More

    ಅಥ್ಲೆಟಿಕ್ಸ್ ಸಾಧಕ ಲೆಫ್ಟಿನೆಂಟ್ ಟಿ.ಎಸ್.ರವಿ

    ಸೋಮವಾರಪೇಟೆ: ಸಾಧಿಸುವ ಛಲ, ಕಠಿಣ ಶ್ರಮ, ಅಚಲ ನಿರ್ಧಾರ, ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆದರೆ ಸಾಧನೆಯ ಮೆಟ್ಟಿಲೇರಬಹುದು ಎಂಬುದಕ್ಕೆ ಗ್ರಾಮೀಣ ಅಥ್ಲೆಟಿಕ್ಸ್ ಪ್ರತಿಭೆ ಲೆಫ್ಟಿನೆಂಟ್ ಟಿ.ಎಸ್.ರವಿ ಸಾಕ್ಷಿಯಾಗಿದ್ದಾರೆ.

    ಬಡತನದಲ್ಲೇ ಬೆಳೆದು ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಕಲಿತ ರವಿ, ಕಠಿಣ ಶ್ರಮದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕಗಳನ್ನು ಪಡೆಯುವ ತವಕದಲ್ಲಿದ್ದಾರೆ.

    ಮೈಸೂರು ವಿಶ್ವವಿದ್ಯಾಲಯದಲ್ಲಿ ಅಥ್ಲೆಟಿಕ್ಸ್ ಕೋಚ್ ಆಗಿರುವ ಅವರು, ಊರಿನಲ್ಲಿ ತನ್ನ ತಾಯಿಗೂ ಅಥ್ಲೆಟಿಕ್ ತರಬೇತಿ ನೀಡಿ, ಮುಂದಿನ ನವೆಂಬರ್‌ನಲ್ಲಿ ಜಪಾನ್‌ನ ಟೊಕಿಯೋ ಹಾಗೂ ಫಿಲಿಪೈನ್ಸ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಹಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

    ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು ಶನಿವಾರಸಂತೆ ಸಮೀಪದ ತಳೂರು ಗ್ರಾಮದ ಕೃಷಿಕರಾದ ಸುರೇಶ್ ಮತ್ತು ಕಮಲಮ್ಮ ದಂಪತಿ ಪುತ್ರರಾದ ಲೆಪ್ಟಿನೆಂಟ್ ಟಿ.ಎಸ್. ರವಿ ಮಣಗಲಿ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಕುಶಾಲನಗರದಲ್ಲಿ ಬಿಸಿಎಂ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಮುಗಿಸಿದ್ದಾರೆ. ಮೈಸೂರಿನಲ್ಲಿ ಬಿಕಾಂ, ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿಪಿಎಡ್, ಎಂಪಿಎಡ್ ಮುಗಿಸಿ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಡಿಪ್ಲೊಮಾ ಇನ್ ಅಥ್ಲೆಟಿಕ್ ಕೋಚಿಂಗ್ ತರಬೇತಿ ಪಡೆದಿದ್ದಾರೆ.

    2016-18ರ ತನಕ ವಿಶ್ವವಿದ್ಯಾಲಯದಲ್ಲಿ ಅಥ್ಲೆಟಿಕ್ ತರಬೇತುದಾರರಾಗಿ ಅನೇಕ ಪ್ರತಿಭೆಗಳನ್ನು ಬೆಳೆಸಿದ್ದಾರೆ. ಮಕ್ಕಳಿಗೆ ಉಚಿತ ತರಬೇತಿ ಶಿಬಿರಗಳನ್ನು ಏರ್ಪಡಿಸಿ, ಕ್ರೀಡಾ ಕೋಟಾದಲ್ಲಿ 16 ಜನ ಸರ್ಕಾರಿ ಹುದ್ದೆಗಳನ್ನು ಪಡೆಯಲು ಕಾರಣಕರ್ತರಾಗಿದೆ.

    ಮೈಸೂರು ವಿಶ್ವವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕರಾಗಿದ್ದಾರೆ. ಕರ್ನಾಟಕ 13ನೇ ಬೆಟಾಲಿಯನ್‌ನ ಎನ್.ಸಿ.ಸಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಎನ್.ಸಿ.ಸಿಯ ಗೌರವ ಲೆಪ್ಟಿನೆಂಟ್ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

    ಕ್ರೀಡಾಸಾಧನೆ: 30 ವರ್ಷ ಮೇಲ್ಪಟ್ಟ ರಾಷ್ಟ್ರೀಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ 8 ಚಿನ್ನದ ಪದಕಗಳನ್ನು ಪಡೆದು, ಮೈಸೂರು ವಿಶ್ವವಿದ್ಯಾಲಯದಲ್ಲಿ ದಾಖಲೆ ಸೃಷ್ಟಿಸಿದ್ದಾರೆ. 80 ಹೆಚ್ಚು ಪದಕಗಳು, 122 ಸರ್ಟಿಫಿಕೇಟ್ ಗಳಿಸಿದ್ದಾರೆ.
    2009 ರಿಂದ 2014 ರವರೆಗೆ ವಿಶ್ವವಿದ್ಯಾಲಯ ಮಟ್ಟದ ಅಂತರಕಾಲೇಜು ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 10 ಚಿನ್ನದ ಪದಕ, 2014ರಲ್ಲಿ ಬೆಂಗಳೂರಿನಲ್ಲಿ ನಡೆದ ಹಿರಿಯರ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕ, 2010ರ ಎನ್‌ಸಿಸಿ ಸ್ಪೋರ್ಟ್ಸ್ ಮೀಟ್‌ನಲ್ಲಿ ಒಂದು ಚಿನ್ನದ ಪದಕ, 2008ರಿಂದ 14ರ ತನಕ ದಸರಾ ಮೀಟ್‌ನಲ್ಲಿ 2 ಚಿನ್ನ, 1ಬೆಳ್ಳಿ, 2020ರಲ್ಲಿ ಗುಜರಾತ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಮೂರು ಚಿನ್ನ, 2022ರಲ್ಲಿ ಚೆನೈನಲ್ಲಿ ನಡೆದ ಹಿರಿಯರ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

    ಹೆತ್ತಮ್ಮನಿಗೆ ತರಬೇತಿ: ಮಗನ ಕ್ರೀಡಾಸಾಧನೆಗೆ ತಾಯಿ ಕಮಲಮ್ಮನ ಸಹಕಾರ ಅಪಾರವಾಗಿದ್ದು, ಕಾಫಿ ತೋಟಗಳಲ್ಲಿ ಕೆಲಸ ಮಾಡಿ ದೈಹಿಕವಾಗಿ ಅರೋಗ್ಯವಾಗಿದ್ದರು. ಇದನ್ನೇ ಮನಗಂಡ ರವಿ ಅವರು ತಾಯಿಗೆ ಅಥ್ಲೆಟಿಕ್ ತರಬೇತಿ ನೀಡಲು ಪ್ರಾರಂಭಿಸಿದರು. ಬೆಳಗ್ಗೆ ರಸ್ತೆಯಲ್ಲಿ ಓಡಲು ಪ್ರೋತ್ಸಾಹ ನೀಡಿದರು. 2018ರಲ್ಲಿ ಬೆಂಗಳೂರಿನಲ್ಲಿ ನಡೆದ ಹಿರಿಯರ ಕ್ರೀಡಾಕೂಟದಲ್ಲಿ ಕಮಲಮ್ಮ 400 ಮೀ. ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಗಳಿಸಿಯೇ ಬಿಟ್ಟರು. 2019 ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆದರು. 2020ರ ಫೆಬ್ರವರಿ 4ರಂದು ಗುಜರಾತ್‌ನ ವಡೋದರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಕಮಲಮ್ಮ ಒಂದೂವರೆ ಕಿ.ಮೀ. ದೂರವನ್ನು 7 ನಿಮಿಷ, 30 ಸೆಕೆಂಡ್‌ಗಳಲ್ಲಿ ಗುರಿಮುಟ್ಟಿ ಚಿನ್ನದ ಪದಕವನ್ನು ಪಡೆದರು.

    ಅಮ್ಮ-ಮಗ ಜಪಾನ್‌ಗೆ: ಮುಂದಿನ ನವೆಂಬರ್‌ನಲ್ಲಿ ಟೊಕಿಯೋ ಹಾಗೂ ಫಿಲಿಪೈನ್ಸ್‌ನಲ್ಲಿ ನಡೆಯುವ ಹಿರಿಯರ ಅಥ್ಲೆಟಿಕ್ ಕೀಡಾಕೂಟದಲ್ಲಿ ಅಮ್ಮ, ಮಗ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. 55 ವರ್ಷ ಪ್ರಾಯದ ಕಮಲಮ್ಮ 800ಮೀ, 1500ಮೀ ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ. ರವಿ ಅವರು 30 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಲಾಂಗ್‌ಜಂಪ್, ಟ್ರಿಪಲ್ ಜಂಪ್, 4*100 ರಿಲೇಯಲ್ಲಿ ಭಾಗವಹಿಸಿಲಿದ್ದಾರೆ.

    ಜಪಾನ್‌ನಲ್ಲಿ ನಡೆಯುವ ಹಿರಿಯರ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವ ಛಲ ನಮ್ಮದು. ಅಮ್ಮನಿಗೆ ತರಬೇತಿ ನೀಡಲಾಗುತ್ತಿದೆ. ಒಂದೂವರೆ ಕಿ.ಮೀ. ಅನ್ನು 7 ನಿಮಿಷ 20 ಸೆಕೆಂಡ್‌ನಲ್ಲಿ ಕ್ರಮಿಸಬೇಕಾಗಿದೆ. ತರಬೇತಿ ನಂತರ 7 ನಿಮಿಷ 10 ಸೆಕೆಂಡ್‌ಗಳಲ್ಲಿ ಓಡುತ್ತಿದ್ದಾರೆ. ಪದಕ ಪಡೆಯುವುದಷ್ಟೆ ನಮ್ಮ ಗುರಿ. ಕೊಡಗಿನವರಿಗೆ ಪ್ರಕೃತಿ ಅರೋಗ್ಯವನ್ನು ನೀಡಿದೆ. ಮನೆಯಲ್ಲೇ ಅಮ್ಮನಿಗೆ ಹಾಲು, ಮೊಟ್ಟೆ, ತುಪ್ಪ, ಗೆಣಸು, ರಾಗಿ ಮುದ್ದೆ ಸಿಗುತ್ತದೆ. ಪ್ರತಿಯೊಬ್ಬರಿಗೂ ಸಾಧನೆ ಮಾಡುವ ಛಲ ಇರಬೇಕು.
    ಲೆಪ್ಟಿನೆಂಟ್ ಟಿ.ಎಸ್.ರವಿ
    ಅಥ್ಲೆಟಿಕ್ ಕೋಚ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts