More

    ಅನಧಿಕೃತ ಕಟ್ಟಡ ತೆರವುಗೊಳಿಸಿ

    ಶ್ರೀರಂಗಪಟ್ಟಣ: ತಾಲೂಕಿನ ಮೊಗರಹಳ್ಳಿಮಂಟಿ ಗ್ರಾಮದ ಸರ್ವೇ ನಂ.128ರ ಆಶ್ರಯ ಯೋಜನೆ ಫಲಾನುಭವಿಗಳ ನಿವೇಶನಗಳಲ್ಲಿ ಹಲವರು ಅಕ್ರಮವಾಗಿ ಮನೆ ನಿರ್ಮಿಸಿದ್ದಾರೆ. ಈ ಸಂಬಂಧ ದಾಖಲೆಗಳನ್ನು ಪರಿಶೀಲಿಸಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

    ತಾಲೂಕು ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮೊಗರಹಳ್ಳಿ ಮಂಟಿ ಗ್ರಾಮದಲ್ಲಿ ಆಶ್ರಯ ಯೋಜನೆ ನಿವೇಶನಗಳಲ್ಲಿ ಕಳೆದ 17 ವರ್ಷಗಳಿಂದೀಚೆಗೆ 65ಕ್ಕೂ ಹೆಚ್ಚು ವಲಸಿಗ ಜನರು ಅನಧಿಕೃತ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದು, ಕೆಲವರು ಅಕ್ರಮ-ಸಕ್ರಮ ಯೋಜನೆಯ 94ಸಿ ಅಡಿಯಲ್ಲಿ ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಒಂದು ಯೋಜನೆಯಲ್ಲಿ ಈ ಸ್ಥಳ ಗುರುತಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಇಂತಹ ಅರ್ಜಿಗಳನ್ನು ಅನುಮೋದನೆಗೊಳಿಸಲು ಸಾಧ್ಯವಿಲ್ಲದ ಕಾರಣ ಪಾಂಡವಪುರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ವಜಾಗೊಳಿಸಲಾಗಿದೆ. ಆದರೂ ಈ ಸ್ಥಳದಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣ ಹೆಚ್ಚಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಬೇಕು. ಹಕ್ಕು ಪತ್ರ ಹೊಂದಿರುವವರು ಹಾಗೂ ಹೊಂದಿಲ್ಲದವವರ ಹೆಸರು ಪಟ್ಟಿ ಮಾಡಬೇಕು. ಸಕ್ರಮ ದಾಖಲೆಗಳುಳ್ಳ ಫಲಾನುಭವಿಗಳನ್ನು ಹೊರತುಪಡಿಸಿ ಉಳಿದ ಅಕ್ರಮ ಕಟ್ಟಡಗಳನ್ನು ಶೀಘ್ರವೇ ತೆರವುಗೊಳಿಸಿ ನಿವೇಶನಗಳನ್ನು ಪುನಃ ಸರ್ಕಾರಕ್ಕೆ ಸುಪರ್ದಿಗೆ ಪಡೆಯಬೇಕು ಎಂದು ತಾಕೀತು ಮಾಡಿದರು.

    ಇದಕ್ಕೂ ಮುನ್ನ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಮಾತನಾಡಿ, 1975-76ರಲ್ಲಿ ಪಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂ.30 ರಿಂದ ಬೇರ್ಪಡಿಸಿ ನೂತನ ಸರ್ವೇ ನಂ.128ರನ್ನಾಗಿ ಪರಿವರ್ತಿಸಲಾಗಿದೆ. 1993-94ರಲ್ಲಿ ಮೊಗರಹಳ್ಳಿ ಮಂಟಿ ಗ್ರಾಮದ ಈ ಸ್ಥಳದಲ್ಲಿ ಆಶ್ರಯ ಯೋಜನೆಯಲ್ಲಿ ನಿವೇಶನಗಳನ್ನು ವಿತರಿಸಲು ಅಂದು ಸರ್ಕಾರ 202 ಫಲಾನುಭವಿಗಳನ್ನು ಗುರುತಿಸಿ ಹಕ್ಕುಪತ್ರ ವಿತರಣೆ ಮಾಡಿತ್ತು. ಆದರೆ ಹಕ್ಕುಪತ್ರ ಪಡೆದಿರುವವರಲ್ಲಿ ಕೇವಲ 47 ಜನರು ಮಾತ್ರ ಅಧಿಕೃತ ದಾಖಲೆ ಪತ್ರಗಳು, ಗ್ರಾಮ ಪಂಚಾಯಿತಿಯಲ್ಲಿ ಸಕ್ರಮ ಖಾತೆಯೊಂದಿಗೆ ಮನೆ ನಿರ್ಮಿಸಿಕೊಂಡು ಜೀವಿಸುತ್ತಿದ್ದಾರೆ. ಉಳಿಕೆ 155 ಫಲಾನುಭವಿ ಜನರ ಯಾವ ಮಾಹಿತಿಯೂ ಅಧಿಕೃತವಾಗಿ ಲಭ್ಯವಾಗಿಲ್ಲ. ಈ ಬಗ್ಗೆ ಪರಿಶೀಲಿಸಿ ಸಕ್ರಮ ಖಾತೆ ಹೊಂದಿರುವವರ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಹಕ್ಕುಪತ್ರ ವಿತರಣೆಗೆ ಕ್ರಮ: ತಾಲೂಕಿನ ಆರತಿ ಉಕ್ಕಡ ಸಮೀಪದ ಮಾಕನಕೊಪ್ಪಲು(ವಿದ್ಯಾನಗರ) ಗ್ರಾಮದಲ್ಲಿ 70 ಕುಟುಂಬಗಳು ಸಾಕಷ್ಟು ವರ್ಷಗಳಿಂದ ವಾಸಿಸುತ್ತಿದ್ದು, ಇಲ್ಲಿನ 44 ಕುಟುಂಬಗಳಿಗೆ ಹಕ್ಕು ಪತ್ರ ಲಭ್ಯವಾಗಿಲ್ಲ. ಈ ಬಗ್ಗೆ ಗ್ರಾಮಸ್ಥರು ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಸಭೆಯಲ್ಲಿ ಪ್ರಸ್ತಾಪಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕುಮಾರ್, ತಹಸೀಲ್ದಾರ್ ಹಾಗೂ ರಾಜಸ್ವ ನಿರೀಕಕ್ಷರಿಂದ ಸ್ಥಳದಲ್ಲೇ ಮಾಹಿತಿ ಪಡೆಯಲಾಗಿದೆ. ಗ್ರಾಮದ ಸರ್ವೇ ನಂ.19ರಲ್ಲಿನ 6 ಎಕರೆ ಜಮೀನಿನಲ್ಲಿ ಪ್ರಸ್ತುತ ವಾಸಿಸುತ್ತಿರುವ 70 ಕುಟುಂಬಗಳ ಪೈಕಿ ದಾಖಲೆ ಹೊಂದಿರದ 44 ಕುಟುಂಬಗಳ ಅಗತ್ಯ ದಾಖಲೆ ಮತ್ತು ವಿವರಗಳನ್ನು ಪಡೆದು ಅರ್ಹವಿರುವವರಿಗೆ ಶೀಘ್ರವೇ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

    ಜನರ ಸಮಸ್ಯೆಗೆ ಸ್ಪಂದಿಸಿ: ತಾಲೂಕು ಕಚೇರಿಗೆ ಜನರನ್ನು ಕೆಲಸ ಕಾರ್ಯಗಳಿಗೆ ಸಾಕಷ್ಟು ಅಲೆದಾಡಿಸುವುದು ಹಾಗೂ ಕಾಯಿಸುವುದು ಸೇರಿದಂತೆ ಸಣ್ಣ-ಪುಟ್ಟ ದೂರುಗಳು ನಿರಂತರವಾಗಿ ಕೇಳಿ ಬರುತ್ತಿದೆ. ಆದ್ದರಿಂದ ಜನರ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿ ಅಧಿಕಾರಿ-ವರ್ಗಕ್ಕೆ ಬಿಸಿ ಮುಟ್ಟಿಸಬೇಕು ಎಂದು ಜಿಲ್ಲಾಧಿಕಾರಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಸಲಹೆ ನೀಡಿದರು.

    ಶಾಸಕರ ಮಾತಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ.ಕುಮಾರ್, ಸಮಸ್ಯೆ ಹೊತ್ತು ತರುವ ಜನರೊಂದಿಗೆ ಜನಸ್ನೇಹಿಯಾಗಿ ನಡೆದುಕೊಳ್ಳಬೇಕು. ಆದ್ಯತೆ ಅನುಸಾರ ಸಮಸ್ಯೆಗಳನ್ನು ಬಗೆಹರಿಸಬೇಕು. ವಿನಾ ಕಾರಣ ಜನರನ್ನು ಕಚೇರಿಗೆ ಅಲೆದಾಡಿಸಬಾರದು. ಒಂದು ವೇಳೆ ದೂರುಗಳು ಹೆಚ್ಚಾದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

    ತಹಸೀಲ್ದಾರ್ ಆಶ್ವಿನಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೀಣಾ, ಡಿಡಿಎಲ್‌ಆರ್ ಉಮೇಶ್, ಎಡಿಎಲ್‌ಆರ್ ಮೇಘನಾ, ಬೆಳಗೊಳ ರಾಜಸ್ವ ನೀರಿಕ್ಷಕ ಬಸವರಾಜು, ಕೆ.ಶೆಟ್ಟಹಳ್ಳಿ-1 ರಾಜಸ್ವ ನಿರೀಕ್ಷಕ ಭಾಸ್ಕರ್, ಪಿಡಿಒ ಶಶಿಕಲಾ, ಗ್ರಾಮಲೆಕ್ಕಾಧಿಕಾರಿ ಹರ್ಷಿತಾ ಉಪಸ್ಥಿತರಿದ್ದರು.

    ಗ್ರಾಮಕ್ಕೆ ಭೇಟಿ: ಸಭೆಗೂ ಮುನ್ನ ಜಿಲ್ಲಾಧಿಕಾರಿ ಡಾ.ಕುಮಾರ್, ಉಪವಿಭಾಗಾಧಿಕಾರಿ ನಂದೀಶ್ ಹಾಗೂ ತಾಲೂಕು ಆಡಳಿತ ಅಧಿಕಾರಿಗಳು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ನೇತೃತ್ವದಲ್ಲಿ ಪಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಗರಹಳ್ಳಿ ಮಂಟಿ ಗ್ರಾಮಕ್ಕೆ ತೆರಳಿ ಪರಿಶೀಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts