More

    ಅಧಿಕಾರಿ ಮತ್ತು ಸದಸ್ಯರ ಮಧ್ಯೆ ವಾಗ್ವಾದ

    ಬಸವಕಲ್ಯಾಣ: ಅನುದಾನ ಲಾಪ್ಸ್ ಆಗಿರುವ ವಿಷಯಕ್ಕೆ ಸಂಬಂಧಿಸಿದಂತೆ ತಾಪಂ ಅಧಿಕಾರಿ ಮತ್ತು ಸದಸ್ಯರ ಮಧ್ಯೆ ವಾಗ್ವಾದ ನಡೆದು ಕೆಲ ಕಾಲ ಯಾರು ಏನು ಹೇಳುತ್ತಿದ್ದಾರೆ ಎನ್ನುವದೇ ತಿಳಿಯದ ಗೊಂದಲದ ಸ್ಥಿತಿ ನಿರ್ಮಾಣವಾದ ಪ್ರಸಂಗ ತಾಪಂ ಸಾಮಾನ್ಯ ಸಭೆಯಲ್ಲಿ ಜರುಗಿತು.
    ಸಿಎಂ ಅನಿರ್ಭದಿತ ಅನುದಾನ, ಲಿಂಕ್ ಡಾಕ್ಯೂಮೆಂಟ್ಸ್ ಮತ್ತು ಸ್ಟ್ಯಾಂಪ್​ ಡ್ಯೂಟಿ ಅನುದಾನಕ್ಕೆ ಸಂಬಂಧಿಸಿದ 2.77 ಕೋಟಿ ಅನುದಾನದ ಪೈಕಿ 1.38 ಕೋಟಿ ಅನುದಾನ ಲಾಪ್ಸ್ ಆಗಿರುವದೇ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿತ್ತು. ತಾಪಂ ಇಒ ಅವರ ನಿರ್ಲಕ್ಷವೇ ಕಾರಣ ಎಂದು ಕೆಲ ಸದಸ್ಯರು ಆರೋಪಿಸಿದರು. ಇತರ ಸದಸ್ಯರು ಧ್ವನಿ ಗೂಡಿಸಿ, ಅಕ್ರೋಶ ವ್ಯಕ್ತಪಡಿಸಿದರು.
    ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೋಡ ಅವರ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಕೃಷಿ ಮತ್ತು ಅರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿತ್ತು. ಈ ಮಧ್ಯೆ ಶಾಸಕ ಬಿ.ನಾರಾಯಣರಾವ ಸಭೆಗೆ ಆಗಮಿಸಿದರು. ಅಧಿಕಾರಿಗಳು ಇಲಾಖೆ ವರದಿ ಒಪ್ಪಿಸುತ್ತಿದ್ದರು. ಈ ಮಧ್ಯೆ ಸ್ಥಾಯಿ ಸಮಿತಿ ಅಧ್ಯಕ್ಷ ಓಂಪ್ರಕಾಶ ಪಾಟೀಲ್ ಅನುದಾನ ಲಾಪ್ಸ್ ವಿಷಯ ಪ್ರಸ್ತಾಪಿಸಿ ಇದಕ್ಕೆ ಯಾರು ಹೋಣೆ ಎಂದು ಖಾರವಾಗಿ ಪ್ರಶ್ನಿಸಿದರು. ನಿಗದಿತ ಸಮಯಕ್ಕೆ ಬಿಲ್ ಎಸ್ಟಿಒ ಕಚೇರಿಗೆ ಒಪ್ಪಿದಿರುವದೇ ಲಾಪ್ಸ್ಗೆ ಕಾರಣ ಎಂದು ದೂರಿದರು.
    ತಾಪಂ ಇಒ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರ ಮಧ್ಯೆ ತೀವ್ರ ಮಾತಿನ ಚಕಮುಕಿ ನಡೆಯಿತು. ಒಂದು ಹಂತದಲ್ಲಿ ಇಬ್ಬರು ಎದ್ದು ನಿಂತು ವಾದ-ವಿವಾದಕ್ಕೆ ಇಳಿದರು. ಸ್ಥಾಯಿ ಸಮಿತಿ ಅಧ್ಯಕ್ಷರ ಧ್ವನಿಗೆ ತಾಪಂ ಅಧ್ಯಕ್ಷರು ಸೇರಿ ಕೆಲ ಸದಸ್ಯರು ಧ್ವನಿ ಗೂಡಿಸಿದರು. ಹೀಗಾಗಿ ಸಭೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣದ ಹಂತದಲ್ಲಿ ಶಾಸಕರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
    ಕೆಲಸ ಮಾಡಲಾಗಿದೆ. ಬಿಲ್ ಒಪ್ಪಿಸಲಾಗಿದೆ. ಈಗ ಅನುದಾನ ಲಾಪ್ಸ್ ಆದರೆ ಕೆಲಸ ಮಾಡಿದ ಗುತ್ತಿಗೆದಾರರಿಗೆ ಎಲ್ಲಿಂದ ಹಣ ಪಾವತಿಸಬೇಕು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಶಾಸಕರು, ಇದೇ ವೇಳೆ ಮೇಲಧಿಕಾರಿಗಳನ್ನು ಮೊಬೈಲ್ ಮೂಲಕ ಸಂಪರ್ಕಿಸಿ, ಚರ್ಚಿಸಿದರು. ವಿಶೇಷ ಪ್ರಕರಣ ಎಂದು ಪರಿಗಣಿಸಿ ಅನುದಾನ ಬಿಡುಗಡೆಗೆ ಪ್ರಯತ್ನಸಲಾಗುವುದು ಎಂದು ಭರವಸೆ ನೀಡಿದರು. ಸದಸ್ಯರಾದ ರಾಜು ಢೋಲೆ, ನರಸಾರೆಡ್ಡಿ, ಸಿದ್ರಾಮ ಕಾಮಣ್ಣ, ಗುರುನಾಥ ಮೋರಖಂಡಿ ಸೇರಿ ಇತರ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು. ತಾಪಂ ಉಪಾಧ್ಯಕ್ಷ ಸಂಗಮೇಶ ಬಿರದಾರ ಉಪಸ್ಥಿತಿದ್ದರು. ಇಲಾಖೆ ಅಧಿಕಾರಿಗಳು ಇಲಾಖೆಯ ವರದಿ ಒಪ್ಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts