More

    ಅಗಲಿದ ಯೋಧನಿಗೆ ಭಾವಪೂರ್ಣ ವಿದಾಯ

    ಕಮಲನಗರ: ಜಮ್ಮು ಕಾಶ್ಮೀರದ ಗುರೇಜ್ ಕಣಿವೆಯಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟಿದ್ದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಯೋಧ ರಾಮದಾಸ್ ಧನರಾಜ ಚಂದಾಪುರೆ (35) ಅಂತ್ಯಸಂಸ್ಕಾರ ಸ್ವಗ್ರಾಮ ಬೇಡಕುಂದಾದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.

    ಭಾರತ ಮಾತಾಕಿ ಜೈ, ವಂದೇ ಮಾತರಂ, ಅಮರ್ ರಹೆ ಅಮರ್ ರಹೆ-ರಾಮದಾಸ್ ಅಮರ್ ರಹೆ ಘೋಷಣೆಗಳು ಮೊಳಗಿಸಿದ ಸಹಸ್ರಾರು ಜನರು, ಅಶ್ರುತರ್ಪಣದ ಮಧ್ಯೆ ಯೋಧನಿಗೆ ಭಾವಪೂರ್ಣ ವಿದಾಯ ಹೇಳಿದರು. ಜಿಲ್ಲಾ ಸಶಸ್ತ್ರ ಪಡೆಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಅಂತಿಮ ಗೌರವ ಸಲ್ಲಿಸಲಾಯಿತು.

    ಯೋಧನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ನಂತರ ಅಲಂಕೃತ ವಾಹನದಲ್ಲಿ ಪಾರ್ಥಿವ ಶರೀರದೊಂದಿಗೆ ಊರಿನ ಪ್ರಮುಖ ಬೀದಿಯಲ್ಲಿ ಅಂತಿಮಯಾತ್ರೆ ನಡೆಸಿ ಹೊರವಲಯದಲ್ಲಿರುವ ಅವರ ಹೊಲದಲ್ಲಿ ಅಂತ್ಯಕ್ರಿಯೆ ನಡೆಯಿತು. ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮುಟ್ಟಿತ್ತು.

    ಕ್ಷೇತ್ರದ ಶಾಸಕರೂ ಆದ ಪಶು ಸಂಗೋಪನೆ ಸಚಿವ ಚವ್ಹಾಣ್ ರಾಜ್ಯ ಸರ್ಕಾರದ ಪರವಾಗಿ ಪಾರ್ಥಿವ ಶರೀರಕ್ಕೆ ಹೂಗುಚ್ಛ ಇರಿಸಿ ನಮನ ಸಲ್ಲಿಸಿದರು. ಗೋವಾ ಮತ್ತು ಕರ್ನಾಟಕ ಎನ್ಸಿಸಿ ಆಫೀಸರ್ ಬಿ.ಸಿಂಗ್, ದಕ್ಷಿಣ ಭಾರತದ ಜನರಲ್ ಆಫೀಸರ್ ಇನ್ ಕಮಾಂಡೆಂಟ್ ಉತ್ತಮಕುಮಾರ ಸರಫ್, ವಿವೇಕಕುಮಾರ ಹಾಗೂ ಸೇನೆ ಅಕಾರಿಗಳು, ತಹಸೀಲ್ದಾರ್ ರಮೇಶ ಪೆದ್ದೆ, ತಾಪಂ ಇಒ ಸೈಯದ್ ಫಜಲ್, ಸಿಪಿಐ ರಾಮಪ್ಪ ಸಾವಳಗಿ, ಪಿಎಸ್ಐಗಳಾದ ಚಂದ್ರಶೇಖರ ನಿರ್ಣೆ, ನಂದಿನಿ ಪಾಲ್ಗೊಂಡಿದ್ದರು.ರಾಮದಾಸ್ ಚಂದಾಪುರೆ ಕಾಶ್ಮೀರದ ಗುರೇಜ್ ಪ್ರದೇಶದ 36 ಆರ್ ಆರ್ ಘಟಕದಲ್ಲಿ ಗಸ್ತು ಕಾವಲು ಪಡೆ ಹವಾಲ್ದಾರ್ ಆಗಿದ್ದರು. ರಜೆ ಮೇಲೆ ಇದ್ದ ಅವರು ವಾರದ ಹಿಂದಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು.

    ಸ್ಮಾರಕ ನಿರ್ಮಾಣಕ್ಕೆ ಅಗತ್ಯ ನೆರವು

    ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಸಚಿವ ಪ್ರಭು ಚವ್ಹಾಣ್, ಯೋಧನ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸರ್ಕಾರ ನಿಮ್ಮೊಂದಿಗಿದೆ. ಕಾನೂನಾತ್ಮಕವಾಗಿ ಸಿಗಬೇಕಾದ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿಕೊಡಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಯೋಧನ ಪುತ್ರಿ ಜೀವಂತಿಕಾಗೆ ವೈಯಕ್ತಿಕ ಧನಸಹಾಯ ಮಾಡಿದ ಸಚಿವರು, ಶಿಕ್ಷಣಕ್ಕೆ ಬೇಕಿರುವ ಅಗತ್ಯ ನೆರವು ನೀಡಲಾಗುವುದು ಎಂದರು. ಯೋಧ ರಾಮದಾಸ್ ಸ್ಮಾರಕ ನಿರ್ಮಿಸಬೇಕೆಂಬ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಚವ್ಹಾಣ್, ನಿವೇಶನ ನೀಡಿದಲ್ಲಿ ಸ್ಮಾರಕ ನಿರ್ಮಿಸಲು ಅಗತ್ಯ ಧನಸಹಾಯದ ಮಾಡುವುದಾಗಿ ಹೇಳಿದರು. ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಸಚಿನ್ ರಾಠೋಡ್, ಗಿರೀಶ್ ವಡೆಯರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts