More

    ಅಧಿಕಾರಿಗಳ ವಿರುದ್ಧ ಬಿಸಿಪಿ ಗರಂ

    ಹುಬ್ಬಳ್ಳಿ: ಮೆಕ್ಕೆಜೋಳ ಬೆಳೆಗಾರರಿಗೆ 5 ಸಾವಿರ ರೂ. ಸಹಾಯಧನ ನೀಡುವ ವಿಷಯದಲ್ಲಿ ಸರಿಯಾಗಿ ಮಾಹಿತಿ ನೀಡದ ಕೃಷಿ ಇಲಾಖೆ ಹಿರಿಯ ಅಧಿಕಾರಿಯನ್ನು ಕೃಷಿ ಸಚಿವ ಬಿ.ಸಿ. ಪಾಟೀಲ ತರಾಟೆಗೆ ತೆಗೆದುಕೊಂಡ ಪ್ರಸಂಗ ನಗರದಲ್ಲಿ ನಡೆಯಿತು.

    ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಇಲಾಖೆ ಅಧಿಕಾರಿಗಳೊಂದಿಗೆ ಭಾನುವಾರ ಅನಿರೀಕ್ಷಿತ ಸಭೆ ನಡೆಸಿದ ಅವರು, ಕೃಷಿ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ವಿರುದ್ಧ ಗರಂ ಆದರು. ಸಭೆಯಲ್ಲಿ ಫೋನ್ ಮುಖಾಂತರ ಅಧಿಕಾರಿಯೊಂದಿಗೆ ಮಾತನಾಡಿದ ಅವರು, ಮೆಕ್ಕೆಜೋಳ ಸಹಾಯಧನ ಕುರಿತು ಮಾಹಿತಿ ಕೇಳಿದರು. ಇದಕ್ಕೆ ಸಮರ್ಪಕ ಉತ್ತರ ಸಿಗದ್ದಕ್ಕೆ ಸಿಟ್ಟಾದ ಸಚಿವರು, ಇಲಾಖೆಯಲ್ಲಿ ನಿಮ್ಮದೇ ಸರ್ವಾಧಿಕಾರನಾ? ಎಂದು ಹರಿಹಾಯ್ದರು.

    ಮೆಕ್ಕೆಜೋಳ ಬೆಳೆದು ನಷ್ಟ ಅನುಭಸಿರುವ ರೈತರಿಗೆ ತಲಾ ಐದು ಸಾವಿರ ರೂ. ಸಹಾಯಧನ ನೀಡಬೇಕು. ಈ ಬಗ್ಗೆ ಸರಿಯಾದ ಮಾಹಿತಿ ನಿಮಗಿಲ್ಲ. ಇಲ್ಲಿ ನಿಮ್ಮದೇ ಸಾರ್ವಭೌಮತ್ವವೇ? ಎಂದು ಗದರಿದರು.

    ಜನರ ಜವಾಬ್ದಾರಿ: ರಾಜ್ಯದಲ್ಲಿ ಲಾಕ್​ಡೌನ್ ಹೋಗಿದೆಯೇ ಹೊರತು ಕರೊನಾ ಹೋಗಿಲ್ಲ. ಹಾಗಾಗಿ ಕರೊನಾ ವಿಷಯದಲ್ಲಿ ಜನರ ಜವಾಬ್ದಾರಿ ಇದೀಗ ಬಹಳಷ್ಟಿದೆ. ಸರ್ಕಾರದಿಂದ ಏನೇನು ಮಾಡಬೇಕು ಅದನ್ನೆಲ್ಲ ಮಾಡಲಾಗುತ್ತಿದೆ. ಜನ ತಿಳಿವಳಿಕೆಯಿಂದ ನಡೆದುಕೊಳ್ಳಬೇಕು. ಪರಸ್ಪರ ಜನರ ಮಧ್ಯೆ ಅಂತರ ಕಾಯ್ದುಕೊಳ್ಳಬೇಕು ಎಂದು ಸಚಿವ ಬಿ.ಸಿ. ಪಾಟೀಲ ಹೇಳಿದರು. ಸೋಯಾಬೀನ್ ಬಿತ್ತನೆ ಬೀಜದ ಬಗ್ಗೆ ಸಾಕಷ್ಟು ದೂರುಗಳಿವೆ. ರೈತರಿಗೆ ತೊಂದರೆಯಾಗಿದೆ. ಯಾವುದೇ ಕಂಪನಿಯ ಬೀಜ ಇರಲಿ, ಎಲ್ಲಿ ಬೀಜ ಮೊಳಕೆಯೊಡೆದಿಲ್ಲವೋ ಅಲ್ಲಿ ರೈತರಿಗೆ ಪರಿಹಾರ ನೀಡಲು ಸೂಚಿಸಿದ್ದೇನೆ. ಯಾವುದೇ ಕಂಪನಿ ಇರಲಿ ಅವರೆಲ್ಲರೂ ಪರಿಹಾರ ನೀಡಲೇ ಬೇಕು. ಗೊಬ್ಬರದ ಸಮಸ್ಯೆ ಇಲ್ಲ. ಸಾಕಷ್ಟು ಸ್ಟಾಕ್ ಇದೆ ಎಂದರು.

    ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ ಪದಗ್ರಹಣ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅವರದು ಕಾಂಗ್ರೆಸ್. ಅವರು ಮಾಡಿಕೊಳ್ಳಲಿ, ಏನೂ ತೊಂದರೆ ಇಲ್ಲ’ ಎಂದರು.

    ಬಲಪ್ರಯೋಗ ಅನಿವಾರ್ಯ: ಜುಲೈ 5ರಿಂದ ಪ್ರತಿ ಭಾನುವಾರ ಲಾಕ್​ಡೌನ್ ಮಾಡುತ್ತಿರುವುದು ಒಳ್ಳೆಯದೆ. ಸಂಪೂರ್ಣ ಲಾಕ್​ಡೌನ್ ಮಾಡಬಾರದು ಎನ್ನುವುದು ನನ್ನ ಆಶಯ ಎಂದ ಅವರು, ಸಂಪುಟ ಸಭೆಯಲ್ಲಿ ಖಾಸಗಿ ಆಸ್ಪತ್ರೆಯ ಕರೊನಾ ಚಿಕಿತ್ಸೆಯ ದರ ನಿಗದಿ ಮಾಡಲಾಗಿದೆ. ಖಾಸಗಿ ಆಸ್ಪತ್ರೆಯವರು ಸಹಕರಿಸಬೇಕು. ಇಲ್ಲವಾದರೆ ಬಲಪ್ರಯೋಗ ಅನಿವಾರ್ಯವಾಗಲಿದೆ ಎಂದು ಸಚಿವ ಬಿ.ಸಿ. ಪಾಟೀಲ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts