More

    ಅಧಿಕ ಸಂಖ್ಯೆಯ ಅರೆ ಸೇನಾ ತುಕಡಿಗಳಿಗೆ ಬೇಡಿಕೆ


    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ, ಪ್ಯಾರಾ ಮಿಲಟರಿ ಅಗತ್ಯತೆಯನ್ನು ಪ್ರತಿಪಾದಿಸಿದ್ದು, ವಿವಿಐಪಿ ಪ್ರಚಾರದ ಬಂದೋಬಸ್ತ್, ಚೆಕ್‌ಪೋಸ್ಟ್, ಮತಗಟ್ಟೆ, ಸ್ಟ್ರಾಂಗ್‌ರೂಂಗಳಿಗೆ ಭದ್ರತೆ ಇತ್ಯಾದಿ ಚುನಾವಣಾ ಕರ್ತವ್ಯಗಳಿಗೆ ಪೊಲೀಸ್ ಅಧಿಕಾರಿ, ಸಿಬ್ಬಂದಿಯೊಂದಿಗೆ, ಪ್ಯಾರಾಮಿಲಟರಿ ತುಕಡಿಗಳನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಒದಗಿಸುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ.
    ಚಿತ್ರದುರ್ಗ ಜಿಲ್ಲೆ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಈ ಚುನಾವಣೆಗಾಗಿ, ಜಿಲ್ಲೆಗೆ ಪ್ಯಾರಾಮಿಲಟರಿಯ 18 ಕಂಪನಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಒಂದು ಪ್ಯಾರಾಮಿಲಟರಿ ಕಂಪನಿಯಲ್ಲಿ ಅಂದಾಜು ನೂರು ಯೋಧರಿರುತ್ತಾರೆ. ಜಿಲ್ಲೆಯ 6 ತಾಲೂಕುಗಳಿಗೆ ತಲಾ ಮೂರರಂತೆ 18 ಕಂಪನಿಗಳ ಅಗತ್ಯವಿದೆ ಎಂದು ಪ್ರತಿಪಾದಿಸಲಾಗಿದೆ. ಆದರೆ, ಬೇಡಿಕೆಯಂತೆ ಅರೆ ಸೇನಾ ತುಕಡಿಗಳನ್ನು ಮಂಜೂರು ಮಾಡದಿದ್ದರೂ, ತಾಲೂಕಿಗೆ ಒಂದರಂತೆ ಆರು ಕಂಪನಿಗಳು ಬರಬಹುದೆಂಬ ನಿರೀಕ್ಷೆ ಇದೆ. ಕಳೆದ ಲೋಕಸಭಾಚುನಾವಣೆಯಲ್ಲಿ ನಾಲ್ಕು ತುಕಡಿಗಳಿದ್ದವು.
    ಚುನಾವಣೆ ಘೋಷಣೆ ಮುನ್ನ ಹಾಗೂ ಘೋಷಣೆ ಬಳಿಕ ಶಿವಮೊಗ್ಗ ಮತ್ತಿತರ ಜಿಲ್ಲೆಗಳಿಗೆ ಪ್ಯಾರಾಮಿಲಟರಿ ಸಿಬ್ಬಂದಿ ಬಂದಿದ್ದು, ರೂಟ್‌ಮಾರ್ಚ್ ಮೂಲಕ ಸಾರ್ವಜನಿಕರಲ್ಲಿ ಶಾಂತಿಯುತ ಚುನಾವಣೆ ವಿಶ್ವಾಸ ಮೂಡಿಸಲಾಗುತ್ತಿದೆ. ಇನ್ನೂ ಪ್ಯಾರಾಮಿಲಟರಿ ಪೋರ್ಸ್, ಆಲಾಟ್ ಆಗದ ಜಿಲ್ಲೆಗಳಲ್ಲಿ ರೂಟ್‌ಮಾರ್ಚ್‌ಗಾಗಿ ಜಿಲ್ಲೆಗಳಿಗೆ ಬಂದಿರುವ ಈ ತುಕಡಿಗಳನ್ನು ಕರೆಸಿ ರೂಟ್‌ಮಾರ್ಚ್ ನಡೆಸಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆ ವಿವಿಧೆಡೆ ಶಿವಮೊಗ್ಗಕ್ಕೆ ಬಂದಿರುವ ಅರೆ ಸೇನಾ ತುಕಡಿ ರೂಟ್‌ಮಾರ್ಚ್ ನಡೆಸಿದೆ.
    *ಹೋಮ್‌ಗಾರ್ಡ್‌ಗೆ ಬೇಡಿಕೆ: ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಪ್ರತ್ಯೇಕವಾಗಿ ಹೋಂಗಾರ್ಡ್‌ಗಳಿಗೆ ಬೇಡಿಕೆ ಸಲ್ಲಿಕೆಯಾಗಿವೆ. ಇನ್ನು ರಾಜ್ಯದಲ್ಲಿರುವ ಅಬಕಾರಿ ಇಲಾಖೆಗೆ ಸೇರಿದ 40 ಕಾಯಂ ತನಿಖಾ ಠಾಣೆಗಳಿಗೆ 1545 ಹೋಂಗಾರ್ಡ್‌ಗಳನ್ನು ಸಿಬ್ಬಂದಿ ನಿಯೋಜಿಸಲಾಗಿದೆ. ಅಬಕಾರಿ ಇಲಾಖೆಯ 2022-2023 ವಾರ್ಷಿಕ ವರದಿ ಮಾಹಿತಿಯಂತೆ,ಮಂಜೂರಾದ ಒಟ್ಟು 5828 ಹುದ್ದೆಗಳಲ್ಲಿ 2372 ಹುದ್ದೆಗಳು ಖಾಲಿ ಇವೆ.
    ಇನ್ಸ್‌ಪೆಕ್ಟರ್ ಮಂಜೂರಾದ 541 ಪೈಕಿ 107 ಹುದ್ದೆಗಳು, ಸಬ್‌ಇನ್ಸ್‌ಪೆಕ್ಟರ್ 632ರಲ್ಲಿ 184, ಹೆಡ್‌ಕಾನ್ಸ್‌ಟೇಬಲ್ 831ರಲ್ಲಿ-811 ಹಾಗೂ ಮಂಜೂರಾಗಿರುವ 2137 ಕಾನ್ಸ್‌ಸ್ಟೇಬಲ್ ಹುದ್ದೆಗಳಲ್ಲಿ 704 ಖಾಲಿ ಇವೆ. ವಿಶೇಷವಾಗಿ ಹೆಡ್‌ಕಾನ್ಸ್‌ಸೇಬಲ್ ಹಾಗೂ ಕಾನ್ಸ್‌ಸ್ಟೇಬಲ್ ಹುದ್ದೆಗಳು ಬಹುತೇಕ ಖಾಲಿ ಇರುವುದರಿಂದಾಗಿ ದೈನದಿಂದ ಕಾರ‌್ಯನಿರ್ವಹಣೆಗೆ ಸಾಕಷ್ಟು ಅಡಚಣೆಯಾಗುತ್ತಿದೆ ಎಂಬುದು ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.
    ಅಬಕಾರಿ ಇಲಾಖೆಗೆ ನಿಯೋಜಿಸಿರುವ ಹೋಂಗಾರ್ಡ್‌ಗಳು ನೀತಿ ಸಂಹಿತೆ ಜಾರಿ ಇರುವವರೆಗೂ ಕರ್ತವ್ಯ ನಿರ್ವಹಿಸಲಿದ್ದಾರೆ. ರಾಜ್ಯದ ಅಬಕಾರಿ ಜಿಲ್ಲೆಗಳಾದ ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಗ್ರಾಮಾಂತರ ಜಿಲ್ಲೆಗೆ 264, ಬೆಳಗಾವಿ 90, ಕಲಬುರಗಿ 63,ದಕ್ಷಿಣಕನ್ನಡ 73, ಮೈಸೂರು 86, ಬೆಂ.ಗ್ರಾಮಾಂತರ-34, ಚಿಕ್ಕಬಳ್ಳಾಪುರ-36, ತುಮಕೂರು-60, ಕೋಲಾರ-60, ರಾಮನಗರ-29, ಬಾಗಲಕೋಟೆ 40, ವಿಜಯಪುರ-34, ಧಾರವಾಡ-30, ಹಾವೇರಿ 45, ಬೀದರ್ 48, ರಾಯಚೂರು 43, ಯಾದಗಿರಿ 34, ಬಳ್ಳಾರಿ 45, ವಿಜಯನಗರ 30, ಚಿತ್ರದುರ್ಗ 43, ದಾವಣಗೆರೆ 28, ಗದಗ 17, ಕೊಪ್ಪಳ 34, ಕೊಡಗು 40, ಉಡುಪಿ 39, ಉತ್ತರ ಕನ್ನಡ 43, ಚಾಮರಾಜನಗರ 32, ಚಿಕ್ಕಮಗಳೂರು 30, ಹಾಸನ-40 ಹಾಗೂ ಮಂಡ್ಯ 55 ಹೋಂಗಾರ್ಡ್‌ಗಳನ್ನು ಈಗಾಗಲೇ ನಿಯೋಜಿಸಲಾಗಿದೆ.

    *ಕೋಟ್
    ಜಿಲ್ಲೆಗೆ 18 ಅರೆಸೇನಾ ತುಕಡಿ ಹಾಗೂ 500 ಹೋಮ್‌ಗಾರ್ಡ್‌ಗಳಿಗಾಗಿ ನಮ್ಮ ಇಲಾಖೆಯಿಂದ ಬೇಡಿಕೆ ಸಲ್ಲಿಸಲಾಗಿದೆ. ಸದ್ಯ ನಮ್ಮ ಜಿಲ್ಲೆಗೆ ಇನ್ನೂ ಅರೆ ಸೇನಾ ತುಕಡಿ ಬಂದಿರದ ಕಾರಣಕ್ಕಾಗಿ ಶಿವಮೊಗ್ಗದಿಂದ ಕರೆಸಿ,ಜಿಲ್ಲೆಯ ವಿವಿಧೆಡೆ ರೂಟ್‌ಮಾರ್ಚ್ ನಡೆಸಲಾಗಿದೆ. ರೂಟ್‌ಮಾರ್ಚ್ ನಡೆದ ಅದೇ ದಿನ ಯೋಧರು ಶಿವಮೊಗ್ಗಕ್ಕೆ ಹಿಂತಿರುಗುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts