More

    ಅಧಿಕಾರಿಗಳ ವಿರುದ್ಧ ಜಿಪಂ ಸಿಇಒ ಆಕ್ರೋಶ

    ರೋಣ: ತಾಲೂಕಿನಲ್ಲಿ ಕರೊನಾ ಸೋಂಕು ಕಾಣಿಸಿಕೊಳ್ಳದ ಗ್ರಾಮಗಳೆಷ್ಟು? ಎಂದು ಜಿಪಂ ಸಿಇಒ ಭರತಕುಮಾರ್ ಕೇಳಿದ ಪ್ರಶ್ನೆಗೆ ತಹಸೀಲ್ದಾರ್ 12 ಎಂದು ಉತ್ತರಿಸಿದರೆ, ತಾಪಂ ಇಒ 5 ಎಂದು ಪ್ರತಿಕ್ರಿಯಿಸಿದರು. ಇದರಿಂದ ಆಕ್ರೋಶಗೊಂಡ ಸಿಇಒ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

    ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿರುವ ಕೋವಿಡ್ ಕೇರ್ ಸೆಂಟರ್​ಗೆ ಗುರುವಾರ ಭೇಟಿ ನೀಡಿ ಮಾಹಿತಿ ಪಡೆದರು. ಸಿಇಒ ಕೇಳಿದ ಪ್ರಶ್ನೆಗೆ ತಡವರಿಸುತ್ತಾ ಉತ್ತರಿಸಿದ ತಹಸೀಲ್ದಾರ್ ತಾಲೂಕಿನಲ್ಲಿ ‘12 ಗ್ರಾಮಗಳಲ್ಲಿ ಸೋಂಕು ಕಾಣಿಸಿಕೊಂಡಿಲ್ಲ’ ಎಂದರು. ತಾಪಂ ಇಒ ಸಂತೋಷ ಪಾಟೀಲ ಪ್ರತಿಕ್ರಿಯಿಸಿ ‘ಒಟ್ಟು 52 ಗ್ರಾಮಗಳ ಪೈಕಿ 47 ಗ್ರಾಮಗಳಲ್ಲಿ ಸೋಂಕು ಕಾಣಿಸಿಕೊಂಡಿದೆ’ ಎಂದರು.

    ಇದರಿಂದ ಅಸಮಾಧಾನಗೊಂಡ ಸಿಇಒ ಅಧಿಕಾರಿಗಳಿಗೇ ಸೋಂಕು ಕುರಿತು ಮಾಹಿತಿ ಇಲ್ಲದಿದ್ದರೆ ಹೇಗೆ? ಎಂದರು. ಅಲ್ಲದೆ, ಗ್ರಾಮೀಣ ಭಾಗದಲ್ಲಿಯೇ ಕರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ ಹೀಗಾಗಿ ಸೋಂಕು ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೋವಿಡ್ ಕೇರ್ ಸೆಂಟರ್​ನಲ್ಲಿರುವ ಸೋಂಕಿತರನ್ನು ಭೇಟಿ ಮಾಡಿದ ಸಿಇಒ, ಊಟೋಪಚಾರ, ವೈದ್ಯಕೀಯ ಸೇವೆ ಕುರಿತು ರೋಗಿಗಳಿಂದ ಮಾಹಿತಿ ಪಡೆದರು. ನಂತರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿರುವ ಕೋವಿಡ್ ಕೇಂದ್ರಕ್ಕೂ ಭೇಟಿ ನೀಡಿದರು. ಈ ವೇಳೆ ತಾಲೂಕಿನ ಬೆಣಚಮಟ್ಟಿ ಗ್ರಾಮದ ಲಂಬಾಣಿ ಮಹಿಳೆಯೊಬ್ಬಳು ಸಿಇಒ ಭರತಕುಮಾರ ಕಾಲಿಗೆರಗಿ ‘ಸರ್ ನಮ್ಮ ಯಜಮಾನರು ಕೋವಿಡ್ ಸೋಂಕು ತಗುಲಿ ಕಳೆದ 8 ದಿನಗಳಿಂದ ಇದೇ ಆಸ್ಪತ್ರೆಯಲ್ಲಿದ್ದಾರೆ. ಆರಾಮ ಆಗ್ಯಾರೋ ಇಲ್ಲ ನೋಡಿ ಹೇಳ್ರೀ’ ಎಂದು ಮನವಿ ಮಾಡಿಕೊಂಡರು. ಆಗ, ಪಕ್ಕದಲ್ಲಿರುವ ಡಾ. ಎಚ್.ಎಲ್. ಗಿರಡ್ಡಿ ಅವರನ್ನು ವಿಚಾರಿಸಿದರು. ಪ್ರತಿಕ್ರಿಯಿಸಿದ ಡಾ. ಗಿರಡ್ಡಿ ರೋಗಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಉತ್ತರಿಸಿದರು.

    ವಿವಿಧ ಗ್ರಾಮಗಳಿಗೆ ಭೇಟಿ: ಜಿಪಂ ಸಿಇಒ ಅವರು ಅಬ್ಬಿಗೇರಿ, ಚಿಕ್ಕಮಣ್ಣೂರ ಸೇರಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿ ಗ್ರಾಪಂ ವಿಸ್ತರಣಾಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಲಾಕ್​ಡೌನ್ ನಿಯಮಗಳನ್ನು ಪಾಲಿಸುವಂತೆ ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts