More

    ಅಣಬೆ ಕೃಷಿಗೆ ಜಿಲ್ಲೆಯಲ್ಲಿಲ್ಲ ಒಲವು

    ವಿಜಯವಾಣಿ ವಿಶೇಷ ಶಿರಸಿ

    ಸ್ವಸಹಾಯ ಗುಂಪುಗಳ ಬಲ ವೃದ್ಧಿಸಲು ಸರ್ಕಾರವು ನರೇಗಾ ಯೋಜನೆಯಡಿ ಅಣಬೆ ಕೃಷಿಗೆ ಒತ್ತು ನೀಡಿದ್ದು, ಅದಕ್ಕೆ ಪೂರಕ ‘ಮಶ್ರೂಮ್ ಶೆಡ್’ ನಿರ್ವಿುಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯ ವಾತಾವರಣ ಅಣಬೆ ಕೃಷಿಗೆ ಪೂರಕವಲ್ಲದ ಕಾರಣ ಈವರೆಗೂ ಯೋಜನೆಗೆ ಯಾವೊಂದು ಸ್ವಸಹಾಯ ಗುಂಪು ಸ್ಪಂದಿಸಿಲ್ಲ.

    ಗ್ರಾಮೀಣ ಭಾಗದಲ್ಲಿ ಪ್ರಸ್ತುತ ಹಪ್ಪಳ, ಸಂಡಿಗೆ, ದ್ವಿದಳ ಧಾನ್ಯಗಳ ಪ್ಯಾಕಿಂಗ್, ನ್ಯಾಪ್ಕಿನ್ ಸೇರಿ ವಿವಿಧ ಆರ್ಥಿಕ ಚಟುವಟಿಕೆಯ ಕಸುಬಿನಲ್ಲಿ ತೊಡಗಿರುವ ಸ್ವಸಹಾಯ ಸಂಘಗಳ ಸದಸ್ಯರನ್ನು ಅಣಬೆ ಕೃಷಿಯೆಡೆ ಸೆಳೆಯುವ ಮೂಲಕ ಸಂಘಗಳಿಗೆ ಆರ್ಥಿಕ ಬಲ ತುಂಬಲು ಯೋಜನೆ ಜಾರಿಯಾಗಿದೆ. ಅಣಬೆ ಬೆಳೆಯಲು ಪೂರಕವಾಗಿರುವ ಮಶ್ರೂಮ್ ಶೆಡ್ ಮಾಡಿಕೊಳ್ಳಲು ಅವಕಾಶ ನೀಡಿದೆ. ಆದರೆ, ಜಿಲ್ಲೆಯ ವಾತಾವರಣವು ಅಣಬೆ ಬೆಳೆಯಲು ಪೂರಕವಲ್ಲದ ಕಾರಣ ಯಾರು ಕೂಡ ಇದರತ್ತ ಒಲವು ತೋರಿಲ್ಲ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯೋಜನೆಯ ಬಗ್ಗೆ ತಿಳಿಸಿದರೂ ಆಸಕ್ತಿ ತೋರುತ್ತಿಲ್ಲ. ಇದು ಯೋಜನೆಯ ಹಿನ್ನಡೆಗೆ ಕಾರಣವಾಗಿದೆ.

    ಒಂದು ಶೆಡ್​ಗೆ 95 ಸಾವಿರ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ (ಎನ್​ಆರ್​ಎಲ್​ಎಂ) ಹಾಗೂ ನರೇಗಾದಡಿ ಸ್ವಸಹಾಯ ಗುಂಪುಗಳಿಗೆ ಆದ್ಯತೆ ಮೇರೆಗೆ ಈ ಕಾಮಗಾರಿ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಈ ಕುರಿತು ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚನೆ ನೀಡಲಾಗಿದ್ದು, ತಾಂತ್ರಿಕ ಸಹಾಯಕರು, ತೋಟಗಾರಿಕೆ ಇಲಾಖೆಯವರಿಂದ ಗ್ರಾಮ ಪಂಚಾಯಿತಿವಾರು ಗುರಿ ನಿಗದಿ ಮಾಡಲು ಸೂಚಿಸಲಾಗಿದೆ. ಯೋಜನೆಯಡಿ ಶೆಡ್​ಗಾಗಿ 95 ಸಾವಿರ ರೂಪಾಯಿ ನೀಡಲಾಗುತ್ತದೆ ಎಂದು ಪ್ರಚಾರ ಕೂಡ ಮಾಡಲಾಗಿದೆ. ಆದರೆ, ಈವರೆಗೂ ಯಾರೂ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿಲ್ಲ. ಇಲಾಖೆ ಬಾಗಿಲಿಗೆ ಬಂದು ಶೆಡ್ ನಿರ್ವಿುಸುವುದಾಗಿ ತಿಳಿಸಿಲ್ಲ. ಹೀಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಯೋಜನೆ ಅನುಷ್ಠಾನದಲ್ಲಿ ಮಂಕಾಗಿದ್ದಾರೆ.

    ಗ್ರೀನಿಂಗ್ ಫಂಗಸ್: ಗ್ರಾಮೀಣ ಭಾಗದಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಇದೊಂದು ಉತ್ತಮ ಅವಕಾಶ. ಪೌಷ್ಟಿಕಾಂಶವುಳ್ಳ ಅಣಬೆಯನ್ನು ಬೆಳೆಯುವುದರ ಮೂಲಕ ಹೆಚ್ಚಿನ ಲಾಭ ಪಡೆಯಲು ಸಹಾಯ ಆಗಲಿದೆ. ಅಣಬೆ ಬೇಡಿಕೆಯ ಪದಾರ್ಥವಾಗಿದ್ದು, ಶೆಡ್ ನಿರ್ವಣಕ್ಕೆ ಸರ್ಕಾರ ಸಹಾಯಧನ ನೀಡುವ ಮೂಲಕ ಹೆಚ್ಚಿನ ಜನರು ಇದರಲ್ಲಿ ಉದ್ಯೋಗ ಕಂಡುಕೊಳ್ಳಲು ಈ ಯೋಜನೆ ಸಹಕಾರಿಯಾಗಲಿದೆ ಎಂಬುದು ಸರ್ಕಾರದ ಲೆಕ್ಕಾಚಾರ. ಆದರೆ, ವಾಸ್ತವದಲ್ಲಿ ಮಲೆನಾಡು ಜಿಲ್ಲೆಗಳಲ್ಲಿ ಅಣಬೆ ಬೆಳೆಗೆ ಗ್ರೀನಿಂಗ್ ಫಂಗಸ್ ಕಾಟದ ಕಾರಣ ಹೆಚ್ಚಿನವರು ಈ ಕೃಷಿಯಿಂದ ವಿಮುಖರಾಗಿದ್ದಾರೆ. ಜತೆಗೆ ಮಾರುಕಟ್ಟೆ ವ್ಯವಸ್ಥಿತವಾಗಿ ಇರದೆ ಹಲವು ರೈತರು ಕೈಸುಟ್ಟುಕೊಂಡಿದ್ದಾರೆ. ಇದೇ ಕಾರಣಕ್ಕೆ ಇದೀಗ ಶೆಡ್ ನಿರ್ವಿುಸಿಕೊಳ್ಳಲು ಯಾರೂ ಆಸಕ್ತಿ ತೋರುತ್ತಿಲ್ಲ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

    ಒಕ್ಕೂಟದಿಂದ ನಿರ್ವಹಣೆ: ಸ್ವಸಹಾಯ ಗುಂಪುಗಳಲ್ಲಿರುವ ಆಸಕ್ತ ಮಹಿಳೆಯರನ್ನು ಒಕ್ಕೂಟದಿಂದಲೇ ಆಯ್ಕೆ ಮಾಡಿಕೊಂಡು ಉದ್ಯಮಶೀಲತಾ ಜಾಗೃತಿ ಹಾಗೂ ಅಭಿವೃದ್ಧಿ ತರಬೇತಿ ಮೂಲಕ ಇದಕ್ಕೆ ಪ್ರೇರಣೆ ನೀಡಲಾಗುತ್ತದೆ. ಅಣಬೆ ಬೆಳೆದ ನಂತರ ಮಾಲ್, ಹೋಟೆಲ್ ಮತ್ತಿತರ ಕಡೆ ಮಾರುಕಟ್ಟೆ ಸಹ ಒಕ್ಕೂಟದಿಂದಲೇ ನಿರ್ವಹಿಸುವ ಗುರಿ ಹೊಂದಲಾಗಿದೆ. ಆಸಕ್ತರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಇದು ಸಮುದಾಯಧಾರಿತ ಕಾರ್ಯಕ್ರಮವಾಗಿದೆ ಎಂಬುದು ತಾಪಂ ಅಧಿಕಾರಿಗಳ ಸಲಹೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಜನರು ಅಣಬೆ ಕೃಷಿ ಮಾಡಿದ್ದಾರೆ. ಕೆಲವೇ ಮಂದಿ ಅಣಬೆ ಕೃಷಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇಲ್ಲಿನ ವಾತಾವರಣವು ಅಣಬೆಗೆ ಪೂರಕವಾಗಿಲ್ಲ. ಹೀಗಾಗಿ ಈ ಭಾಗದಲ್ಲಿ ಅಣಬೆ ಕೃಷಿಗೆ ಆಸಕ್ತಿ ಕಡಿಮೆ. ಜತೆಗೆ ಫಂಗಸ್ ಕಾಟವು ಹೆಚ್ಚಾಗಿದ್ದು, ಯಾರು ಕೂಡ ಈ ಕೃಷಿ ಮಾಡಲು ಮುಂದೆ ಬರುತ್ತಿಲ್ಲ.

    | ಸತೀಶ ಹೆಗಡೆ

    ತೋಟಗಾರಿಕಾ ಇಲಾಖೆ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts