More

    ಅತಿವೃಷ್ಟಿಯಿಂದ 159 ಕೋಟಿ ರೂ. ಹಾನಿ

    ಗದಗ: ಪ್ರಸಕ್ತ ವರ್ಷ ಮಳೆ ಮತ್ತು ಪ್ರವಾಹಕ್ಕೆ ತುತ್ತಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದ್ದರಿಂದ ಜಿಲ್ಲೆಯ ರೈತರು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಏಪ್ರಿಲ್​ನಿಂದ ಆಗಸ್ಟ್​ವರೆಗೆ ಮಳೆ ಮತ್ತು ಪ್ರವಾಹದಿಂದ ಜಿಲ್ಲೆಯಲ್ಲಿ ಒಟ್ಟು 63 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ನಾಶವಾಗಿದೆ. ಈ ರೀತಿ ಹಾಳಾದ ಬೆಳೆಯ ಒಟ್ಟು ಮೌಲ್ಯ 159 ಕೋಟಿ ರೂ. ಎಂದು ಕೃಷಿ ಇಲಾಖೆ ಅಂದಾಜಿಸಿದೆ.

    ಜಿಲ್ಲೆಯ ರೈತರು ಮುಂಗಾರಿನಲ್ಲಿ ಸಂಕಷ್ಟದಲ್ಲಿಯೇ ಬಿತ್ತನೆ ಕಾರ್ಯ ಮಾಡಿದ್ದರು. ಸಕಾಲಕ್ಕೆ ಉತ್ತಮ ಮಳೆ ಸಹ ಆಗಿದ್ದು, ಬೆಳೆಗಳು ಸಮೃದ್ಧವಾಗಿ ಬೆಳೆದಿದ್ದರಿಂದ ಉತ್ತಮ ಇಳುವರಿ ನಿರೀಕ್ಷಿಸಿದ್ದರು. ಆದರೆ, ಇನ್ನೇನು ಫಸಲು ಕೈಗೆ ಸಿಗಲಿದೆ ಎನ್ನುವ ಸಮಯಕ್ಕೆ ವರುಣ ರೈತರ ಕನಸನ್ನು ಭಗ್ನಗೊಳಿಸಿದ್ದಾನೆ.

    ಆರಂಭದಲ್ಲಿ ಬೆಣ್ಣೆ ಹಳ್ಳ ಹಾಗೂ ಮಲಪ್ರಭಾ ನದಿ ಉಕ್ಕಿ ಹರಿದು ನರಗುಂದ, ರೋಣ ತಾಲೂಕುಗಳಲ್ಲಿ ಅಪಾರ ಪ್ರಮಾಣದ ಬೆಳೆ ನಾಶವಾಯಿತು. ತದನಂತರ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿದಿದ್ದರಿಂದ ಹೆಸರು, ಶೇಂಗಾ, ಉಳ್ಳಾಗಡ್ಡಿ, ಗೋವಿನ ಜೋಳ ಸೇರಿ ಮುಂಗಾರು ಬೆಳೆಗಳು ಹಾಳಾದವು.

    ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾದ ತಾಲೂಕುಗಳ ಪಟ್ಟಿಗೆ ಮೊದಲ ಹಂತದಲ್ಲಿ ನರಗುಂದ, ಮುಂಡರಗಿ, ರೋಣ ಮತ್ತು ಶಿರಹಟ್ಟಿ ತಾಲೂಕುಗಳನ್ನು ಮಾತ್ರ ಸೇರಿಸಲಾಗಿತ್ತು. ಜಿಲ್ಲೆಯ ಎಲ್ಲ ತಾಲೂಕುಗಳನ್ನು ಅತಿವೃಷ್ಟಿ ಪಟ್ಟಿಗೆ ಸೇರಿಸಬೇಕು ಎಂದು ರೈತರು ಪ್ರತಿಭಟನೆ ನಡೆಸಿದ್ದರಿಂದ ಸರ್ಕಾರವು ಗದಗ, ಲಕ್ಷೆ್ಮೕಶ್ವರ ಮತ್ತು ಗಜೇಂದ್ರಗಡ ತಾಲೂಕುಗಳನ್ನು ಸಹ ಅತಿವೃಷ್ಟಿ ತಾಲೂಕುಗಳ ಪಟ್ಟಿಗೆ ಸೇರಿಸಿತು. ಇದರಿಂದ ಜಿಲ್ಲೆಯ ಎಲ್ಲ ಏಳೂ ತಾಲೂಕುಗಳು ಅತಿವೃಷ್ಟಿ ಪೀಡಿತ ಪ್ರದೇಶ ವ್ಯಾಪ್ತಿಗೆ ಸೇರಿದಂತಾಗಿದೆ

    ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಸುರಿದ ಮಳೆ ಮತ್ತು ಮಲಪ್ರಭಾ ನದಿ ಮತ್ತು ಬೆಣ್ಣೆಹಳ್ಳ ಪ್ರವಾಹದಿಂದ 16 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಶೇಂಗಾ, 7 ಸಾವಿರ ಹೆಕ್ಟೇರ್ ಉಳ್ಳಾಗಡ್ಡಿ, 9900 ಹೆಕ್ಟೇರ್ ಹತ್ತಿ ಮತ್ತು 19 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸರ್ವೆ ಕಾರ್ಯ ನಡೆದಿದ್ದು ಸದ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 63 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದ್ದು, 159 ಕೋಟಿ ರೂ. ನಷ್ಟವಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲು ಕೃಷಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

    ಕಳೆದ ವರ್ಷ ಮಳೆ ಮತ್ತು ಪ್ರವಾಹದಿಂದ ಬೆಳೆ ಕಳೆದುಕೊಳ್ಳಬೇಕಾಯಿತು. ಈ ವರ್ಷ ಮಳೆಯಿಂದ ಉಳ್ಳಾಗಡ್ಡಿ, ಮೆಕ್ಕೆಜೋಳ, ಶೇಂಗಾ ಸೇರಿ ಹಲವು ಬೆಳೆಗಳಿಗೆ ಹಾನಿಯಾಗಿದೆ. ಪ್ರತಿ ವರ್ಷ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡರೆ ರೈತರು ಬದುಕುವುದಾದರೂ ಹೇಗೆ? ಸಾಲದ ಸುಳಿಯಲ್ಲಿ ಸಿಲುಕಿರುವ ರೈತರ ನೆರವಿಗೆ ಸರ್ಕಾರ ಬರಬೇಕು. ಕೃಷಿ ಇಲಾಖೆ ಅಂದಾಜಿಸಿದ ಬೆಳೆ ಹಾನಿ ಮೊತ್ತವನ್ನು ಬಿಡುಗಡೆ ಮಾಡಬೇಕು.
    | ಪ್ರಭುಗೌಡ ಪಾಟೀಲ, ಹೊಳೆಆಲೂರ ರೈತ

    ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಸುರಿದ ಮಳೆ, ಮಲಪ್ರಭಾ ನದಿ ಮತ್ತು ಬೆಣ್ಣೆಹಳ್ಳ ಪ್ರವಾಹದಿಂದ ಉಂಟಾಗಿರುವ ಬೆಳೆ ಹಾನಿ ಕುರಿತು ವರದಿ ಸಿದ್ಧಪಡಿಸಲಾಗಿದ್ದು, ಶೀಘ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು.
    ರುದ್ರೇಶಪ್ಪ. ಟಿ.ಎಸ್., ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts