಲೇಔಟ್​ಗಳಿಗೆ ನಗರದ ಬಡ ಜನರೇ ಹೆಚ್ಚು ಬಲಿಪಶು ಆಗುತ್ತಿದ್ದಾರೆ. ನಿವೇಶನ ಖರೀದಿಸುವವರು ದಾಖಲಾತಿಗಳನ್ನು ಮೊದಲು ಪರಿಶೀಲಿಸಬೇಕು. ಹುಡಾ ಅಥವಾ ಸಂಬಂಧಿಸಿದ ಇಲಾಖೆಯಿಂದ ನಿವೇಶನ ನಿರ್ವಣಕ್ಕೆ ಅನುಮತಿ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಂಡು ಖರೀದಿಗೆ ಮುಂದಾಗಬೇಕು. ಇಲ್ಲವಾದಲ್ಲಿ ಹಣ ಕಳೆದುಕೊಂಡು ಸಂಕಷ್ಟ ಅನುಭವಿಸುವಂತಾಗುತ್ತದೆ ಎಂದು ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts