More

    ಅದಮಾರು ಪರ್ಯಾಯದಲ್ಲಿ ಹೊಸತನ

    ಉಡುಪಿ: ಅದಮಾರು ಮಠದ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹಾಗೂ ಪಲಿಮಾರು ಕಿರಿಯ ಮಠಾಧೀಶ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಬುಧವಾರ ಕೃಷ್ಣ ಮಠದ ರಾಜಾಂಗಣದಲ್ಲಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಅದಮಾರು ಪರ್ಯಾಯ ಪ್ಲಾಸ್ಟಿಕ್ ಮುಕ್ತವಾಗಿರಲಿದೆ. ಇದಕ್ಕೆ ಈಗ ಬಿಡುಗಡೆಗೊಂಡಿರುವ ಆಮಂತ್ರಣ ಪತ್ರಿಕೆಯೇ ಸಾಕ್ಷಿಯಾಗಿದೆ. ಇಡೀ ಪರ್ಯಾಯವೇ ಹೊಸತನದಿಂದ ಕೂಡಿರಲಿದೆ ಎಂದರು. ಕೃಷ್ಣ ಸೇವಾ ಬಳಗದ ಗೌರವಾಧ್ಯಕ್ಷ ಹಾಗೂ ಶಾಸಕ ಕೆ.ರಘುಪತಿ ಭಟ್, ಯು.ಕೆ.ರಾಘವೇಂದ್ರ ರಾವ್, ಮಠದ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ, ಸೇವಾ ಬಳಗದ ದಿನೇಶ್ ಪುತ್ರನ್, ಸಂತೋಷ್ ಕುಮಾರ್ ಉದ್ಯಾವರ, ವೈ.ಎನ್.ರಾಮಚಂದ್ರ ರಾವ್, ಪ್ರದೀಪ್ ರಾವ್, ಗೋವಿಂದರಾಜ್, ಹಿರಿಯ ವೈದ್ಯ ಡಾ.ಭಾಸ್ಕರಾನಂದ ಕುಮಾರ್ ಉಪಸ್ಥಿತರಿದ್ದರು.

    18ರಂದು ಪರ್ಯಾಯ ಆರಂಭ: ಅದಮಾರು ಮಠದ ಪರ್ಯಾಯ ಮಹೋತ್ಸವ ಜ.18ರಂದು ನಡೆಯಲಿದೆ. ಬೆಳಗ್ಗೆ 1.20ಕ್ಕೆ ಕಾಪು ದಂಡತೀರ್ಥದಲ್ಲಿ ಪರ್ಯಾಯ ಶ್ರೀಗಳಿಂದ ಪವಿತ್ರ ಸ್ನಾನ, 1.50ಕ್ಕೆ ಜೋಡುಕಟ್ಟೆ ಮಂಟಪದಲ್ಲಿ ಪಟ್ಟದ ದೇವರ ಪೂಜೆ, ಪರ್ಯಾಯ ಮೆರವಣಿಗೆ ಆರಂಭ, 4.50ಕ್ಕೆ ಕನಕನಕಿಂಡಿಯಲ್ಲಿ ಶ್ರೀಕೃಷ್ಣ ದೇವರ ದರ್ಶನ, ಚಂದ್ರಮೌಳೀಶ್ವರ, ಅನಂತೇಶ್ವರ ದೇವರ ದರ್ಶನ, 5.30ಕ್ಕೆ ಕೃಷ್ಣಮಠ ಪ್ರವೇಶ, 5.57ಕ್ಕೆ ಅಕ್ಷಯಪಾತ್ರೆ ಸ್ವೀಕಾರ ಮತ್ತು ಸರ್ವಜ್ಞಪೀಠಾರೋಹಣ, ಬೆಳಗ್ಗೆ 10ಕ್ಕೆ ಮಹಾಪೂಜೆ, 10.30ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ.

    ಮಧ್ಯಾಹ್ನ ದರ್ಬಾರ್: ಈ ಬಾರಿ ವಿಶೇಷವಾಗಿ ಮಧ್ಯಾಹ್ನ 2.30ಕ್ಕೆ ರಾಜಾಂಗಣದ ನರಸಿಂಹ ತೀರ್ಥ ವೇದಿಕೆಯಲ್ಲಿ ಪರ್ಯಾಯ ದರ್ಬಾರ್ ಆರಂಭವಾಗಲಿದೆ. ಸಾಯಂಕಾಲ 7.5ಕ್ಕೆ ಅಷ್ಟಮಠಗಳ ಯತಿಗಳ ಉಪಸ್ಥಿತಿ ಹಾಗೂ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಪರ್ಯಾಯ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ, 7.30ಕ್ಕೆ ಪರ್ಯಾಯದ ಪ್ರಥಮ ರಥೋತ್ಸವ ನಡೆಯಲಿದೆ.

    ಪಲಿಮಾರು ಶ್ರೀಗಳಿಗೆ ಅಭಿನಂದನೆ: ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ ಜ.17ರಂದು ರಾತ್ರಿ 7ಕ್ಕೆ ಕೃಷ್ಣ ಪೂಜಾ ಪರ್ಯಾಯವನ್ನು ಪೂರೈಸುವ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ನಡೆಯಲಿದೆ. ಅದಮಾರು ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಪಲಿಮಾರು ಮಠದ ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಭಾಗವಹಿಸಲಿದ್ದಾರೆ. ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲ ಸತ್ಯನಾರಾಯಣ ಆಚಾರ್ಯ ಅಭಿನಂದನಾ ಭಾಷಣ ಮಾಡುವರು.

    ನಾಳೆ ಅದಮಾರು ಶ್ರೀಗಳ ಪುರಪ್ರವೇಶ ಮಂಗಳೂರಿಗೆ
    ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹಾಗೂ ಶಿಷ್ಯ ಈಶಪ್ರಿಯ ತೀರ್ಥ ಸ್ವಾಮೀಜಿಯವರು ಜ.3ರಂದು ಮಂಗಳೂರು ಪುರಪ್ರವೇಶ ಮಾಡಲಿದ್ದು, ಈ ವೇಳೆ ಪೌರ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಯಂಕಾಲ 6 ಗಂಟೆಗೆ ಶರವು ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಆಗಮಿಸಲಿದ್ದಾರೆ. ಕೆ.ಎಸ್.ರಾವ್, ಪಿಎಂ ರಾವ್ ರಸ್ತೆ ಮೂಲಕ ಹೋಟೆಲ್ ಶ್ರೀನಿವಾಸ ಎದುರಿನ ಶ್ರೀನಿವಾಸ ವಿಶ್ವವಿದ್ಯಾಲಯ ಕನ್ವೆನ್ಶನ್ ಹಾಲ್‌ವರೆಗೆ ಭವ್ಯ ಮೆರವಣಿಗೆ ನಡೆಯಲಿದೆ. ಶರವು ಮಹಾಗಣಪತಿ ದೇವಸ್ಥಾನದ ಶಿಲೆಶಿಲೆ ಮೊಕ್ತೇಸರರಾದ ರಾಘವೇಂದ್ರ ಶಾಸ್ತ್ರಿ ಮೆರವಣಿಗೆ ಉದ್ಘಾಟಿಸಲಿದ್ದಾರೆ. ಬಳಿಕ ಸಭಾಭವನಲ್ಲಿ ಪೌರ ಸನ್ಮಾನ ಆಯೋಜಿಸಲಾಗಿದ್ದು, ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ರಾಘವೇಂದ್ರ ರಾವ್ ಎ. ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts