More

    ಅಥಣಿಯಲ್ಲಿ ಪಶು ವೈದ್ಯರ ಕೊರತೆ

    ಮೋಹನ ಪಾಟಣಕರ ಅಥಣಿ ಗ್ರಾಮೀಣ, ಬೆಳಗಾವಿ: ಅಥಣಿ ತಾಲೂಕಿನಲ್ಲಿ ಪಶುಗಳಿಗೆ ಅನಾರೋಗ್ಯ ಉಂಟಾದರೆ ಉಪಚರಿಸಲು ವೈದ್ಯರಿಲ್ಲದ ಪರಿಸ್ಥಿತಿ ಉಂಟಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

    ತಾಲೂಕು ವ್ಯಾಪ್ತಿಯಲ್ಲಿ ಬರುವ 69 ಹಳ್ಳಿಗಳಲ್ಲಿ ಒಟ್ಟು 24 ಪಶು ಆಸ್ಪತ್ರೆಗಳಿದ್ದು, ಅದರಲ್ಲಿ ಕೇವಲ 12 ಜನ ಪಶು ವೈದ್ಯರು ಹಾಗೂ 11 ಜನ ಹಿರಿಯ, ಕಿರಿಯ ಪಶುವೈದ್ಯಕೀಯ ಪರೀಕ್ಷಕರು ಮಾತ್ರ ಸೇವೆ ಸಲ್ಲಿಸಲ್ಲಿಸುತ್ತಿರುವುದರಿಂದ ಜಾನುವಾ ರುಗಳಿಗೆ ಅನಾರೋಗ್ಯ ಆದರೆ ವೈದ್ಯರನ್ನು ಹುಡುಕುವ ಸ್ಥಿತಿ ತಾಲೂಕಿನಲ್ಲಿದೆ.

    ತಾಲೂಕಿನಲ್ಲಿ ಅಂದಾಜು 1.58 ಲಕ್ಷ ಆಕಳು, ಎಮ್ಮೆ ಹಾಗೂ 1.33 ಲಕ್ಷ ಕುರಿ ಮತ್ತು ಮೇಕೆಗಳಿವೆ. ಇದರಲ್ಲಿ ಅತಿ ಹೆಚ್ಚು ಜಾನುವಾರುಗಳಿರುವ ಕೊಕಟನೂರ, ಕಟಗೇರಿ, ಸವದಿ, ಸತ್ತಿ, ಸಂಬರಗಿ ಹಾಗೂ ಅರಟಾಳ ಗ್ರಾಮದಲ್ಲಿ ಪಶು ಆಸ್ಪತ್ರೆಯಿದೆ. ಆದರೆ, ವೈದ್ಯರಿಲ್ಲ. ಇದರಿಂದ ಜಾನುವಾರು ಚಿಕಿತ್ಸೆಗೆ ದಿನಂಪ್ರತಿ ಆಸ್ಪತ್ರೆಗೆ ಓಡಾಡಬೇಕಿದೆ.
    ಎರಡು ತಿಂಗಳ ಹಿಂದೆ ತಾಲೂಕಿನಲ್ಲಿದ್ದ ಪರೀಕ್ಷಕರು ವರ್ಗಾವಣೆಗೊಂಡಿದ್ದಾರೆ. ಇದರಿಂದ ತಾಲೂಕಿನಲ್ಲಿ 22 ಪಶು ವೈದ್ಯರ ಹಾಗೂ ಪರೀಕ್ಷಕರ ಕೊರತೆಯಿದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದೆ ಜಾನುವಾರುಗಳ ಮೃತಪಟ್ಟಿವೆ. ಹೆಚ್ಚಿನ ಹಾಲು ನೀಡುವ ಎಮ್ಮೆ ಹಾಗೂ ಆಕಳು ಅನಾರೋಗ್ಯಕ್ಕೆ ತುತ್ತಾಗುವ ಪ್ರಾಣಿಗಳಿಗೆ ಸರಿಯಾಗಿ ಚಿಕಿತ್ಸೆ ದೊರೆಯದ ಪರಿಣಾಮ ಹಾಲು ಇಳುವರಿ ಕಡಿಮೆಯಾಗಿ ರೈತರು ಕಾಯಂ ಪಶು ವೈದ್ಯರನ್ನು ನೇಮಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

    ಜತೆಗೆ ಪಶು ಆಂಬ್ಯುಲೆನ್ಸ್ ಕೂಡ ಅಥಣಿಗೆ ಬಂದಿದೆ. ಆದರೆ, ಅದಕ್ಕೆ ಚಾಲಕನಿಲ್ಲದೆ ಅದು ಸಹ ಉಪಯೋಗಕ್ಕೆ ಬರುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ವೈದ್ಯರನ್ನು ನೇಮಿಸುವಂತೆ ಹಾಲು ಉತ್ಪಾದಕರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts