More

    ಅಧಿಕಾರಿಗಳ ಕಾರ್ಯವೈಖರಿಗೆ ಆಕ್ರೋಶ

    ಶಿರಹಟ್ಟಿ: ಎಸ್​ಸಿಪಿ ಮತ್ತು ಟಿಎಸ್​ಪಿ ಕಾರ್ಯಕ್ರಮ ಅನುಷ್ಠಾನಕ್ಕೆ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಮಾರ್ಚ್ ಅಂತ್ಯಕ್ಕೆ ಬಳಕೆಯಾಗಬೇಕು. ಯಾವುದೇ ಕಾರಣಕ್ಕೂ ಲ್ಯಾಪ್ಸ್ ಆಗದಂತೆ ನೋಡಿಕೊಳ್ಳಿ ಎಂದು ತಾಪಂ ಇಒ ಡಾ. ಎಚ್.ಎಚ್. ಓಲೇಕಾರ ಅಧಿಕಾರಿಗಳಿಗೆ ಸೂಚಿಸಿದರು.

    ತಾಪಂ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

    ಎಇಇ ಎಂ.ಎಸ್. ದಿವಟರ್ ಅವರು ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆ ಪ್ರಗತಿ ಕುರಿತು ಮಾಹಿತಿ ನೀಡಿ, 2017-18ರಿಂದ ಇಲ್ಲಿಯವರೆಗೆ ಎಸ್​ಇಪಿ ಯೋಜನೆಯಡಿ 674 ಲಕ್ಷ ರೂ. ಮತ್ತು ಟಿಎಸ್​ಪಿ ಯೋಜನೆಯಡಿ 618 ಲಕ್ಷ ರೂ. ಬಂದಿದ್ದು ತಾಲೂಕಿನ ವಿವಿಧೆಡೆಯ ರಸ್ತೆ, ಚರಂಡಿ ಕಾಮಗಾರಿ ಕೈಗೊಳ್ಳಲಾಗಿದ್ದು ಮುಕ್ತಾಯದ ಹಂತದಲ್ಲಿವೆ ಎಂದರು. ಮಧ್ಯಪ್ರವೇಶಿಸಿದ ಜಿಪಂ. ಸದಸ್ಯೆ ದೇವಕ್ಕ ಲಮಾಣಿ, ತಾಪಂ. ಉಪಾಧ್ಯಕ್ಷೆ ಹುಸೇನಬಿ ಅತ್ತಿಗೇರಿ, ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆದರೂ ನಮ್ಮ ಗಮನಕ್ಕೆ ತರುವುದಿಲ್ಲ. ಸಭೆಗೆ ಬಂದು ವರದಿ ಒಪ್ಪಿಸಿದರೆ ಏನು ಪ್ರಯೋಜನ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

    ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಿ: ಜಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ವಿಕಾಸ ನಾಯಕ, ಎಸ್​ಇಪಿ, ಟಿಎಸ್​ಪಿ ಯೋಜನೆ ಅಡಿ ಆದಿ ಜಾಂಬವ, ತಾಂಡಾ ನಿಗಮ, ಬೋವಿ ನಿಗಮ ಇತ್ಯಾದಿಗಳಿಗೆ ಬಂದ ಹಣ ಮತ್ತು ಖಚಿನ ಬಗ್ಗೆ ಮಾಹಿತಿ ನೀಡಿದರು. ತಾಪಂ. ಇಒ.ಮಾತನಾಡಿ, ‘ಅಜ್ಞಾತ ಸ್ಥಳದಲ್ಲಿ ಕುಳಿತು ಮಾಹಿತಿ ಸಿದ್ಧಪಡಿಸಿ ಸಭೆಗೆ ಬಂದು ಗಿಳಿಪಾಠ ಒಪ್ಪಿಸುವುದಕ್ಕಿಂತ, ವಾರದಲ್ಲಿ ಎರಡು ದಿನ ತಾಲೂಕು ಕೇಂದ್ರಕ್ಕೆ ಆಗಮಿಸಿ ಗ್ರಾಪಂ. ಮಟ್ಟದಲ್ಲಿ ನಿಗಮದ ಯೋಜನೆ ಮತ್ತು ಕಾರ್ಯಕ್ರಮಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡು ಜನರಿಗೆ ಮಾಹಿತಿ ನೀಡಿ’ ಎಂದರು.

    ಲೇಟ್ ಲತೀಫ್ ಸಿಡಿಪಿಒ: ಸಿಡಿಪಿಒ ಮೃತ್ಯುಂಜಯ ಅವರು ಸಭೆಗೆ ತಡವಾಗಿ ಆಗಮಿಸಿದಾಗ ಅಸಮಾಧಾನಗೊಂಡ ಸಮಾಜ ಕಲ್ಯಾಣ ಅಧಿಕಾರಿ ಎಸ್.ಬಿ. ಹರ್ತಿ ಅವರನ್ನು ವೇದಿಕೆ ಬಳಿ ಕರೆದು, ಸಭೆ ಆರಂಭವಾಗಿ ಗಂಟೆಯಾದ ಮೇಲೆ ಬಂದಿದ್ದು ನಿಮಗೆ ಶೋಭೆಯೇ? ಫೋನ್ ಮಾಡಿ ಸಭೆಗೆ ಬನ್ನಿ ಎಂದು ಹೇಳಬೇಕೆನ್ರಿ ಎಂದರು. ಮಧ್ಯ ಪ್ರವೇಶಿಸಿದ ತಾಪಂ ಇಒ, ಸಭೆಗೆ ಗೈರಾಗುವ, ಉಸಾಸೀನ ಧೋರಣೆ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒ ಅವರಿಗೆ ವರದಿ ಕಳಿಸಲಾಗಿದೆ ಎಂದರು.

    ಕೃಷಿ, ತೋಟಗಾರಿಕೆ, ಭೂಸೇನಾ ನಿಗಮ, ಜಿಪಂ ಕುಡಿಯುವ ನೀರು ಸರಬರಾಜು, ಅರಣ್ಯ, ಹಿಂದುಳಿದ ಕಲ್ಯಾಣ ಇಲಾಖೆಗಳ ಪ್ರಗತಿ ಕುರಿತು ಚರ್ಚೆ ನಡೆಯಿತು. ತಾಪಂ. ಅಧ್ಯಕ್ಷೆ ಗಿರಿಜವ್ವ ಲಮಾಣಿ, ಪವಿತ್ರಾ ಶಂಕಿನದಾಸರ ಇತರರಿ ಇದ್ದರು.

    ಜಿಪಂ ಸದಸ್ಯೆಗೆ ತಾವ್ಯಾರು ಎಂದ ಅಧಿಕಾರಿ: ಪಿಡಬ್ಲ್ಯುಡಿ ಇಲಾಖೆಯ ಜೆಇ ಆರ್.ಕೆ. ಸ್ವಾಮಿ ಅವರು ಇಲಾಖೆಯ ಪ್ರಗತಿ ಕುರಿತು ಮಾಹಿತಿ ನೀಡುವಾಗ ಸದಸ್ಯರ ಟೀಕೆಗೆ ಗುರಿಯಾದರು. ಜಿಪಂ ಸದಸ್ಯೆ ದೇವಕ್ಕ ಲಮಾಣಿ, ‘ನನ್ನ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಲ್ಲಿ ನಡೆಸುವ ಕಾಮಗಾರಿಯ ಭೂಮಿಪೂಜೆ ವೇಳೆ ನಮ್ಮನ್ನೇಕೆ ಕರೆಯುವುದಿಲ್ಲ. ನೀವು ಮಾಡಿದ್ದು ಸರಿಯೇ?’ ಎಂದು ಪ್ರಶ್ನಿಸಿದರು. ಆಗ ಜೆಇ ಅವರು ‘ತಾವ್ಯಾರು ಅನ್ನೋದು ನನಗೆ ಗೊತ್ತಿಲ್ಲ’ ಎಂದರು. ಇದರಿಂದ ಸಿಡಿಮಿಡಿಗೊಂಡ ತಾಪಂ ಇಒ ಡಾ. ಓಲೇಕಾರ, ಅವರು ಮಾಗಡಿ ಕ್ಷೇತ್ರದ ಜಿಪಂ ಸದಸ್ಯರು ಹೀಗಾಗಿ ಅವರಿಗೆ ಕೇಳುವ ಹಕ್ಕಿದೆ. ಈವರೆಗೂ ಅವರ್ಯಾರು ಅನ್ನೋದು ನಿಮ್ಮ ಗಮನಕ್ಕೆ ಬಂದಿಲ್ಲ ಅಂದರೆ ಸೋಜಿಗದ ಸಂಗತಿ. ಇನ್ನು ಮೇಲೆ ಇಲಾಖೆ ವತಿಯಿಂದ ಕೈಗೊಳ್ಳುವ ಕಾಮಗಾರಿ ವೇಳೆ ಆಯಾ ಕ್ಷೇತ್ರದ ಜಿಪಂ. ತಾಪಂ. ಸದಸ್ಯರ ಗಮನಕ್ಕೆ ತಂದು ಪೂಜೆಗೆ ಅವರಿಗೂ ಆಹ್ವಾನಿಸಿ ಎಂದು ತಾಕೀತು ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts