More

    ಅತಿವೃಷ್ಟಿ ಗಾಯದ ಮೇಲೆ ಲಾಕ್ ಡೌನ್ ಬರೆ

    ಶಶಿಧರ ಕುಲಕರ್ಣಿ ಮುಂಡಗೋಡ

    ತಾಲೂಕಿನಲ್ಲಿ ಕಳೆದ ವರ್ಷಕ್ಕೆ ಮತ್ತು ಪ್ರಸಕ್ತ ಸಾಲಿನ ಮಾವಿನ ಇಳುವರಿಗೆ ಅಜಗಜಾಂತರ ವ್ಯತ್ಯಾಸವಿದೆ. ಈ ಬಾರಿ ಮಾವು ಇಳುವರಿ ಶೇ. 15ರಷ್ಟು ಮಾತ್ರ ಇದೆ. ಪ್ರತಿ ವರ್ಷ ಇಷ್ಟು ಹೊತ್ತಿಗಾಗಲೇ ಮಾರುಕಟ್ಟೆಗೆ ಮಾವಿನ ಹಣ್ಣು ಬರುತ್ತಿತ್ತು. ಆದರೆ, ಮಾವು ಇನ್ನೂ ಕಟಾವಿಗೆ ಕೂಡ ಬಂದಿಲ್ಲ.

    ಈ ಬಾರಿ ಆದ ಅತಿವೃಷ್ಟಿಯಿಂದಾಗಿ ಮಾವಿನ ಗಿಡಗಳಲ್ಲಿ ಹೂವು ಕಡಿಮೆ ಬಿಟ್ಟವು. ಇದರಲ್ಲಿ ಶೇ. 25ರಷ್ಟು ಹೂವು ಜಿಗಿ ಹುಳು ಮತ್ತು ಬೂದು ರೋಗಕ್ಕೆ ತುತ್ತಾಗಿ ಮಾವು ಇಳುವರಿ ಕಡಿಮೆ ಆಗಲು ಪ್ರತಿಕೂಲ ವಾತಾವರಣ ಕೂಡ ಕಾರಣವಾಯಿತು. ತಾಲೂಕಿನಲ್ಲಿ ರೈತರು ಶೇ. 90ರಷ್ಟು ಆಪೂಸ್ ತಳಿಯ ಮಾವು ಬೆಳೆಯುತ್ತಾರೆ. ಇನ್ನುಳಿದಂತೆ ಸಾಮಾನ್ಯವಾಗಿ ರಸಪೂರಿ, ತೋತಾಪೂರಿ, ನೀಲಂ, ಸಿಂಧೂಲಾ, ಬಿನಶಾ, ಮಲಗೋವಾ ತಳಿಯ ಮಾವು ಬೆಳೆಯುತ್ತಾರೆ.

    ಈಗ ಬಂದ ಇಳುವರಿಯ ಮಾವು ಮಾರಾಟ ಮಾಡಬೇಕೆಂದರೆ ಮತ್ತು ಒಳ್ಳೆಯ ದರ ಸಿಗಬೇಕೆಂದರೆ ದೊಡ್ಡ ಮಾರುಕಟ್ಟೆ ಮಹಾರಾಷ್ಟ್ರ ರಾಜ್ಯಕ್ಕೆ ಇಲ್ಲಿಂದ ಮಾವು ರಫ್ತು ಆಗಬೇಕು. ಆದರೆ, ಕರೊನಾದಿಂದ ಬಾಂಬೆ ಮಾರುಕಟ್ಟೆ ಸ್ತಬ್ಧವಾಗಿದೆ. ಅಲ್ಲದೆ, ಹೊರದೇಶಗಳಾದ ಯುರೋಪ್ ಮತ್ತು ಗಲ್ಪ್ ದೇಶಗಳಿಗೆ ಮಾವು ರಫ್ತಾಗುತ್ತಿತ್ತು. ಅಲ್ಲಿಯೂ ಲಾಕ್ ಡೌನ್ ಕಾರಣ ಮಾವು ರಫ್ತಾಗುವುದು ಬಂದ್ ಆಗಿದೆ. ಹೀಗಾಗಿ, ಅಲ್ಪ-ಸ್ವಲ್ಪ ಇಳುವರಿಯ ಮಾವು ಮಾರಾಟಕ್ಕೂ ತೊಂದರೆಯಾಗಿದೆ.

    ತಾಲೂಕಿನಲ್ಲಿ ಸುಮಾರು 885 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಈ ಬಾರಿ ಇಳುವರಿ ಮಾತ್ರ ಬಹಳ ಕಡಿಮೆ. ಅಂದರೆ, ಶೇ. 25-30ರಷ್ಟು ಮಾತ್ರ ಇದೆ. ತಡವಾಗಿ ಮಳೆಯಾಗಿದ್ದರಿಂದ ಗಿಡಗಳು ಚಿಗುರಿ ಹೂವು ಬಿಡುವುದು ತಡವಾಗಿದ್ದಲ್ಲದೆ, ಕಡಿಮೆ ಹೂವು ಬಿಟ್ಟಿತು. ಕಾಯಿ ಕೂಡ ಜಾಸ್ತಿ ಹಿಡಿಯಲಿಲ್ಲ. ಈಗಾಗಲೇ ಕೆಲ ರೈತರು ಸ್ಥಳೀಯವಾಗಿ ಮಾವು ಮಾರಾಟ ಮಾಡುತ್ತಿದ್ದಾರೆ. ಬೇರೆ ಜಿಲ್ಲೆಗೆ ಮಾವು ಮಾರಾಟ ಮಾಡಲು ರೈತರು ಪೊಲೀಸ್ ಇಲಾಖೆಯಿಂದ ಪಾಸ್ ಪಡೆಯಬಹುದು.

    | ಬಿ. ನಾಗಾರ್ಜುನಗೌಡ,

    ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಮುಂಡಗೋಡ

    ಜೀವ ಮುಖ್ಯ. ನಮ್ಮ ದೇಶದ ಹಳೆಯ ಸಂಸ್ಕೃತಿಯ ಪ್ರಕಾರ ಬೀಗರು-ಬಿಜ್ಜರ ಜೊತೆ ಮಾವಿನ ಫಲ ತಿಂದು ಬದುಕಬೇಕು. ಮಾವುಗಳನ್ನು ಆದಷ್ಟು ಹಳ್ಳಿಗಳಲ್ಲಿಯೇ ಅಥವಾ ಲಾಕ್​ಡೌನ್ ಸಡಿಲಗೊಂಡಾಗ ಬಿಕರಿ ಮಾಡಿ ಸಮಾಧಾನಪಡಬೇಕೇ ವಿನಃ ದೂರದ ಬೇರೆ ರಾಜ್ಯಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿಂದ ವಾಪಸ್ ಬರಲಾರದ ಸ್ಥಿತಿ ನಿರ್ಮಾಣ ಆಗುವುದು ಬೇಡ.

    | ರಮೇಶ ಜಿಗಳೇರ ಶಿಂಗನಳ್ಳಿ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts