More

    ಅನಧಿಕೃತ ಮನೆಗಳ ಪತ್ತೆಗೆ ಡ್ರೋನ್ ಸರ್ವೇ

    ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ ಖಾಸಗಿ ಜಮೀನುಗಳಲ್ಲಿ 100 ರೂ. ಬಾಂಡ್ ಪೇಪರ್ ಆಧಾರದ ಮೇಲೆ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಮನೆಗಳಿಗೆ ಸಕ್ರಮ ಭಾಗ್ಯ ಕಲ್ಪಿಸಲು ಡ್ರೋನ್ ಸರ್ವೇ ಆರಂಭವಾಗಿದೆ.

    ಪಾಲಿಕೆಯ ಮಾಹಿತಿ ಪ್ರಕಾರ ಬೆಳಗಾವಿ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 120 ಪ್ರದೇಶಗಳಲ್ಲಿ ಮಹಾನಗರ ಪಾಲಿಕೆ, ಬೆಳಗಾವಿ ಅಭಿವೃದ್ಧಿ ಪ್ರಾಧಿಕಾರ (ಬುಡಾ)ದಿಂದ ಯಾವುದೇ ಅನುಮತಿ, ಕೆಜೆಪಿ, ಎನ್.ಎ ಇಲ್ಲದೆ 100 ರೂ. ಬಾಂಡ್ ಪೇಪರ್ ಮೇಲೆ ಸುಮಾರು 20 ಸಾವಿರ ಅನಧಿಕೃತ ಮನೆಗಳು ನಿರ್ಮಾಣಗೊಂಡಿವೆ. ಈ ಮನೆಗಳಿಗೆ ಅಧಿಕೃತವಾಗಿ ಯಾವುದೇ ದಾಖಲೆಗಳು ಇಲ್ಲದಿರುವ ಕಾರಣ ಬ್ಯಾಂಕ್‌ಗಳಿಂದ ಸಾಲ, ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರು ಸ್ವಯಂ ಪ್ರೇರಿತರಾಗಿ ಡ್ರೋನ್ ಸರ್ವೇ ಆರಂಭಿಸಿದ್ದಾರೆ.

    ಮಹಾನಗರ ಪಾಲಿಕೆ ವ್ಯಾಪ್ತಿಯ ನ್ಯೂ ಗಾಂಧಿ ನಗರ, ವಡಗಾಂವ, ಶಹಾಪುರ, ಸಮರ್ಥ ನಗರ, ಅನಗೋಳ ಸೇರಿದಂತೆ ವಿವಿಧ ಕಡೆ ಖಾಸಗಿ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಬಡಾವಣೆಗಳಲ್ಲಿನ ನಿವೇಶನಗಳನ್ನು 100 ರೂ. ಬಾಂಡ್ ದಾಖಲೆಗಳ ಆಧಾರದ ಮೇಲೆ ಕೂಲಿ ಕಾರ್ಮಿಕರು, ಆಟೋ, ಬಸ್ ಚಾಲಕರು, ಖಾಸಗಿ ಕಂಪನಿಗಳ ನೌಕರರು, ಸಣ್ಣ ವ್ಯಾಪಾರಿಗಳು ಖರೀದಿಸಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ, ಮಹಾನಗರ ಪಾಲಿಕೆಯಿಂದ ಯಾವುದೇ ರೀತಿಯ ಮೂಲ ಸೌಲಭ್ಯಗಳು ಸಿಗುತ್ತಿಲ್ಲ.

    ಅನಧಿಕೃತ ಬಡಾವಣೆಗಳಲ್ಲಿನ ಮನೆಗಳನ್ನು ಸಕ್ರಮಗೊಳಿಸಿ ಅಲ್ಲಿನ ನಿವಾಸಿಗಳಿಗೆ ಮೂಲ ಸೌಕರ್ಯಗಳನ್ನು ಹಾಗೂ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ನೇತೃತ್ವದ ತಂಡವು ಡ್ರೋನ್ ಸರ್ವೇ ಆರಂಭಿಸಿದ್ದು, 58 ಪ್ರದೇಶಗಳಲ್ಲಿ ಸುಮಾರು 6 ಸಾವಿರ ಅನಧಿಕೃತ ಮನೆಗಳು ಪತ್ತೆಯಾಗಿವೆ. ಈ ಎಲ್ಲ ಅನಧಿಕೃತ ಮನೆಗಳನ್ನು ಸಕ್ರಮಗೊಳಿಸಿ ಮಹಾನಗರ ಪಾಲಿಕೆಯ ತೆರಿಗೆ ವ್ಯಾಪ್ತಿಗೆ ಒಳಪಡಿಸುವುದು. ಬಳಿಕ ಕುಡಿಯುವ ನೀರು, ರಸ್ತೆ, ಬೀದಿ ದೀಪ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತದೆ ಎಂದು ಪಾಲಿಕೆಯ ಸದಸ್ಯರು ತಿಳಿಸಿದ್ದಾರೆ.

    ಪಾಲಿಕೆಗೆ ಹೆಚ್ಚುವರಿ ಆದಾಯ

    ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಅನಧಿಕೃತ ಬಡಾವಣೆಗಳಿಗೆ ರಾಜಕೀಯ ಒತ್ತಡದಿಂದಾಗಿ ಕುಡಿಯುವ ನೀರು, ರಸ್ತೆ, ಬೀದಿ ದೀಪ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಆದರೆ, ಅಧಿಕೃತವಾಗಿ ತೆರಿಗೆ ಕಟ್ಟಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪಾಲಿಕೆಗೆ ವಾರ್ಷಿಕ ಕೋಟ್ಯಂತರ ರೂ. ತೆರಿಗೆ ನಷ್ಟವಾಗುತ್ತಿದೆ. ಸರ್ಕಾರವು ಸುಮಾರು 20 ಸಾವಿರ ಅನಧಿಕೃತ ಮನೆಗಳನ್ನು ಸಕ್ರಮ ಗೊಳಿಸಿದರೆ ಪಾಲಿಕೆಗೆ ವಾರ್ಷಿಕ ಹೆಚ್ಚುವರಿಯಾಗಿ ಸುಮಾರು 2 ರಿಂದ 3 ಕೋಟಿ ರೂ. ಆದಾಯ ಬರಲಿದೆ. ಅಲ್ಲದೆ, ಈ ಅಕ್ರಮ ಬಡಾವಣೆಗಳಲ್ಲಿ ಸಾರ್ವಜನಿಕ ಬಳಕೆಗಾಗಿ ಮೀಸಲಿಟ್ಟಿರುವ ಸುಮಾರು 200ಕ್ಕೂ ಅಧಿಕ ಆಸ್ತಿಗಳು ಪಾಲಿಕೆಗೆ ಸೇರಲಿವೆ. ಈ ಎಲ್ಲ ಆಸ್ತಿಗಳು ಅಧಿಕೃತವಾಗಿ ಪಾಲಿಕೆಯ ತೆರಿಗೆ ವ್ಯಾಪ್ತಿಗೆ ಒಳಪಡಲಿವೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅನಧಿಕೃತ ಮನೆಗಳನ್ನು ಗುರುತಿಸಿ ಸಕ್ರಮಗೊಳಿಸಲು ಡ್ರೋನ್ ಸರ್ವೇ ಮಾಡುತ್ತಿದ್ದೇವೆ. ಸರ್ಕಾರದ ಅಕ್ರಮ-ಸಕ್ರಮ ಯೋಜನೆ ಅಡಿಯಲ್ಲಿ ಕ್ರಮ ವಹಿಸಲಾಗುವುದು.
    | ಅಭಯ ಪಾಟೀಲ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts