More

    ಅತಿದೊಡ್ಡ ಗ್ರಾಪಂ ಅಧಿಕಾರಕ್ಕಾಗಿ ಪೈಪೋಟಿ ಶುರು

    ಕಿರಣ ಹೂಗಾರ ಅಕ್ಕಿಆಲೂರ

    ಹಾವೇರಿ ಜಿಲ್ಲೆಯ ದೊಡ್ಡ ಗ್ರಾಮ ಪಂಚಾಯಿತಿಯಾದ ಅಕ್ಕಿಆಲೂರಿನಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಚುನಾವಣೆ ಘೊಷಣೆಗೆ ಮುನ್ನವೇ ಸಿದ್ಧತೆಯಲ್ಲಿ ತೊಡಗಿವೆ.

    ಚುನಾವಣೆ ಆಯೋಗವು ಗ್ರಾ.ಪಂ. ಚುನಾವಣೆಯ ಮೀಸಲಾತಿ ಪ್ರಕಟಿಸಿದೆ. ಹೀಗಾಗಿ, ಶೀಘ್ರದಲ್ಲೇ ಚುನಾವಣೆಗೆ ಮುಹೂರ್ತ ಕೂಡ ನಿಗದಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ಈಗಿನಿಂದಲೇ ತಯಾರಿ ನಡೆಸಿದ್ದಾರೆ.

    ಅಕ್ಕಿಆಲೂರ ಗ್ರಾಮ ಪಂಚಾಯಿತಿಯು 10 ವಾರ್ಡ್​ಗಳ 31 ಸದಸ್ಯರ ಬಲ ಹೊಂದಿದೆ. ಶಾಸಕ ಸಿ.ಎಂ ಉದಾಸಿ ಅವರ ತಂತ್ರಗಾರಿಕೆ ಪರಿಣಾಮವಾಗಿ ಕಳೆದ 15 ವರ್ಷಗಳಿಂದಲೂ ಇಲ್ಲಿ ಬಿಜೆಪಿ ಆಡಳಿತವೇ ಇದೆ. 2015ರಲ್ಲಿ ಜರುಗಿದ ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿಯು 18 ಸ್ಥಾನಗಳಲ್ಲಿ ಗೆದ್ದು, ಒಬ್ಬ ಪಕ್ಷೇತರ ಅಭ್ಯರ್ಥಿ ಬೆಂಬಲದೊಂದಿಗೆ ಅಧಿಕಾರ ಹಿಡಿಯಿತು. ಹಾನಗಲ್ಲ ತಾಲೂಕಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ಗಂಗಾಮತ ಸಮುದಾಯದ ಪ್ರದೀಪ ಶೇಷಗಿರಿ ಅವರನ್ನು 5 ವರ್ಷಗಳ ಅವಧಿಗೆ ಗ್ರಾಪಂ. ಅಧ್ಯಕ್ಷರನ್ನಾಗಿಸಿ ಜಾಣ್ಮೆಯ ಹೆಜ್ಜೆಯನ್ನು ಕೂಡ ಬಿಜೆಪಿ ಇಟ್ಟಿತು. 15 ವರ್ಷಗಳ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ತವಕದಲ್ಲಿರುವ ಬಿಜೆಪಿ ಈಗಿನಿಂದಲೇ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ.

    ಇತ್ತ ಕಾಂಗ್ರೆಸ್ ಕೂಡ ಚುನಾವಣೆ ಸಿದ್ಧತೆಯನ್ನು ಜೋರಾಗಿಯೇ ಆರಂಭಿಸಿದೆ. ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ನೇತೃತ್ವದಲ್ಲಿ ಜಿ.ಪಂ. ಸದಸ್ಯ ಟಾಕನಗೌಡ ಪಾಟೀಲ ಅವರು ಮೀಸಲಾತಿ ಅನ್ವಯ ಅಭ್ಯರ್ಥಿಗಳನ್ನು ಗೌಪ್ಯವಾಗಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಕಣಕ್ಕಿಳಿಸುವ ಅಭ್ಯರ್ಥಿಗಳನ್ನು ನೋಡಿಕೊಂಡು, ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ತಂತ್ರಗಾರಿಕೆ ಹೊಂದಿದ್ದಾರೆ ಎನ್ನಲಾಗಿದೆ.

    ಕೈನಲ್ಲಿ ಗುಂಪುಗಾರಿಕೆ: ಹಾನಗಲ್ಲ ವಿಧಾನಸಭೆ ಕ್ಷೇತ್ರದಲ್ಲಿ ಕಳೆದ ಬಾರಿ ಮಾಜಿ ಸಚಿವ ಮನೋಹರ ತಹಶೀಲ್ದಾರ್ ಬದಲು ಶ್ರೀನಿವಾಸ ಮಾನೆ ಅವರು ಕಾಂಗ್ರೆಸ್​ನಿಂದ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಸೋಲನುಭವಿಸಿದ್ದರು. ಮುಂದಿನ ವಿಧಾನಸಭೆ ಚುನಾವಣೆಗೆ ತಯಾರಿ ಎಂಬಂತೆ ಈಗ ಮಾನೆ ಅವರೇ ಗ್ರಾಪಂ ಮಟ್ಟದಲ್ಲಿ ಅಭ್ಯರ್ಥಿಗಳನ್ನು ನಿರ್ಧರಿಸಲು ಮುಂದಾಗಿದ್ದಾರೆ. ಹೀಗಾಗಿ, ಮನೋಹರ ತಹಶೀಲ್ದಾರ್ ಬೆಂಬಲಿಗರು ಈ ಚುನಾವಣೆಯಲ್ಲಿ ತಟಸ್ಥರಾಗುವ ಇಲ್ಲವೇ ಮಾನೆ ಆಯ್ಕೆ ಮಾಡುವ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡುವ ಸಾಧ್ಯತೆಗಳು ಗೋಚರಿಸುತ್ತಿವೆ.

    ಯುವಕರಿಗೆ ಆದ್ಯತೆ ನೀಡಲು ಪಟ್ಟು: ಇಲ್ಲಿನ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ನಾಯಕರು ಹಿರಿ ತಲೆಗಳಿಗೆ ಆದ್ಯತೆ ನೀಡಿಕೊಂಡು ಬಂದಿದ್ದಾರೆ. ಆದರೆ, ಈ ಬಾರಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಎಲ್ಲ ವಾರ್ಡ್​ಗಳಲ್ಲಿಯೂ ಯುವಕರಿಗೆ ಅವಕಾಶ ಕಲ್ಪಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಇದು ಪಕ್ಷದ ಹಿರಿಯರಿಗೆ ತಲೆನೋವಾಗಿ ಪರಿಣಮಿಸಿದೆ.

    ಜನಹಿತ ರಕ್ಷಣಾ ವೇದಿಕೆ: 2013ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಬಿ.ಕೆ. ಮೋಹನಕುಮಾರ ಅವರು ಈಗ ಜನಹಿತ ರಕ್ಷಣಾ ವೇದಿಕೆ ಹೆಸರಿನಲ್ಲಿ ಹಾನಗಲ್ಲ ತಾಲೂಕಿನಾದ್ಯಾಂತ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಜ್ಜಾಗಿದ್ದಾರೆ. ಈ ಕುರಿತು ಜನಹಿತ ರಕ್ಷಣಾ ವೇದಿಕೆ ಕಾರ್ಯದರ್ಶಿ ಸುಭಾಷ ಗಡ್ಡದ ಅವರು ಸಾಮಾಜಿಕ ಜಾಲತಾಣಗಳಲ್ಲಿ ಘೊಷಿಸಿದ್ದಾರೆ. ಇದು ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಬಂಡಾಯವಾಗಿ ಹೊರಬರುವ ಟಿಕೆಟ್ ಆಕಾಂಕ್ಷಿಗಳಿಗೆ ವೇದಿಕೆಯಾಗಲಿದೆ ಎನ್ನಲಾಗಿದೆ.

    ಶ್ರೀನಿವಾಸ ಮಾನೆ ಮತ್ತು ಜಿ.ಪಂ. ಸದಸ್ಯ ಟಾಕನಗೌಡ ಪಾಟೀಲ ನೇತೃತ್ವದಲ್ಲಿ ಗ್ರಾ.ಪಂ. ಚುನಾವಣೆ ಎದುರಿಸುತ್ತಿದ್ದೇವೆ. ಅಕ್ಕಿಆಲೂರ ಗ್ರಾ.ಪಂ.ನಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ನಿಶ್ಚಿತ. ಮೀಸಲಾತಿ ಬದಲಾವಣೆಯಾಗಿರುವುದರಿಂದ ಮತದಾರರ ಮನಸ್ಥಿತಿ ಆಧಾರವಾಗಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತಿದೆ.

    | ಇಂದೂಧರ ಸಾಲಿಮಠ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ, ಅಕ್ಕಿಆಲೂರ

    ಸಭೆ ಕರೆದು ಬಿಜೆಪಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ವಾಡಿಕೆ. ಹಿರಿಯ ಮುಖಂಡರು ಚುನಾವಣೆಯ ಆಂತರಿಕ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿ ಅಕ್ಕಿಆಲೂರ ಗ್ರಾ.ಪಂ.ನಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ.

    | ಸಿದ್ದಲಿಂಗೇಶ ತುಪ್ಪದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ, ಅಕ್ಕಿಆಲೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts