More

    ಅನಗತ್ಯವಾಗಿ ಓಡಾಡುವವರ ವಿರುದ್ಧ ಕ್ರಮ

    ಸಿದ್ದಾಪುರ: ಪಟ್ಟಣ ಪ್ರದೇಶ ಅಥವಾ ಗ್ರಾಮೀಣ ಭಾಗದಲ್ಲಿ ಅನಗತ್ಯವಾಗಿ ಓಡಾಟ ಮಾಡುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಿ. ಯಾವುದೇ ಉದ್ದೇಶಿತ ಕಾರ್ಯವಿಲ್ಲದೇ ಸಂಚರಿಸುವವರಿಗೆ ಲಾಠಿ ಪೆಟ್ಟು ಕೊಡಿ. ಯಾವುದೇ ಮುಲಾಜಿಗೂ ಒಳಗಾಗಬೇಡಿ ಎಂದು ಶಿರಸಿ ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಅವರು ಪಿಐ ಪ್ರಕಾಶ ಹಾಗೂ ಪಿಎಸ್​ಐ ಮಂಜುನಾಥ ರ್ಬಾ ಅವರಿಗೆ ಸೂಚಿಸಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಕರೊನಾ ವೈರಸ್ ಹರಡುವಿಕೆ ತಡೆಗಟ್ಟುವ ಕುರಿತು ಮಂಗಳವಾರ ಸಂಜೆ ಜರುಗಿದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ಕವಂಚೂರುನಲ್ಲಿದ್ದ ಚೆಕ್ ಪೋಸ್ಟ್ ಅನ್ನು ಜಿಲ್ಲೆಯ ಗಡಿಭಾಗವಾದ ಚೂರಿಕಟ್ಟೆಗೆ ಸ್ಥಳಾಂತರಿಸಿ. ಇದರಿಂದ ಹೊರ ಜಿಲ್ಲೆಯಿಂದ ಸಿದ್ದಾಪುರ ಹಾಗೂ ಮಾವಿನಗುಂಡಿ ಭಾಗಕ್ಕೆ ಸಂಚರಿಸುವವರ ಮೇಲೆ ನಿಗಾವಹಿಸಲು ಸಾಧ್ಯ. ಅಲ್ಲಿ ಓರ್ವ ವೈದ್ಯರನ್ನು ನಿಯೋಜಿಸಿ. ಸಂಚರಿಸುವವರ ಸಮಗ್ರ ಮಾಹಿತಿ ಪಡೆದುಕೊಳ್ಳಿ. ಸಾರ್ವಜನಿಕರ ಜತೆ ಸಮಾಧಾನದಿಂದ ವರ್ತಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿ ಎಂದು ತಹಸೀಲ್ದಾರ್ ಮಂಜುಳಾ ಭಜಂತ್ರಿ ಅವರಿಗೆ ಸೂಚಿಸಿದರು. ಆಶಾ ಕಾರ್ಯಕರ್ತೆಯರನ್ನು ಪ್ರತಿ ಮನೆಗೂ ಭೇಟಿ ನೀಡಲು ನಿಯೋಜಿಸಿ ಹೊರಗಿನ ಊರುಗಳಿಂದ ಬಂದವರು ಮತ್ತು ಅನಾರೋಗ್ಯ ಕಂಡುಬಂದವರ ವಿವರಗಳನ್ನು ಪಡೆದುಕೊಳ್ಳಿ. ಹೊರ ಊರುಗಳಿಂದ ಬಂದ ಮನೆಗಳ ಬಗ್ಗೆ ಅನುಮಾನವಿದ್ದರೆ ಅಕ್ಕಪಕ್ಕದ ಮನೆಗಳಿಂದ ವಿವರ ಪಡೆದುಕೊಳ್ಳಬೇಕು ಎಂದು ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡುವ ಆಶಾ ಕಾರ್ಯಕರ್ತೆಯರಿಗೆ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

    ಪಟ್ಟಣದಲ್ಲಿ ಅಂಗಡಿಗಳು ತೆರೆದಿದ್ದರೆ, ದಿನಸಿ ಅಂಗಡಿಗಳು ಕಾನೂನು ನಿಯಮ ಪಾಲಿಸದಿದ್ದರೆ, ಅನವಶ್ಯಕವಾಗಿ ಅಂಗಡಿ ತೆರೆದಿದ್ದರೆ ಆ ಅಂಗಡಿಗಳನ್ನು ಸೀಜ್ ಮಾಡಿ. ಪಟ್ಟಣದಲ್ಲಿ ಶಂಕಿತ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ. ವೈರಸ್ ಹರಡುವಲ್ಲಿ ಪೂರಕ ವಾತಾವರಣ ಕಂಡುಬಂದರೆ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ ಅವರಿಗೆ ಸೂಚಿಸಿದರು.

    ತಹಸೀಲ್ದಾರ್ ಮಂಜುಳಾ ಭಜಂತ್ರಿ, ತಾಪಂ ಇಒ ಪ್ರಶಾಂತರಾವ್, ತಾಲೂಕು ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ, ಪಪಂ ಮುಖ್ಯಾಧಿಕಾರಿ ಕುಮಾರನಾಯ್ಕ, ಪಿಐ ಪ್ರಕಾಶ, ಪಿಎಸ್​ಐ ಮಂಜುನಾಥ ರ್ಬಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts